ವಯಸ್ಸಾದ ಅಪ್ಪ ಅಮ್ಮನಿಗಾಗಿ 23 ವರ್ಷ ಕಾಲ ಕೆಲಸ ಮಾಡಿದ ಮೈಕ್ರೋಸಾಫ್ಟ್ ಕೆಲಸ ಬಿಟ್ಟ ಕೇಶವನ್ ಷಣ್ಮುಗಂ

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು, ಕೈತುಂಬಾ ಸಂಪಾದನೆ ಮಾಡಬೇಕು ಎಂದು ಹಗಲಿರುಳು ಕಷ್ಟಪಡುತ್ತಾರೆ. ಹಣ ಮತ್ತು ವೃತ್ತಿಜೀವನದ ಯಶಸ್ಸಿನ ಹಿಂದೆ ಓಡುವ ಈ ಆಧುನಿಕ ಯುಗದಲ್ಲಿ, ತಮ್ಮ ವಯಸ್ಸಾದ ಪೋಷಕರಿಗಾಗಿ ಕೋಟ್ಯಂತರ ರೂಪಾಯಿ ಸಂಬಳ ತರುವ ಉನ್ನತ ಹುದ್ದೆಯನ್ನೇ ಬಿಟ್ಟ ವ್ಯಕ್ತಿಯೊಬ್ಬರ ಕಥೆ ಇದೀಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರ ಮನಗೆದ್ದಿದೆ.

ಅವರೇ ಮೈಕ್ರೋಸಾಫ್ಟ್ ಕಂಪನಿಯ ಇಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ (Vice President) ಕೇಶವನ್ ಷಣ್ಮುಗಂ. ವಿದೇಶದಲ್ಲಿ ನೆಲೆಸಿರುವ ಎಷ್ಟೋ ಮಂದಿ ಭಾರತದಲ್ಲಿರುವ ತಮ್ಮ ತಂದೆ-ತಾಯಿಯನ್ನ ನೋಡಿಕೊಳ್ಳಲು ಸಮಯವಿಲ್ಲದೆ ಪರದಾಡುತ್ತಾರೆ. ಅಂತಹವರ ನಡುವೆ ಕೇಶವನ್ ಅವರ ನಿರ್ಧಾರ ಎಲ್ಲರಿಗೂ ಮಾದರಿಯಾಗಿದೆ.

Microsoft VP Kesavan Shanmugam Resigns After 23 Years To Care For His Ageing Parents In India

ವೃತ್ತಿಜೀವನಕ್ಕಿಂತ ಕುಟುಂಬವೇ ಶ್ರೇಷ್ಠ ಎಂದ ಕೇಶವನ್

ಕೇಶವನ್ ಷಣ್ಮುಗಂ ಅವರು ಕಳೆದ 23 ವರ್ಷಗಳಿಂದ ಪ್ರತಿಷ್ಠಿತ ಟೆಕ್ ದೈತ್ಯ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ವೃತ್ತಿಜೀವನದಲ್ಲಿ ಅತ್ಯುನ್ನತ ಹಂತವನ್ನ ತಲುಪಿದ್ದ ಅವರು, ಇತ್ತೀಚೆಗಷ್ಟೇ ಬಿಡುಗಡೆಯಾದ 'ಎಕ್ಸೆಲ್ ಕೋಪೈಲಟ್' ಸೇರಿದಂತೆ ಹಲವು ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು. ಆದರೆ, ವೃತ್ತಿಜೀವನದ ಈ ಅತ್ಯುನ್ನತ ಶಿಖರದಲ್ಲಿರುವಾಗಲೇ ಅವರು ತಮ್ಮ ಹುದ್ದೆಗೆ ನಿವೃತ್ತಿ ಘೋಷಿಸಿದ್ದಾರೆ.

ಈ ನಿರ್ಧಾರಕ್ಕೆ ಮುಖ್ಯ ಕಾರಣ ಅವರ ವಯಸ್ಸಾದ ಪೋಷಕರು. ಹೌದು, ಭಾರತದಲ್ಲಿರುವ ತಮ್ಮ ವಯಸ್ಸಾದ ಪೋಷಕರೊಂದಿಗೆ ಹೆಚ್ಚು ಸಮಯ ಕಳೆಯುವ ಏಕೈಕ ಉದ್ದೇಶದಿಂದ ಅವರು ಈ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ.

ವೈರಲ್ ಆದ ಕೇಶವನ್ ಷಣ್ಮುಗಂ ಲಿಂಕ್ಡ್‌ಇನ್ ಪೋಸ್ಟ್

ತಮ್ಮ ಈ ಮಹತ್ವದ ನಿರ್ಧಾರವನ್ನ ಕೇಶವನ್ ಅವರು ಲಿಂಕ್ಡ್‌ಇನ್ ಮೂಲಕ ತಿಳಿಸಿದ್ದಾರೆ. "ಮೈಕ್ರೋಸಾಫ್ಟ್‌ನಂತಹ ಅದ್ಭುತ ಕಂಪನಿಯನ್ನ ಬಿಡುವುದು ಖಂಡಿತವಾಗಿಯೂ ಕಷ್ಟಕರವಾದ ನಿರ್ಧಾರವಾಗಿತ್ತು. ಇಲ್ಲಿನ ನನ್ನ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡುವುದನ್ನ, ವಿಶೇಷವಾಗಿ ಎಕ್ಸೆಲ್ ಕೋಪೈಲಟ್‌ನಲ್ಲಿನ ನನ್ನ ಕೆಲಸವನ್ನ ನಾನು ಹೆಚ್ಚು ಆನಂದಿಸಿದ್ದೇನೆ. ಆದರೆ, ಈಗ ನನ್ನ ಜೀವನದಲ್ಲಿ ಕುಟುಂಬ ಮತ್ತು ಸ್ನೇಹಿತರ ಕಡೆಗೆ ಹೆಚ್ಚು ಗಮನಹರಿಸುವ ಸಮಯ ಬಂದಿದೆ. ಅದರಲ್ಲೂ ಮುಖ್ಯವಾಗಿ ನನ್ನ ಪೋಷಕರಿಗೆ ನನ್ನ ಸಮಯ ಮೀಸಲಿಡುವುದು ಸರಿಯಾದ ಆಯ್ಕೆ ಎಂದು ನನಗೆ ಅನಿಸಿದೆ," ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ವಯಸ್ಸಾದ ಪೋಷಕರ ಆರೈಕೆಗೆ ಮೊದಲ ಆದ್ಯತೆ

ಮೈಕ್ರೋಸಾಫ್ಟ್ ಕಂಪನಿಗೆ ಕೃತಜ್ಞತೆ ಸಲ್ಲಿಸಿರುವ ಕೇಶವನ್, "ನನ್ನ ವೃತ್ತಿಜೀವನದಲ್ಲಿ ಇಂತಹದೊಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವಂತೆ ಬೆಂಬಲಿಸಿದ ಮೈಕ್ರೋಸಾಫ್ಟ್ ಕಂಪನಿಗೆ ನಾನು ಆಭಾರಿಯಾಗಿದ್ದೇನೆ. ನನ್ನ 23 ವರ್ಷಗಳ ಸುದೀರ್ಘ ಪಯಣವನ್ನ ರೋಮಾಂಚಕಾರಿ ಮತ್ತು ತೃಪ್ತಿದಾಯಕವಾಗಿಸಿದ ಹಿಂದಿನ ಮತ್ತು ಇಂದಿನ ಎಲ್ಲಾ ಸಹೋದ್ಯೋಗಿಗಳಿಗೆ ದೊಡ್ಡ ಧನ್ಯವಾದಗಳು," ಎಂದು ಹೇಳಿದ್ದಾರೆ.

ಅಮೆರಿಕದಂತಹ ದೇಶದಲ್ಲಿ ಉನ್ನತ ಹುದ್ದೆ, ಐಷಾರಾಮಿ ಜೀವನ, ಕೈತುಂಬಾ ಹಣ ಎಲ್ಲವೂ ಇದ್ದರೂ, ಅವೆಲ್ಲವನ್ನೂ ಬಿಟ್ಟು ಭಾರತದಲ್ಲಿರುವ ತಮ್ಮ ತಾಯ್ನಾಡಿಗೆ ಮರಳಲು ನಿರ್ಧರಿಸಿರುವ ಕೇಶವನ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಇಂದಿನ ದಿನಗಳಲ್ಲಿ ಮಕ್ಕಳು ಕೆಲಸದ ಒತ್ತಡದಲ್ಲಿ ಪೋಷಕರನ್ನ ವೃದ್ಧಾಶ್ರಮಕ್ಕೆ ಸೇರಿಸುವ ಎಷ್ಟೋ ಘಟನೆಗಳನ್ನ ನಾವು ನೋಡುತ್ತಿದ್ದೇವೆ. ಇಂತಹ ಸಮಾಜದಲ್ಲಿ ಹೆತ್ತವರ ಸೇವೆಗೆ ಮುಂದಾಗಿರುವ ಇವರ ನಡೆಯು ಮಾನವೀಯತೆಯ ಪ್ರತೀಕವಾಗಿದೆ.

ಕೇಶವನ್ ನಿರ್ಧಾರಕ್ಕೆ ನೆಟ್ಟಿಗರ ಮೆಚ್ಚುಗೆ

ಕೇಶವನ್ ಅವರ ಈ ಲಿಂಕ್ಡ್‌ಇನ್ ಪೋಸ್ಟ್ ವೈರಲ್ ಆಗಿದ್ದು, ನೂರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ವೃತ್ತಿಜೀವನವನ್ನ ಬದಿಗಿಟ್ಟು ಕುಟುಂಬಕ್ಕೆ ಬೆಲೆ ಕೊಟ್ಟ ಅವರ ನಿರ್ಧಾರವನ್ನ ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಓರ್ವ ಬಳಕೆದಾರರು, "ನಿಮ್ಮ ಜೀವನದಲ್ಲಿ ನೀವು ತೆಗೆದುಕೊಳ್ಳಬಹುದಾದ ಅತ್ಯುತ್ತಮ ನಿರ್ಧಾರಗಳಲ್ಲಿ ಇದು ಕೂಡ ಒಂದು" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ನಾನು ನಿಮ್ಮನ್ನ ವೈಯಕ್ತಿಕವಾಗಿ ಭೇಟಿಯಾಗಿಲ್ಲ ಸಹೋದರ, ಆದರೆ ಪೋಷಕರಿಗೆ ಆದ್ಯತೆ ನೀಡುವ ನಿಮ್ಮ ನಿರ್ಧಾರ ನನ್ನ ಗಮನ ಸೆಳೆದಿದೆ. ನಿಮಗೆ ನನ್ನ ಶುಭಾಶಯಗಳು" ಎಂದು ಬರೆದಿದ್ದಾರೆ.

ಇನ್ನೊಬ್ಬ ಬಳಕೆದಾರರು ಪ್ರತಿಕ್ರಿಯಿಸುತ್ತಾ, "ನೀವು ಇಷ್ಟಪಡುವ ಕೆಲಸದಿಂದ ದೂರ ಸರಿಯುವುದು ಸುಲಭವಲ್ಲ. ಆದರೆ ನಿಮ್ಮ ಪೋಷಕರೊಂದಿಗೆ ಹೆಚ್ಚು ಸಮಯ ಕಳೆಯುವುದು ಹೊಸ ಅಧ್ಯಾಯವನ್ನ ಪ್ರಾರಂಭಿಸಲು ಒಂದು ಅರ್ಥಪೂರ್ಣ ಕಾರಣವಾಗಿದೆ" ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+