ವಿವಿಧ ರಾಜ್ಯಗಳಲ್ಲಿ ಭಾರಿ ಮಳೆ, ಚಂಡಮಾರುತದ ಎಚ್ಚರಿಕೆ
ಬೆಂಗಳೂರು, ಜೂನ್ 4: ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ದೇಶದ ವಿವಿಧ ಭಾಗಗಳಲ್ಲಿ ಭಾರಿ ಮಳೆ ಮತ್ತು ಚಂಡಮಾರುತದ ಎಚ್ಚರಿಕೆ ನೀಡಿದೆ.

'ಕರ್ನಾಟಕ ಒಳನಾಡು, ಆಂಧ್ರಪ್ರದೇಶದ ಕರಾವಳಿ, ತೆಲಂಗಾಣ, ತಮಿಳುನಾಡು, ಕೇಂದ್ರ ಮಹಾರಾಷ್ಟ್ರ, ಕೊಂಕಣ ಮತ್ತು ಗೋವಾ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಜಾರ್ಖಂಡ್, ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸಗಡ ಮತ್ತು ವಿದರ್ಭಗಳ ವಿವಿಧ ಭಾಗಗಳಲ್ಲಿ ಬಿರುಗಾಳಿ, ಸಿಡಿಲು ಸಹಿತ ಭಾರಿ ಮಳೆಯಾಗಲಿದೆ' ಎಂದು ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ತ್ರಿಪುರಾ, ರಾಯಲಸೀಮೆ, ಕೇರಳಗಳಲ್ಲಿಯೂ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಕೆ ನೀಡಿದೆ.

ಭಾರತ, ಅರೇಬಿಯನ್ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಮೇಲ್ಭಾಗದ ವಿವಿಧೆಡೆ ಮೋಡ ಆವರಿಸಿರುವ ಉಪಗ್ರಹ ಚಿತ್ರವನ್ನು ಹವಾಮಾನ ಇಲಾಖೆ ಬಿಡುಗಡೆ ಮಾಡಿದೆ.
ಉತ್ತರ ಮತ್ತು ಕೇಂದ್ರ ಭಾಗಗಳಲ್ಲಿ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಬಿಸಿ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಈ ಮುಂಚೆ ತಿಳಿಸಿತ್ತು.
ಹವಾಮಾನ ಇಲಾಖೆಯ ವರದಿ ಪ್ರಕಾರ ದೇಶದ ಕೇಂದ್ರ ಭಾಗದಲ್ಲಿ ಈ ಬಾರಿ ಸಾಮಾನ್ಯ ಮಳೆಯಾಗಲಿದೆ. ಆದರೆ, ದಕ್ಷಿಣದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಪುದುಚೆರಿಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಅದು ತಿಳಿಸಿದೆ.
ಈಶಾನ್ಯ ಭಾಗದಲ್ಲಿಯೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ.
ದೀರ್ಘಾವಧಿ ಸರಾಸರಿಯಲ್ಲಿ (ಎಲ್‌ಪಿಎ) ದೇಶದಲ್ಲಿ ಜುಲೈ ತಿಂಗಳಿನಲ್ಲಿ ಶೇ 101ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ ತಿಂಗಳಿನಲ್ಲಿ ಶೇ 9ರ ವ್ಯತ್ಯಾಸದಲ್ಲಿ ಶೇ 94ರಷ್ಟು ಎಲ್‌ಪಿಎ ನಿರೀಕ್ಷಿಸಲಾಗಿದೆ.

ಉಪಖಂಡ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಆಸ್ಟ್ರೇಲಿಯಾದವರೆಗಿನ ಹವಾಮಾನ ಸ್ಥಿತಿಯ ಕುರಿತು ಐಎಂಡಿಯ ಉಪಗ್ರಹ ಚಿತ್ರ
ಎಲ್‌ಪಿಎಯ ಶೇ 90-96ರವರೆಗಿನ ಮಳೆಯನ್ನು ಸಾಮಾನ್ಯಕ್ಕಿಂತ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಶೇ 96-104ರ ವರೆಗಿನ ಎಲ್‌ಪಿಎಯನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ.
ಶೇ 90ಕ್ಕಿಂತ ಕಡಿಮೆ ಮಳೆಯಾದರೆ ಅದನ್ನು ಎಲ್‌ಪಿಎಯಲ್ಲಿ ಮಳೆಯ ಕೊರತೆ ಎಂದು, ಶೇ 104-110ರ ನಡುವಣ ಮಳೆ ಪ್ರಮಾಣವನ್ನು ಸಾಮಾನ್ಯಕ್ಕಿಂತ ಅಧಿಕ ಹಾಗೂ ಶೇ 110ಕ್ಕಿಂತ ಹೆಚ್ಚಿನ ಮಳೆ ಪ್ರಮಾಣವನ್ನು ಅತ್ಯಧಿಕ ಮಳೆ ಎಂದು ಪರಿಗಣಿಸಲಾಗುತ್ತದೆ.












Click it and Unblock the Notifications