ಗಣಿಗಾರಿಕೆ ಪ್ರಕರಣ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್‌ಗೆ ಸಮನ್ಸ್
ನವದೆಹಲಿ, ನವೆಂಬರ್ 2: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಗಣಿಗಾರಿಕೆ ಹಗರಣ ಪ್ರಕರಣ ಕಂಟಕವಾಗಿ ಪರಿಣಮಿಸಿದೆ. ಸದ್ಯ ಜಾರಿ ನಿರ್ದೇಶನಾಲಯ ಅವರಿಗೆ ರಾಜ್ಯದಲ್ಲಿ ನಡೆದ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಮನ್ಸ್ ನೀಡಿದೆ. ನಾಳೆ ತನಿಖೆಗೆ ಹಾಜರಾಗುವಂತೆ ತನಿಖಾ ಸಂಸ್ಥೆ ಕೇಳಿಕೊಂಡಿದೆ.
ಸೆಪ್ಟೆಂಬರ್‌ನಲ್ಲಿ ಇದೇ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಸಹಾಯಕ ಪಂಕಜ್ ಮಿಶ್ರಾ ಅವರನ್ನು ತನಿಖಾ ಸಂಸ್ಥೆ ಬಂಧಿಸಿತ್ತು. ತನಿಖಾ ಸಂಸ್ಥೆಯು ಜುಲೈನಲ್ಲಿ ರಾಜ್ಯಾದ್ಯಂತ ದಾಳಿ ನಡೆಸಿ ಮಿಶ್ರಾ ಮತ್ತು ಅವರ ಸಹಚರರ ಬ್ಯಾಂಕ್ ಖಾತೆಗಳಿಂದ ₹11.88 ಕೋಟಿ ವಶಪಡಿಸಿಕೊಂಡಿತ್ತು. ನಂತರ ಅವರನ್ನು ಬಂಧಿಸಲಾಯಿತು.
ಹೇಮಂತ್ ಸೋರೆನ್ ಅವರ ರಾಜಕೀಯ ಪ್ರತಿನಿಧಿಯಾಗಿರುವ ಪಂಕಜ್ ಮಿಶ್ರಾ ಅವರು ತಮ್ಮ ಸಹಾಯಕರ ಮೂಲಕ ಮುಖ್ಯಮಂತ್ರಿಗಳ ವಿಧಾನಸಭಾ ಕ್ಷೇತ್ರ ಬರ್ಹೈತ್‌ನಲ್ಲಿ ಅಕ್ರಮ ಗಣಿಗಾರಿಕೆ ವ್ಯವಹಾರವನ್ನು "ನಿಯಂತ್ರಿಸುತ್ತಾರೆ" ಎಂದು ಇಡಿ ತನ್ನ ಆರೋಪಪಟ್ಟಿಯಲ್ಲಿ ಹೇಳಿಕೊಂಡಿದೆ. ಪಂಕಜ್ ಮಿಶ್ರಾ ಮತ್ತು ಅವರ ಇಬ್ಬರು ಸಹಾಯಕರಾದ ಬಚ್ಚು ಯಾದವ್ ಮತ್ತು ಪ್ರೇಮ್ ಪ್ರಕಾಶ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.

ಬಿಜೆಪಿ ತಂತ್ರಗಾರಿಕೆಗಳಿಗೆ ತಕ್ಕ ತಿರುಗೇಟು
ಜಾರ್ಖಂಡ್ ರಾಜ್ಯದಲ್ಲಿ ಯುಪಿಎ ಸರ್ಕಾರ ಇರುವವರೆಗೂ ಬಿಜೆಪಿಯ ಯಾವುದೇ ಕುತಂತ್ರ ಫಲಿಸೋದಿಲ್ಲ ಎಂದು ಹೇಮಂತ್ ಸೋರೆನ್ ಹೇಳಿದ್ದಾರೆ. ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳೆರಡೂ ಕಿತ್ತಾಟ ನಡೆಸಬೇಕಾದ ಸನ್ನಿವೇಶವನ್ನು ಬಿಜೆಪಿ ಸೃಷ್ಟಿಸಿದೆ. ಆದ್ರೆ ಅದು ಫಲ ನೀಡೋದಿಲ್ಲ ಎಂದಿದ್ದಾರೆ. ದೇಶದಲ್ಲಿ ಅಂತರ್ಯುದ್ಧದ ಸ್ಥಿತಿ ನಿರ್ಮಿಸುವುದು, ಚುನಾವಣೆ ಗೆಲ್ಲಲು ಗಲಭೆ ಸೃಷ್ಟಿಸುವುದು ಬಿಜೆಪಿಯ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹೇಮಂತ್ ಸೋರೆನ್, ಜಾರ್ಖಂಡ್ ರಾಜ್ಯದಲ್ಲಿ ಯುಪಿಎ ಸರ್ಕಾರ ಇರುವವರೆಗೂ ಗಲಭೆಗಳಿಗೆ, ಕುತಂತ್ರಗಳಿಗೆ ಅವಕಾಶ ನೀಡೋದಿಲ್ಲ ಎಂದರು. ಬಿಜೆಪಿಯ ಎಲ್ಲಾ ತಂತ್ರಗಾರಿಕೆಗಳಿಗೆ ತಕ್ಕ ತಿರುಗೇಟು ನೀಡುವುದಾಗಿ ಹೇಳಿದರು.

ಬಿಜೆಪಿ ನಾಯಕರಿಂದ ರಾಜ್ಯಪಾಲರಿಗೆ ದೂರು
ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪ ಎದುರಿಸುತ್ತಿರುವ ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕೇಂದ್ರ ಚುನಾವಣಾ ಆಯೋಗ ಶಿಫಾರಸು ಮಾಡಿದೆ ಎನ್ನಲಾಗಿದೆ. ಈ ಕುರಿತು ಹಲವು ಮಾಧ್ಯಮಗಳು ವರದಿ ಮಾಡಿದ್ದು, ಈ ಕುರಿತು ಚುನಾವಣಾ ಆಯೋಗ ಮಾತ್ರ ಅಧಿಕೃತ ಹೇಳಿಕೆ ನೀಡಿಲ್ಲ.
ಗಣಿಗಾರಿಕೆ ಸೇರಿದಂತೆ ಹಲವು ಮಹತ್ವದ ಖಾತೆಗಳನ್ನು ತಮ್ಮೊಳಗೆ ಉಳಿಸಿಕೊಂಡಿರುವ ಹೇಮಂತ್ ಸೊರೆನ್ ಅಕ್ರಮ ನಡೆಸಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ನಾಯಕರು ಈ ಹಿಂದೆ ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯಪಾಲರು ಪತ್ರ ಬರೆದಿದ್ದರು. ಈ ಪತ್ರ ಆಧರಿಸಿ ಹಲವು ಅಂಶಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗವು ಮುಖ್ಯಮಂತ್ರಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ ಎನ್ನಲಾಗಿದೆ.

ಏನಿದು ಪ್ರಕರಣ?
ಬಿಜೆಪಿ ಸಲ್ಲಿಸಿದ್ದ ದೂರಿನ ಬಗ್ಗೆ ರಾಜ್ಯಪಾಲರು ಚುನಾವಣಾ ಆಯೋಗದ ಅಭಿಪ್ರಾಯ ಕೇಳಿದ್ದರು. ತಮ್ಮ ಹೆಸರಿನ ಕಂಪನಿಗೆ ಕಲ್ಲುಗಣಿಗಾರಿಕೆ ಲೈಸೆನ್ಸ್ ಪಡೆದುಕೊಳ್ಳುವ ಮೂಲಕ 'ಲಾಭದಾಯಕ ಹುದ್ದೆ' ಹೊಂದಿರುವ ಅವರು ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿಯ ಜಾರ್ಖಂಡ್ ರಾಜ್ಯ ಘಟಕದ ಅಧ್ಯಕ್ಷರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಚುನಾವಣಾ ಆಯೋಗದಿಂದ ಅನರ್ಹತೆಯ ಬಗ್ಗೆ ಶಿಫಾರಸು ಬಂದಿರುವುದನ್ನು ಜಾರ್ಖಂಡ್ ಸರ್ಕಾರದ ಉನ್ನತ ಮೂಲಗಳು ದೃಢಪಡಿಸಿವೆ. ರಾಜ್ಯಪಾಲರು ಈ ಬಗ್ಗೆ ಏನು ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಾಜ್ಯಪಾಲರ ಕಚೇರಿಯಲ್ಲಿ ಅಗತ್ಯ ವಿಧಿವಿಧಾನಗಳು ಪೂರ್ಣಗೊಂಡ ನಂತರವೇ ಈ ಕುರಿತು ಮಾಹಿತಿ ಅಧಿಕೃತವಾಗಿ ಹೊರಬೀಳಲಿದೆ.

'ಬಿಜೆಪಿ ಆರೋಪಗಳಲ್ಲಿ ಹುರುಳಿಲ್ಲ'
ಇದೇ ವೇಳೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಹೇಮಂತ್ ಸೋರೆನ್, 'ಚುನಾವಣಾ ಆಯೋಗದಿಂದ ತಮಗೆ ಯಾವುದೇ ರೀತಿಯ ಮಾಹಿತಿ ಬಂದಿಲ್ಲ. ಆದರೆ ಈ ಬಗ್ಗೆ ಹಲವಾರು ಮಾಧ್ಯಮ ವರದಿಗಳು ಮತ್ತು ಬಿಜೆಪಿಯ ಹೇಳಿಕೆಗಳನ್ನು ನೋಡಿದಾಗ ಇದು ಬಿಜೆಪಿ ರಚಿತ ಪಿತೂರಿ ಎನಿಸುತ್ತಿದೆ. ನನ್ನ ಶಾಸಕ ಸ್ಥಾನವನ್ನು ಅನರ್ಹತೆಗೊಳಿಸಲು ಶಿಫಾರಸು ಮಾಡಿದ್ದಾರೆ. ಬಿಜೆಪಿ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications