ಅಗಲೇ ಸಾಲ್ ಫಿರ್ ಆವೂಂಗಾ: ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ- ಗೆಲುವು ಸುಲಭವೇ?
ನವದೆಹಲಿ, ಆಗಸ್ಟ್ 15: ಸ್ವಾತಂತ್ರ್ಯ ದಿನದ ಅಂಗವಾಗಿ ಪ್ರಧಾನಿ ಮೋದಿ ಅವರು ದೇಶದ ಜನರನ್ನು ಉದ್ದೇಶಿಸಿ ದೆಹಲಿ ಕೆಂಪುಕೋಟೆಯಲ್ಲಿಂದು ಮಾತನಾಡಿದರು. ಈ ಸಂದರ್ಭದಲ್ಲಿ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಜನರ ಆಶೀರ್ವಾದ ಇದ್ದರೆ ಮುಂದಿನ ವರ್ಷ ಪ್ರಧಾನಿಯಾಗಿ ಮರಳುತ್ತೇನೆ ಎಂಬ ವಿಶ್ವಾಸವನ್ನೂ ಮೋದಿ ವ್ಯಕ್ತಪಡಿಸಿದರು.
ನಮ್ಮ ಸರ್ಕಾರದ ಟ್ರ್ಯಾಕ್ ರೆಕಾರ್ಡ್ ತುಂಬಾ ಚೆನ್ನಾಗಿದೆ. ಜನರನ್ನು ಸಬಲೀಕರಣಗೊಳಿಸಲು ಮತ್ತು ರಾಷ್ಟ್ರವನ್ನು ಅಭಿವೃದ್ಧಿಪಡಿಸಲು ಮಾಡಿದ ವಿವಿಧ ಪ್ರಯತ್ನಗಳು ಸಫಲವಾಗಿವೆ ಎಂದು ಮೋದಿ ಅಭಿಪ್ರಾಯಪಟ್ಟರು.

ಮುಂದಿನ ಐದು ವರ್ಷಗಳಲ್ಲಿ ಭಾರತ ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆ ಶಕ್ತಿಯಾಗಿ ಹೊರಹೊಮ್ಮಲಿದೆ. ಇದು 'ಮೋದಿ ಭರವಸೆ' ಎಂದು ಅವರು ತಿಳಿಸಿದರು.
ಮುಂದಿನ ಐದು ವರ್ಷಗಳಲ್ಲಿ ದೇಶವು ಅಭೂತಪೂರ್ವ ಅಭಿವೃದ್ಧಿಯನ್ನು ಕಾಣಲಿದೆ. 2047ರ ಕನಸನ್ನು ನನಸಾಗಿಸುವಲ್ಲಿ ಮುಂದಿನ ಐದು ವರ್ಷಗಳು ಪ್ರಮುಖವಾಗಿವೆ. ಮುಂದಿನ ಬಾರಿ, ಆಗಸ್ಟ್ 15 ರಂದು, ನಾನು ಈ ಕೆಂಪು ಕೋಟೆಯಿಂದ ದೇಶದ ಸಾಧನೆಗಳು ಮತ್ತು ಬೆಳವಣಿಗೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
2024 ರಲ್ಲಿ ಗೆಲ್ಲುವ ವಿಶ್ವಾಸ
ಈ ಮಾತುಗಳನ್ನು ಆಡುವ ಮೂಲಕ ಪ್ರಧಾನಿ ಮೋದಿ ಅವರು ಮತ್ತೆ ಪ್ರಧಾನಿಯಾಗಿ ಮರಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 2024 ರ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿರುವುದು ನಿಶ್ಚಿತವೆಂಬ ಸಂದೇಶವನ್ನು ಅವರು ರವಾನಿಸಿದ್ದಾರೆ. 2014 ರಲ್ಲಿ ಪ್ರಧಾನಿಯಾಗಿ ಅಧಿಕಾರದ ಗದ್ದುಗೆ ಹಿಡಿದಿರುವ ಮೋದಿ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಒಂದು ವೇಳೆ, ಮುಂದಿನ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದರೆ ಹ್ಯಾಟ್ರಿಕ್ ಸಾಧನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಮೋದಿ ಕೈಯಲ್ಲಿದೆ ಹಿಂದೂ ನ್ಯಾಷನಲಿಸಂ ಅಸ್ತ್ರ
ಪ್ರಧಾನಿ ಮೋದಿ ಅವರು ಹಿಂದೂ ರಾಷ್ಟ್ರವಾದದ ಅಸ್ತ್ರವನ್ನು ಪ್ರಯೋಗಿಸಿ ಅಧಿಕಾರಕ್ಕೆ ಬಂದವರು. ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಸೈದ್ದಾಂತಿಕ ಹಿನ್ನೆಲೆಯಿಂದ ಬಂದ ಮೋದಿ ಅಪಾರ ಜನಪ್ರಿಯತೆಯನ್ನು ಹೊಂದಿದವರು. ಹಿಂದೂ ರಾಷ್ಟ್ರವಾದಿಗಳ ಅತ್ಯುನ್ನತ ನಾಯಕನಾಗಿ ಮೋದಿ ಬೆಳೆದಿದ್ದಾರೆ. ಮುಂದಿನ ಚುನಾವಣೆಯಲ್ಲಿಯೂ ಹಿಂದೂ ರಾಷ್ಟ್ರವಾದ ಹಾಗೂ ಮೋದಿ ವರ್ಚಸ್ಸನ್ನು ಪ್ರಯೋಗಿಸಿ ಅಧಿಕಾರ ಹಿಡಿಯಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಆದರೆ, ಇದು ಮುಂದಿನ ಚುನಾವಣೆಯಲ್ಲಿ ಕೆಲಸ ಮಾಡಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.
ಮೋದಿ ವೇಗಕ್ಕೆ 'ಇಂಡಿಯಾ' ತಡೆ
ಪ್ರಧಾನಿ ಮೋದಿ ಅವರು ಮುಂದಿನ ವರ್ಷ ಮತ್ತೆ ಪ್ರಧಾನಿ ಆಗುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ, ವಿಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಪ್ರಧಾನಿ ಮೋದಿ ಅವರನ್ನು ಸೋಲಿಸಲು ಶತಾಯುಗತಾಯ ಪ್ರಯತ್ನ ಮಾಡುತ್ತಿವೆ. ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ( I.N.D.I.A ) ಎಂದು ಹೆಸರಿಡಲಾಗಿದೆ. ಈಗಾಗಲೇ ಎರಡು ಬಾರಿ ಸಭೆ ನಡೆಸಿರುವ ಮೈತ್ರಿಕೂಟ ಬಿಜೆಪಿ ಆಡಳಿತದಲ್ಲಿವನ್ನು ಕಿತ್ತೊಗೆಯುವ ಭರವಸೆಯನ್ನು ವ್ಯಕ್ತಪಡಿಸಿದೆ.

ಕರ್ನಾಟಕ ಚುನಾವಣೆ ಫಲಿತಾಂಶದಿಂದ ಪುಟಿದೆದ್ದ ವಿಪಕ್ಷಗಳು
ಕರ್ನಾಟಕ ಚುನಾವಣೆ ಫಲಿತಾಂಶವು ವಿಪಕ್ಷಗಳಿಗೆ ಭಾರೀ ಉತ್ಸಾಹವನ್ನು ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಭ್ರಷ್ಟಾಚಾರ ಹಾಗೂ ಹಣದುಬ್ಬರಗಳಂತ ಜ್ವಲಂತ ಸಮಸ್ಯೆಗಳು ಬಳಸಿಕೊಂಡ ಕಾಂಗ್ರೆಸ್ ಬಿಜೆಪಿಯನ್ನು ಕರ್ನಾಟಕದಲ್ಲಿ ಹಣಿಯಲು ಯಶಸ್ವಿಯಾಗಿತು. ಉಚಿತ ಕೊಡುಗೆ ಘೋಷಣೆಗಳು ಮಹಿಳೆಯರನ್ನು ಆಕರ್ಷಿಸುವಲ್ಲಿ ಕೆಲಸ ಮಾಡಿತು. ಇದು ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾಯಿತು ಎಂದು ತಜ್ಞರು ಹೇಳುತ್ತಾರೆ. ಇನ್ನೊಂದು ಕಡೆಗೆ ಪ್ರಧಾನಿ ಮೋದಿ ಅವರ ವರ್ಚಸ್ಸು ಕುಸಿಯುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಮುಂದಿನ ಲೋಕಸಭೆ ಚುನಾವಣೆ ಫಲಿತಾಂಶ ಯಾರ ಪರ ಇರಲಿದೆ ಎಂಬುದೀಗ ಕುತೂಹಲ ಕೆರಳಿಸಿದೆ.












Click it and Unblock the Notifications