ಪಿಎನ್ ಬಿ ಹಗರಣದ ಬಗ್ಗೆ ಮಾತನಾಡಲು ಮೋದಿಗೆ ಸಮಯವಿಲ್ಲ: ರಾಹುಲ್ ಕಿಡಿ
ನವದೆಹಲಿ, ಫೆಬ್ರವರಿ 19: ರೂ. 11,400 ಕೋಟಿ ಮೊತ್ತದ 'ಪಿಎನ್ ಬಿ' ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪ್ರಕ್ಷಗಳು ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಮೇಲಿನ ತಮ್ಮ ದಾಳಿಯನ್ನು ತೀವ್ರಗೊಳಿಸಿದ್ದಾರೆ.
ಜ್ಯುವೆಲ್ಲರಿ ಉದ್ಯಮಿ ನೀರವ್ ಮೋದಿ ಪಾತ್ರವಿರುವ ಈ ಹಗರಣದ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಹೊರಬೇಕು ಮತ್ತು ಈ ಬಗ್ಗೆ ಅವರು ಬಾಯಿಬಿಡಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅಪನಗದೀಕರಣ ಮಾಡಲು ನೀರವ್ ಮೋದಿ ಹಗರಣವೇ ಪ್ರಮುಖ ಕಾರಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದ್ದಾರೆ.

"2 ಗಂಟೆಗಳ ಕಾಲ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಹೇಗೆ ಎಂದು ಪ್ರಧಾನಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಆದರೆ 22,000 ಕೋಟಿ ರೂಪಾಯಿಗಳ ಬ್ಯಾಂಕಿಂಗ್ ಹಗರಣದ ಬಗ್ಗೆ ಒಂದೂ ಮಾತು ಆಡುವುದಿಲ್ಲ. ಮಿಸ್ಟರ್ ಜೇಟ್ಲಿ ಅಡಗಿಕೊಂಡಿದ್ದಾರೆ. ಕಳ್ಳರ ಹಾಗೆ ನಡೆದುಕೊಳ್ಳಬೇಡಿ. ಮಾತಾಡಿ," ಎಂದು ಅವರು ಟ್ಟೀಟ್ ಮಾಡಿದ್ದಾರೆ.
ಉನ್ನತ ಮಟ್ಟದ ಸಹಾಯವಿಲ್ಲದೆ ಇಂಥಹ ಹಗರಣ ನಡೆಯಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಈ ಹಗರಣ ಆರಂಭವಾಗಿದ್ದು ಬಿಜೆಪಿ ಕಾಲದಲ್ಲಿ ಎಂದು ಹೇಳಿದೆ. ಆದರೆ ಶೇಕಡಾ 90 ಹಣ ವರ್ಗಾವಣೆಯಾಗಿದ್ದು ಮೋದಿ ಕಾಲದಲ್ಲಿ. ಅವರು ಈ ಬಗ್ಗೆ ಉತ್ತರ ನೀಡಲೇಬೇಕು ಎಂದು ಕಾಂಗ್ರೆಸಿಗರು ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ ಇದೊಂದು ಸಣ್ಣ ಹಗರಣವಷ್ಟೇ. ದೊಡ್ಡ ದೊಡ್ಡ ಹಗರಣಗಳನ್ನೆಲ್ಲಾ ಅಪನಗದೀಕರಣದ ಸಮಯದಲ್ಲೇ ಮುಚ್ಚಿ ಹಾಕಲಾಗಿದೆ ಎಂದಿದ್ದಾರೆ.
"ಅಪನಗದೀಕರಣದ ಸಮಯದಲ್ಲೇ ದೊಡ್ಡ ದೊಡ್ಡ ಬ್ಯಾಂಕಿಂಗ್ ಹಗರಣಗಳು ನಡೆದಿವೆ. ಪ್ರಮುಖ ಬ್ಯಾಂಕ್ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಬದಲಾಯಿಸಲಾಗಿದೆ. ಅಲ್ಲಿಗೆ ಯಾರನ್ನು ನೇಮಿಸಲಾಗಿದೆ? ಹಗರಣದಲ್ಲಿ ಇನ್ನೂ ಹೆಚ್ಚಿನ ಬ್ಯಾಂಕ್ ಗಳು ಪಾಲ್ಗೊಂಡಿವೆ. ಸಂಪೂರ್ಣ ಸತ್ಯ ಹೊರಬರಲೇಬೇಕು," ಎಂದು ಅವರೂ ಟ್ಟೀಟ್ ಮಾಡಿದ್ದಾರೆ.












Click it and Unblock the Notifications