ಅಯೋಧ್ಯೆಯಲ್ಲಿ ಸಂವಿಧಾನ ಮೂಲ ಪ್ರತಿಯ ಮಾದರಿ ಪ್ರತಿಮೆ ಅನಾವರಣ: ಮೋಹನ್ ಭಾಗವತ್
ನಾಗಪುರ, ಅಕ್ಟೋಬರ್ 24: ಸಂವಿಧಾನದ ಮೂಲ ಪ್ರತಿಯ ಹಿಂಭಾಗದಲ್ಲಿರುವ ಚಿತ್ರದ ಮಾದರಿಯ ಧರ್ಮದ ಮೂರ್ತಿವೆತ್ತ ಪ್ರತೀಕವಾದ ಶ್ರೀರಾಮನ ಬಾಲಕ ರೂಪದ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ವಿಜಯದಶಮಿ ಪ್ರಯುಕ್ತ ನಾಗಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬರುವ ಜನವರಿ 22ರಂದು ಮಂದಿರದ ಗರ್ಭಗೃಹದಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ ಎಂಬುದಾಗಿ ಘೋಷಣೆಯಾಗಿದೆ. ವ್ಯವಸ್ಥೆಯಲ್ಲಿರುವ ಕಷ್ಟಗಳು ಮತ್ತು ಸುರಕ್ಷತೆ ಕುರಿತು ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಈ ಪಾವನ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸೀಮಿತ ಸಂಖ್ಯೆಯ ಜನರಷ್ಟೇ ಉಪಸ್ಥಿತರಿರಲು ಸಾಧ್ಯ ಎಂದು ಹೇಳಿದ್ದಾರೆ.

ಶ್ರೀರಾಮನು ನಮ್ಮ ದೇಶದ ಘನತೆವೆತ್ತ ಆಚರಣೆಯ ಪ್ರತೀಕ, ಕರ್ತವ್ಯ ಪಾಲನೆಯ ಪ್ರತೀಕ ಹಾಗೂ ಸ್ನೇಹ ಮತ್ತು ಕರುಣೆಯ ಪ್ರತೀಕ. ತಮ್ಮ ತಮ್ಮ ಸ್ಥಾನದಲ್ಲಿದ್ದುಕೊಂಡೇ ಈ ರೀತಿಯ ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಪ್ರವೇಶದಿಂದ ಪ್ರತಿಯೊಂದು ಹೃದಯದಲ್ಲೂ ನಮ್ಮ ಮನಸ್ಸಿನ ರಾಮನನ್ನು ಜಾಗೃತಗೊಳಿಸುತ್ತಾ, ಮನಸ್ಸಿನ ಅಯೋಧ್ಯೆಯನ್ನು ಸಾಲಂಕೃತಗೊಳಿಸಿ, ಎಲ್ಲೆಡೆಯೂ ಸ್ನೇಹ, ಪುರುಷಾರ್ಥ ಮತ್ತು ಸದ್ಭಾವನೆಯ ವಾತಾವರಣವನ್ನು ನಿರ್ಮಿಸಲು ಅನೇಕ ಸ್ಥಾನಗಳಲ್ಲಿ ಸಣ್ಣಸಣ್ಣ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷವಿಡೀ ನಮ್ಮ ದೇಶವು ಜಿ-20 ಹೆಸರಿನಲ್ಲಿ ಸೇರುವ ಪ್ರಮುಖ ದೇಶಗಳ ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿತ್ತು. ವರ್ಷವಿಡೀ ಸದಸ್ಯ ರಾಷ್ಟ್ರಗಳ ರಾಷ್ಟ್ರ ಪ್ರಮುಖರು, ಮಂತ್ರಿಗಳು, ಶಾಸಕರು ಮತ್ತು ಚಿಂತಕರೊಡನೆ ಅನೇಕ ಕಾರ್ಯಕ್ರಮಗಳು ಭಾರತದ ಅನೇಕ ಸ್ಥಳಗಳಲ್ಲಿ ನಡೆಯಿತು. ಭಾರತೀಯರ ಆತ್ಮೀಯ ಆತಿಥ್ಯದ ಅನುಭವ, ಭಾರತದ ಗೌರವಶಾಲಿ ಇತಿಹಾಸ ಮತ್ತು ವರ್ತಮಾನದ ಉತ್ಸಾಹಭರಿತ ಅಭ್ಯುದಯವು ಎಲ್ಲಾ ಸಹಭಾಗಿಗಳನ್ನೂ ಪ್ರಭಾವಿತರನ್ನಾಗಿಸಿತು.

ಆಫ್ರಿಕನ್ ಯೂನಿಯನ್ ಅನ್ನು ಸದಸ್ಯ ರಾಷ್ಟ್ರವನ್ನಾಗಿ ಸ್ವೀಕರಿಸುವಂತೆ ಹಾಗೂ ಶೃಂಗಸಭೆಯ ಮೊದಲನೆಯ ದಿನವೇ ಘೋಷಣಾ ಪ್ರಸ್ತಾವಕ್ಕೆ (Declaration Resolution) ಸರ್ವರ ಅನುಮೋದನೆಯನ್ನು ಪಡೆಯುವಲ್ಲಿ ಭಾರತದ ಪ್ರಾಮಾಣಿಕ ಸದ್ಭಾವನೆ ಮತ್ತು ರಾಜನೈತಿಕ ಕೌಶಲ್ಯವು ಎಲ್ಲರ ಅನುಭವಕ್ಕೆ ಬಂದಿತು. ಭಾರತದ ವಿಶಿಷ್ಟ ವಿಚಾರ ಮತ್ತು ದೃಷ್ಟಿಯ ಕಾರಣದಿಂದಾಗಿ ಸಂಪೂರ್ಣ ವಿಶ್ವದ ಚಿಂತನೆಯಲ್ಲಿ 'ವಸುಧೈವ ಕುಟುಂಬಕಂ' ಎಂಬ ದಿಶೆಯು ಸೇರಿಸಲ್ಪಟ್ಟಿತು ಎಂದು ಅವರು ಹೇಳಿದರು.
ಈ ಬಾರಿ ನಮ್ಮ ದೇಶದ ಕ್ರೀಡಾಪಟುಗಳು ಏಷಿಯಾಡ್ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ 100ಕ್ಕೂ ಅಧಿಕ ಅಂದರೆ ಒಟ್ಟು 107 ಪದಕ (28 ಸ್ವರ್ಣ, 38 ಬೆಳ್ಳಿ ಮತ್ತು 41 ಕಂಚು) ಗಳನ್ನು ಗೆದ್ದು ನಮ್ಮೆಲ್ಲರ ಉತ್ಸಾಹವನ್ನು ಹೆಚ್ಚಿಸಿದ್ದಾರೆ. ಅವರೆಲ್ಲರಿಗೂ ನಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.
ಶತಮಾನಗಳ ಕಾಲ ಕಾಡಿದ ಸಂಕಟಗಳೊಡನೆ ಹೋರಾಡಿ ಯಶಸ್ವಿಯಾಗಿ, ಇದೀಗ ನಮ್ಮ ಭಾರತವು ಭೌತಿಕವಾಗಿ ಮತ್ತು ಆಧ್ಯಾತ್ಮಿಕ ಉನ್ನತಿಯ ಪಥದಲ್ಲಿ ದೃಢವಾಗಿ ಮುನ್ನಡೆಯುತ್ತಿದೆ. ಭಾರತದ ಅಸ್ಮಿತೆಯನ್ನು, ಹಿಂದು ಸಮಾಜದ ಅಸ್ಮಿತೆಯನ್ನು ಸಂರಕ್ಷಿಸುವ ವಿಚಾರವು ಸ್ವಾಭಾವಿಕವೇ ಆಗಿದೆ. ಇಂದು ಜಗತ್ತಿನ ವರ್ತಮಾನಕಾಲದ ಆವಶ್ಯಕತೆಗಳನ್ನು ಪೂರ್ಣಗೊಳಿಸಲು, ನಮ್ಮ ಸ್ವಂತದ ಮೌಲ್ಯವನ್ನು ಆಧರಿಸಿದ, ಕಾಲಕ್ಕೆ ತಕ್ಕ, ಹೊಸ ರೂಪಬಣ್ಣಗಳಲ್ಲಿ ಭಾರತವು ಎದ್ದುನಿಲ್ಲಬೇಕೆನ್ನುವುದು ಜಗತ್ತಿನ ಅಪೇಕ್ಷೆಯೂ ಆಗಿದೆ ಎಂದು ಹೇಳಿದರು.
ಮತೀಯ ಸಾಂಪ್ರದಾಯಿಕತೆಯಿಂದ ಉತ್ಪನ್ನವಾಗಿರುವ ಮತಾಂಧತೆ, ಅಹಂಕಾರ ಮತ್ತು ಉನ್ಮಾದಗಳನ್ನು ಜಗತ್ತು ಎದುರಿಸುತ್ತಿವೆ. ಸ್ವಾರ್ಥದ ಮುಖಾಮುಖಿ ಮತ್ತು ಮೂಲಭೂತವಾದದ ಕಾರಣಗಳಿಂದ ಉತ್ಪನ್ನವಾಗಿರುವ ಉಕ್ರೇನ್ ನ ಅಥವಾ ಗಾಜಾ ಪಟ್ಟಿಯ ಯುದ್ಧದಂತಹ ಕಲಹಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ ಎಂದು ತಿಳಿಸಿದರು.
ದೇಶದ ಗಡಿಗಳ ಸುರಕ್ಷೆ, ಜಲ ಸುರಕ್ಷೆ ಮತ್ತು ಪರಿಸರದ ಸ್ವಾಸ್ಥ್ಯಗಳ ದೃಷ್ಟಿಯಿಂದ ಭಾರತದ ಉತ್ತರ ಭಾಗದ ಗಡಿಗಳನ್ನು ನಿರ್ಣಯಿಸುವ ಈ ಪ್ರದೇಶಗಳು ಅತ್ಯಂತ ಮಹತ್ವಪೂರ್ಣವಾಗಿವೆ. ಯಾವುದೇ ಬೆಲೆ ತೆತ್ತಾದರೂ ಇವುಗಳನ್ನು ರಕ್ಷಿಸಿಕೊಳ್ಳಲೇಬೇಕಿದೆ. ಸುರಕ್ಷೆ, ಪರಿಸರ, ಜನಸಂಖ್ಯೆ ಮತ್ತು ವಿಕಾಸದ ದೃಷ್ಟಿಯಿಂದ ಈ ಇಡೀ ಪ್ರದೇಶವನ್ನು ಒಂದು ಘಟಕ ಎಂದು ಪರಿಗಣಿಸಿ ಹಿಮಾಲಯ ಪ್ರದೇಶದ ಕುರಿತು ಯೋಚಿಸಬೇಕಾಗುತ್ತದೆ ಎಂದು ಅವರು ಹೇಳಿದರು.












Click it and Unblock the Notifications