IMD Forecast: ನೈಋತ್ಯ ಮಾನ್ಸೂನ್ ಎಂಟ್ರಿ: ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರೀ ಮಳೆ, ಐಎಂಡಿ ಆರೆಂಜ್ - ಯೆಲ್ಲೋ ಅಲರ್ಟ್
ಕೇರಳ ರಾಜ್ಯಕ್ಕೆ ಮಾನ್ಸೂನ್ ಪ್ರವೇಶವಾಗಿದ್ದು, ಇದರೊಂದಿಗೆ ಕೇರಳ - ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಶುಕ್ರವಾರ ದೇಶದ ವಿವಿಧ ಭಾಗಗಳಲ್ಲಿ ಮಿಂಚು - ಗುಡುಗು ಸಹಿತ ವ್ಯಾಪಕ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಮುನ್ಸೂಚನೆ ನೀಡಿದೆ. ಕೆಲವು ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗುರುವಾರ ನೈಋತ್ಯ ಮಾನ್ಸೂನ್ ಪ್ರಾರಂಭವಾದ ಬೆನ್ನಲ್ಲೇ ಕೇರಳದಾದ್ಯಂತ ಭಾರೀ ಮಳೆಯಾಗಿದ್ದು, ಲಕ್ಷದ್ವೀಪ ದ್ವೀಪ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವಾರ ರಾಜ್ಯಾದ್ಯಂತ ಮತ್ತು ಲಕ್ಷದ್ವೀಪದಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜೂನ್ 5ರ ಶುಕ್ರವಾರ ಮಿಂಚು ಮತ್ತು ಗುಡುಗು ಸಹಿತ ಮಳೆ, ಬಿರುಗಾಳಿ ಬೀಸಲಿದೆ ಎಂದು ಹೇಳಲಾಗಿದೆ.
ಮುಂದಿನ 2-3 ದಿನಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಬಂಗಾಳಕೊಲ್ಲಿ ಮತ್ತು ಈಶಾನ್ಯ ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ. ಮುಂದಿನ ವಾರದಲ್ಲಿ ನೈಋತ್ಯ ಮಾನ್ಸೂನ್ ಕರ್ನಾಟಕ ಪ್ರವೇಶಿಸುವ ಸಾಧ್ಯತೆ ಇದೆ ಎಂದು ನೈಋತ್ಯ ಮಾನ್ಸೂನ್ ಬಲಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ.

ಭಾರತದಾದ್ಯಂತ ಜೂನ್ 5ರ ಶುಕ್ರವಾರದ ಹವಾಮಾನ ಹೇಗಿದೆ
ದಕ್ಷಿಣ ಭಾರತದಲ್ಲಿ ಮಳೆಯಾಗುತ್ತಿದ್ದರೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಅಲ್ಪ ಬಿಸಿಲು ಇದೆ. ಇನ್ನು ದೆಹಲಿ, ಪಂಜಾಬ್, ಪೂರ್ವ ಮತ್ತು ಪಶ್ಚಿಮ ಉತ್ತರ ಪ್ರದೇಶ, ಚಂಡೀಗಢ, ಹರಿಯಾಣ, ಪೂರ್ವ ಮತ್ತು ಪಶ್ಚಿಮ ರಾಜಸ್ಥಾನಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಮಿಂಚು - ಗುಡುಗು ಸಹಿತ ಮಳೆ ಆಗಲಿದೆ. ಅಲ್ಲದೆ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ತಿಳಿಸಿದೆ.
ಜಮ್ಮು-ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿ ಹವಾಮಾನ ಪರಿಸ್ಥಿತಿ ಮುಂದುವರಿಯಲಿದೆ. ಜೊತೆಗೆ ಆಲಿಕಲ್ಲು ಮಳೆಯು ಆಗಲಿದೆ. ಅಲ್ಲದೆ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಉತ್ತರಾಖಂಡದಲ್ಲಿಯೂ ಪ್ರತ್ಯೇಕ ಪ್ರದೇಶಗಳಲ್ಲಿ ಮಳೆ ಆಗಲಿದೆ. ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಸಿಕ್ಕಿಂ, ಪೂರ್ವ ಮತ್ತು ಪಶ್ಚಿಮ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ವಿದರ್ಭ ಪ್ರದೇಶಗಳಲ್ಲಿ ಜೂನ್ 5ರ ಶುಕ್ರವಾರ ಭಾರೀ ಮಳೆ ಆಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಈ ಹವಾಮಾನ ಪರಿಸ್ಥಿತಿಯು ಜೂನ್ 10 ರವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ.
ದಕ್ಷಿಣ ಭಾರತದಲ್ಲಿ ಹೇಗಿದೆ
ಇಂದು ದಕ್ಷಿಣ ಭಾರತದ ವಿವಿಧ ಭಾಗಗಳಲ್ಲೂ ಮಳೆ ಆಗಲಿದೆ. ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ. ಕರ್ನಾಟಕದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡು, ಆಂಧ್ರಪ್ರದೇಶದ ಕರಾವಳಿ, ಯಾಣಂ, ತಮಿಳುನಾಡು, ಪುದುಚೇರಿ, ಕಾರೈಕಲ್, ತೆಲಂಗಾಣ ಹಾಗೂ ರಾಯಲಸೀಮಾದಲ್ಲಿ ಶುಕ್ರವಾರ ಮಿಂಚು - ಗುಡುಗು ಸಹಿತ ಮಳೆ ಆಗಲಿದೆ. ಅಲ್ಲದೆ ಬಿರುಗಾಳಿಯೊಂದಿಗೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲೂ ಮಳೆ ಮುಂದುವರಿದಿದ್ದು, ಜೂನ್ 10ರ ವರೆಗೆ ಭಾರೀ ಮಳೆ ಆಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಇನ್ನು ಈಶಾನ್ಯ ಭಾರತದ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ವ್ಯಾಪಕ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಜೂನ್ 10 ರವರೆಗೆ ಈ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯದಲ್ಲಿ ಇಂದು ಪ್ರತ್ಯೇಕ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ.












Click it and Unblock the Notifications