ನೆಹರೂ ಕಾಲದ 'ಆಯೋಗ' ಕ್ಕೆ ಹೊಸ ಹೆಸರಿಟ್ಟ ಮೋದಿ
ನವದೆಹಲಿ, ಜ.1: ಕಾಂಗ್ರೆಸ್ ಪಕ್ಷದ ವಿರೋಧದ ನಡುವೆಯೂ ಮಾಜಿ ಪ್ರಧಾನಿ ದಿವಂಗತ ನೆಹರೂ ಅವರು ಹುಟ್ಟು ಹಾಕಿದ್ದ ಯೋಜನಾ ಆಯೋಗದ ಸ್ವರೂಪವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೊನೆಗೂ ಬದಲಿಸಿದೆ. ಕಳೆದ ಎರಡು ತಿಂಗಳಿನಿಂದ ಈ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಯೋಜನಾ ಆಯೋಗ ಇನ್ಮುಂದೆ ನೀತಿ ಆಯೋಗ ಎಂದು ಕರೆಯಲ್ಪಡುತ್ತದೆ.
1950ರಲ್ಲಿ ಸ್ಥಾಪನೆಯಾದ ಯೋಜನಾ ಆಯೋಗದಲ್ಲಿ ಸಾಕಷ್ಟು ಬದಲಾವಣೆ ತರಲು ಮೋದಿ ಬಯಸಿದ್ದು, ಅದರಂತೆ, ಗುರುವಾರ ಹೊಸ ವರ್ಷದ ದಿನ ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬಿದ್ದಿದೆ. ಮೂರು ವಾರಗಳ ಕೆಳಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದ ಪ್ರಧಾನಿ ಮೋದಿ ಅವರು 'ನೀತಿ ಆಯೋಗ' ದ ಬಗ್ಗೆ ವಿವರಿಸಿದ್ದರು. ನಿರೀಕ್ಷೆಯಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಸುಮಾರು 64 ವರ್ಷ ಹಳೆಯ ಆಯೋಗಕ್ಕೆ ಹೊಸ ಸ್ಪರ್ಶ ನೀಡುವ ಸುಳಿವನ್ನು ಕಳೆದ ಸ್ವತಂತ್ರದಿನಾಚರಣೆಯಂದು ಪ್ರಧಾನಿ ಮೋದಿ ನೀಡಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಈ ಬದಲಾವಣೆ ಬಯಸಿದ್ದರು ಎಂದು ಮೋದಿ ಅವರು ಡಿ.7ರಂದು ಘೋಷಿಸಿ ಚರ್ಚೆ ಹುಟ್ಟು ಹಾಕಿದ್ದರು.
ದೇಶದ ಆರ್ಥಿಕತೆಯ ಮಾರ್ಗದರ್ಶಿಯಾಗಿರುವ ಈ ಆಯೋಗ ಜವಹಾರಲಾಲ್ ನೆಹರೂ ಅವರ ಕಲ್ಪನೆಯಾಗಿದ್ದು, ಕಾಂಗ್ರೆಸ್ ಇದರಲ್ಲಿ ಬದಲಾವಣೆ ತರಲು ಒಪ್ಪಿಲ್ಲ.ಅದರೆ, ದೇಶದ ಅನೇಕ ಕಾನೂನುಗಳಿಗೆ ತಿದ್ದುಪಡಿ ತರಲು ಹೊರಟಿರುವ ಮೋದಿ ಅವರು ಆಯೋಗಕ್ಕೆ ಹೊಸ ಸ್ವರೂಪ ನೀಡುವುದು ಖಚಿತವಾಗಿದೆ.
ನೀತಿ ಆಯೋಗ: ಪ್ರಧಾನ ಮಂತ್ರಿ ಅವರು ನೀತಿ ಆಯೋಗದ ಅಧ್ಯಕ್ಷರಾಗಲಿದ್ದಾರೆ. ಉಳಿದಂತೆ ಇದಕ್ಕೆ ವಿವಿಧ ಇಲಾಖೆಗಳನ್ನೊಳಗೊಂಡ ಹಿರಿಯ ಅಧಿಕಾರಿಗಳು ಸಮಿತಿಯ ಸದಸ್ಯರಾಗಲಿದ್ದಾರೆ. ಪ್ರಮುಖವಾಗಿ ನೀತಿ ಆಯೋಗ 4 ಇಲಾಖೆಗಳ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸಲಿದೆ. ಅಂತಾರಾಜ್ಯ ಸಭೆ, ನೇರ ಫಲಾನುಭವಿಗಳಿಗೆ ವರ್ಗಾವಣೆ(ಡಿಬಿಟಿ) ಯುಐಡಿಎಐ ಹಾಗೂ ಯೋಜನೆಗಳ ಮೌಲ್ಯಮಾಪನಗಳ ಘಟಕ ನೀತಿ ಆಯೋಗದ ಸುಪರ್ತಿಗೆ ಒಳಪಡಲಿದೆ. ಶೀಘ್ರದಲ್ಲೇ ನೀತಿ ಆಯೋಗದ ರೂಪುರೇಷೆಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಲಿದೆ.(ಏಜೆನ್ಸೀಸ್)












Click it and Unblock the Notifications