ಮೋದಿ ಸಿಕ್ಕರೆ ಏನು ಹೇಳುತ್ತೀರಿ?: ಮಿಸ್ ಕೊಹಿಮಾ ಸ್ಪರ್ಧಿ ನೀಡಿದ ಉತ್ತರ ಇದು
Recommended Video
ಕೊಹಿಮಾ, ಅಕ್ಟೋಬರ್ 16: ನಾಗಾಲ್ಯಾಂಡ್ ರಾಜಧಾನಿ ಕೊಹಿಮಾದಲ್ಲಿ ನಡೆದ 'ಮಿಸ್ ಕೊಹಿಮಾ' 2019ರ ಸೌಂದರ್ಯ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಸ್ಪರ್ಧಾಳು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಮೆಚ್ಚುಗೆಯ ಹಾಗೂ ಟೀಕೆಯ ಪ್ರತಿಕ್ರಿಯೆಗಳೆರಡೂ ವ್ಯಕ್ತವಾಗಿವೆ.
ಮಿಸ್ ಕೊಹಿಮಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 18 ವರ್ಷದ ವಿಕುಒನುಒ ಸಚು ಅವರಿಗೆ ತೀರ್ಪುಗಾರರ ಪೈಕಿ ಒಬ್ಬರು, 'ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮೊಂದಿಗೆ ಮಾತನಾಡುವಂತೆ ಅವಕಾಶ ನೀಡಿದರೆ ಏನು ಹೇಳುತ್ತೀರಿ?' ಎಂದು ಪ್ರಶ್ನಿಸಿದರು.
ಆಗ ಸಚು, 'ನನ್ನನ್ನು ಭಾರತದ ಪ್ರಧಾನಿ ಆಹ್ವಾನಿಸಿದರೆ, ಗೋವುಗಳ ಬದಲು ಮಹಿಳೆಯರತ್ತ ಹೆಚ್ಚು ಗಮನ ಹರಿಸಿ ಎಂದು ಹೇಳುತ್ತೇನೆ' ಎಂಬುದಾಗಿ ಉತ್ತರ ನೀಡಿದ್ದಾರೆ. ಸಚು ಅವರ ಹೇಳಿಕೆಗೆ ಸಭಾಂಗಣದಲ್ಲಿ ಮೆಚ್ಚುಗೆಯ ಕರತಾಡನ ವ್ಯಕ್ತವಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚು ಅವರ ಹೇಳಿಕೆಯನ್ನು ಕೆಲವರು ಬೆಂಬಲಿಸಿದರೆ, ಅನೇಕರು ಆಕೆಯನ್ನು ಟೀಕಿಸಿದ್ದಾರೆ. ಮೋದಿ ಅವರು ಭೇಟಿ ಬಚಾವೊದಂತಹ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅವುಗಳ ಬಗ್ಗೆ ತಿಳಿವಳಿಕೆ ಇಲ್ಲದವರು ಈ ರೀತಿಯಾಗಿ ಅಸಂಬದ್ಧ ಹೇಳಿಕೆ ನೀಡುತ್ತಾರೆ. ಸೌಂದರ್ಯ ಸ್ಪರ್ಧೆಯು ಮಹಿಳೆಯರ ಸಬಲೀಕರಣದ ಪ್ರತೀಕವೇ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಆಕೆಯ ದಿಟ್ಟತನವನ್ನು ಶ್ಲಾಘಿಸಿದ್ದಾರೆ.

ಮಿಸ್ ಕೊಹಿಮಾ 2019 ಸ್ಪರ್ಧೆಯು ಅ. 5ರಂದು ನಡೆದಿತ್ತು. 23 ವರ್ಷದ ಖ್ರಿಯೆನೊ ಲೀಜೆತ್ಸು ಜಯಶಾಲಿಯಾಗಿದ್ದರೆ, 19 ವರ್ಷದ ಖ್ರೀಲಿವೀನೌ ಸೌಚು ಮೊದಲ ರನ್ನರ್ ಅಪ್ ಆಗಿದ್ದರು.












Click it and Unblock the Notifications