ಮಿಜೋರಾಂ ಏಕೈಕ ಬಿಜೆಪಿ ಶಾಸಕನಿಗೆ 1 ವರ್ಷ ಜೈಲು ಶಿಕ್ಷೆ!
ಐಜ್ವಾಲ್, ಜುಲೈ. 26: ಮಿಜೋರಾಂನ ಏಕೈಕ ಬಿಜೆಪಿ ಶಾಸಕ ಬುದ್ಧ ಧನ್ ಚಕ್ಮಾ ಮತ್ತು ಇತರ 12 ನಾಯಕರಿಗೆ ಭ್ರಷ್ಟಾಚಾರ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯ ಸೋಮವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
2013 ಮತ್ತು 2018ರ ನಡುವೆ ಚಕ್ಮಾ ಸ್ವಾಯತ್ತ ಜಿಲ್ಲಾ ಕೌನ್ಸಿಲ್‌ನ (ಸಿಎಡಿಸಿ) 1.37 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ವಿಶೇಷ ನ್ಯಾಯಾಧೀಶರಾದ ವನ್ಲಾಲೆನ್ಮಾವಿಯಾ ಅವರು ತುಯ್ಚಾಂಗ್‌ನ ಶಾಸಕರು ಸೇರಿದಂತೆ 13 ಜನರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಬಿಜೆಪಿ ಶಾಸಕ ಬುದ್ಧ ಧನ್ ಚಕ್ಮಾ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಮೀಸಲಾದ ವಿಶೇಷ ಸಹಾಯ ನಿಧಿಯಿಂದ ಹಣವನ್ನು ಹಿಂಪಡೆದಿದ್ದಕ್ಕಾಗಿ 1988ರ ಭ್ರಷ್ಟಾಚಾರ ತಡೆ ಕಾಯ್ದೆಯ 13 (2) ರೊಂದಿಗೆ ಸೆಕ್ಷನ್ 13 (1) (ಡಿ) ಅಡಿಯಲ್ಲಿ ನ್ಯಾಯಾಲಯವು ಜುಲೈ 22 ರಂದು ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು.

ಸಿಎಡಿಸಿಯ ಮುಖ್ಯ ಕಾರ್ಯನಿರ್ವಾಹಕ ಸದಸ್ಯ (ಸಿಇಎಂ) ಬುದ್ಧ ಲೀಲಾ ಚಕ್ಮಾ, ಇಬ್ಬರು ಕಾರ್ಯಕಾರಿ ಸದಸ್ಯರು, ಇಬ್ಬರು ಹಾಲಿ ಸದಸ್ಯರು (ಎಂಡಿಸಿ) ಮತ್ತು ಮೂವರು ಮಾಜಿ ಸಿಇಎಂಗಳು. ಇತರ ನಾಲ್ವರು ಸಿಎಡಿಸಿಯ ಮಾಜಿ ಕಾರ್ಯಕಾರಿ ಸದಸ್ಯರು ಇತರ ಅಪರಾಧಿಗಳು. ಭ್ರಷ್ಟಾಚಾರ ನಡೆದಾಗ ಇವರೆಲ್ಲ ಸಿಎಡಿಸಿ ಸದಸ್ಯರಾಗಿದ್ದರು.
1 ವರ್ಷದ ಜೈಲು ಶಿಕ್ಷೆಯೊಂದಿಗೆ ತಲಾ 10,000 ರೂ.ಗಳ ದಂಡವನ್ನು ನ್ಯಾಯಾಲಯವು ವಿಧಿಸಿದೆ. ಅವರು ಪಾವತಿಸಲು ವಿಫಲವಾದರೆ ಅವರು ಇನ್ನೂ 30 ದಿನಗಳ ಸಾಮಾನ್ಯ ಜೈಲು ಶಿಕ್ಷೆಗೆ ಒಳಗಾಗುತ್ತಾರೆ ಎಂದು ಪೀಠ ಹೇಳಿದೆ. ಆದರೆ ಅವರ ವಕೀಲರು ವಿಚಾರಣೆಯ ನಂತರ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ ನಂತರ ನ್ಯಾಯಾಲಯವು ಅಪರಾಧಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. 2017ರಲ್ಲಿ ಮಿಜೋರಾಂ ರಾಜ್ಯ ಬಿಜೆಪಿ ಅಧ್ಯಕ್ಷ ವನ್‌ಲಾಲ್‌ಮುವಾಕಾ ಅವರು ಅಕ್ರಮಗಳನ್ನು ಆರೋಪಿಸಿ ಚಕ್ಮಾ ಕೌನ್ಸಿಲ್ ಅನ್ನು ವಿಸರ್ಜಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸಿದ್ದರು.

ಇದರ ನಂತರ ರಾಜ್ಯಪಾಲರು ಈ ಬಗ್ಗೆ ತನಿಖೆ ನಡೆಸುವಂತೆ ಲಾಂಗ್ಟ್ಲೈನ ಅಂದಿನ ಜಿಲ್ಲಾಧಿಕಾರಿ ಎ. ಮುತ್ತಮ್ಮ ಅವರಿಗೆ ಹೇಳಿದ್ದರು. ಡಿಸಿ ತಮ್ಮ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ ನಂತರ 2018ರಲ್ಲಿ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಎಫ್‌ಐಆರ್ ದಾಖಲಿಸಲಾಗಿತ್ತು.
2013ರಲ್ಲಿ ಸಿಎಡಿಸಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಬುಧ ಧನ್ ಚಕ್ಮಾ ಅವರು ಸಿಇಎಂ ಆಗಿ ನೇತೃತ್ವ ವಹಿಸಿದ್ದರು. ನಂತರ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಶಾಸಕರಾಗಿ ಆಯ್ಕೆಯಾದರು ಮತ್ತು ರಾಜ್ಯದ ಆಗಿನ ಲಾಲ್ ಥನ್ಹಾವ್ಲಾ ಸರ್ಕಾರದಲ್ಲಿ ಸಚಿವರಾದರು. ನಾಲ್ವರು ಚಕ್ಮಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳನ್ನು ರಾಜ್ಯ ಸರ್ಕಾರ ನಿರಾಕರಿಸಿದ್ದನ್ನು ವಿರೋಧಿಸಿ 2017ರಲ್ಲಿ ರಾಜೀನಾಮೆ ನೀಡಿದ್ದರು.
ರಾಜೀನಾಮೆ ನೀಡಿದ ಕೂಡಲೇ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಮತ್ತೆ ಆಯ್ಕೆಯಾಗಿದ್ದರು.












Click it and Unblock the Notifications