Mizoram assembly election 2023: ಬಿಜೆಪಿ ಸೇರಲು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈಲೋ- ಆಡಳಿತ ಪಕ್ಷಕ್ಕೆ ಆಘಾತ
ಐಜ್ವಾಲ್, ಅಕ್ಟೋಬರ್ 12: ನವೆಂಬರ್‌ನಲ್ಲಿ ಮಿಜೋರಾಂ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಲು ಮಿಜೋರಾಂ ವಿಧಾನಸಭಾ ಸ್ಪೀಕರ್ ಲಾಲ್ರಿನ್ಲಿಯಾನಾ ಸೈಲೋ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಸೈಲು ಅವರು ಹಿರಿಯ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ನಾಯಕರಾಗಿದ್ದಾರೆ. ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ಆಡಳಿತ ಪಕ್ಷಕ್ಕೆ ತೀವ್ರ ಆಘಾತವಾಗಿದೆ.
ಸೈಲೋ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಾಗ ಬಿಜೆಪಿ ರಾಜ್ಯ ಘಟಕದ ನಾಯಕರು ಜೊತೆಗಿದ್ದರು. ಡೆಪ್ಯೂಟಿ ಸ್ಪೀಕರ್ ಎಚ್. ಬಿಯಾಕ್ಜೌವಾ ಅವರಿಗೆ ಸೈಲೋ ಪತ್ರವನ್ನು ಸಲ್ಲಿಸಿದ್ದಾರೆ.

40 ಸದಸ್ಯರ ಬಲ ಹೊಂದಿರುವ ರಾಜ್ಯ ವಿಧಾನಸಭೆಗೆ ನವೆಂಬರ್ 7 ರಂದು ಚುನಾವಣೆ ನಡೆಯಲಿದೆ. ಈ ತಿಂಗಳು ರಾಜೀನಾಮೆ ನೀಡಿದ ಎಂಟನೇ ಶಾಸಕರಾಗಿದ್ದಾರೆ ಇವರಾಗಿದ್ದಾರೆ ಎಂದು ತಿಳಿದುಬಂದಿದೆ.
ಸೈಲೋ ಅವರು ಕೇಂದ್ರ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಸೈಲೋ ಮಮಿತ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ರಾಜೀನಾಮೆ ಸಲ್ಲಿಸಿದ ನಂತರ ಐಜ್ವಾಲ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸೈಲೋ, ರಾಜ್ಯವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರತರಲು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಹೇಳಿದ್ದಾರೆ.
'ಜೋರಾಮ್ ವೈದ್ಯಕೀಯ ಕಾಲೇಜನ್ನು ಕೇಂದ್ರ ಸರ್ಕಾರ ಸ್ವಾಧೀನಪಡಿಸಿಕೊಳ್ಳಬೇಕು. ಇದೊಂದು ಷರತ್ತನ್ನು ನಾನು ಬಿಜೆಪಿ ಮುಂದೆ ಇಟ್ಟಿದ್ದೇನೆ. ಕೇಂದ್ರ ಬಿಜೆಪಿ ನಾಯಕರಲ್ಲಿ ಈ ಕುರಿತು ಮನವಿ ಮಾಡಿದ್ದೇನೆ. ಅವರು ಭರವಸೆ ನೀಡಿದ್ದಾರೆ' ಎಂದು ತಿಳಿಸಿದ್ದಾರೆ.
ಮುಂಬರುವ ಚುನಾವಣೆಗಳಿಗೆ 40 ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್ 4 ರಂದು ಘೋಷಿಸಿದೆ. ಲಾಲ್ಮಂಗೈಹಾ ಅವರು ಚಾಲ್ಫಿಲ್ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಇದು ಪ್ರಸ್ತುತ ಸೈಲೋ ಪ್ರತಿನಿಧಿಸುವ ಕ್ಷೇತ್ರವಾಗಿದೆ.
ಎಮ್‌ಎನ್‌ಎಫ್ ಅನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಬೇಕೆಂದು ಸೈಲೋ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಮ್‌ಎನ್‌ಎಫ್ ಅವರಿಗೆ ಟಿಕೆಟ್ ನಿರಾಕರಿಸಿದೆ ಎಂದು ಹೇಳಲಾಗುತ್ತಿದೆ.
ಎಂಎನ್‌ಎಫ್ ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿದೆ. ಆದರೆ, ರಾಜ್ಯದಲ್ಲಿ ಅದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ಇದರ ಪರಿಣಾಮವಾಗಿ ಮಿಜೋರಾಂನಲ್ಲಿ ಕೇವಲ ಒಬ್ಬ ಬಿಜೆಪಿ ಶಾಸಕರಿದ್ದಾರೆ. ಪ್ರಸ್ತುತ ವಿಧಾನಸಭೆಯಲ್ಲಿ ಎಂಎನ್‌ಎಫ್ 26 ಶಾಸಕರನ್ನು ಹೊಂದಿದೆ. ಸೈಲೋ ಅವರ ರಾಜೀನಾಮೆ ಕುರಿತು ಎನ್‌ಎನ್‌ಎಫ್ ಇನ್ನೂ ಪ್ರತಿಕ್ರಿಯಿಸಿಲ್ಲ.
ಈ ವರ್ಷದ ಕೊನೆಯಲ್ಲಿ ದೇಶದ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂಗಳ ಚುನಾವಣೆ ದಿನಾಂಗಗಳನ್ನು ಪ್ರಕಟಿಸಲಾಗಿದೆ.












Click it and Unblock the Notifications