Metro: ಆ ಮಹಿಳೆ ಸಾವಿಗೆ ಕಾರಣವಾಯ್ತ ಸೀರೆ ಸೆರಗು?
ನವದೆಹಲಿ, ಡಿಸೆಂಬರ್, 17: ಸಾಮಾನ್ಯ ಮೆಟ್ರೋಗಳಲ್ಲಿ ಆಗಾಗ ವಿಚಿತ್ರ, ಆಘಾತಕಾರಿ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಹಾಗೆಯೇ ಇದೀಗ ಆಘಾತಕಾರಿ ಘಟನೆಯೊಂದು ದೆಹಲಿ ಮೆಟ್ರೋದಲ್ಲಿ ನಡೆದಿದೆ. ಮೆಟ್ರೋ ರೈಲಿನ ಬಾಗಿಲಿಗೆ ಮಹಿಳೆಯೊಬ್ಬರ ಸೀರೆಯ ಸೆರಗು ಸಿಕ್ಕಿಹಾಕಿಕೊಂಡ ಹಿನ್ನೆಲೆ ಮಹಿಳೆ ರೈಲಿನಿಂದ ಎಳೆಯಲ್ಪಟ್ಟು ಸಾವನ್ನಪ್ಪಿರುವ ಘಟನೆ ದೆಹಲಿಯ ಇಂದರ್‌ಲೋಕ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗುರುವಾರ ಇಂದರ್‌ಲೋಕ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ರೀನಾ (35) ಮೆಟ್ರೋ ರೈಲಿನ ಅಡಿ ಸಿಲುಕಿ ಗಂಭೀರ ಗಾಯಗೊಂಡಿದ್ದರು. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೂ ಅವರು ಶನಿವಾರ (ಡಿಸೆಂಬರ್ 16) ಮೃತಪಟ್ಟಿದ್ದಾರೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಇನ್ನು ಘಟನೆ ಕುರಿತು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ನಡೆಸಲಿದ್ದಾರೆ ಎಂದು ದೆಹಲಿ ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನುಜ್ ದಯಾಲ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮೃತ ಮಹಿಳೆಯ ಸಂಬಂಧಿಯೊಬ್ಬರು, ರೀನಾ ಅವರು ಪಶ್ಚಿಮ ದೆಹಲಿಯ ನಾಂಗ್ಲೋಯ್‌ನಿಂದ ಮೋಹನ್ ನಗರಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ರೀನಾ ಇಂದರ್‌ಲೋಕ್ ಮೆಟ್ರೋ ನಿಲ್ದಾಣಕ್ಕೆ ತಲುಪಿ ರೈಲು ಬದಲಾಯಿಸಲು ಮುಂದಾದಾಗ ಅವರ ಸೀರೆಯ ಸೆರಗು ಮೆಟ್ರೋ ಬಾಗಿಲಿಗೆ ಸಿಕ್ಕಿಹಾಕಿಕೊಂಡಿದೆ. ಅವರು ಈ ವೇಳೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ನಂತರ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಶನಿವಾರ ಸಂಜೆ ಅವರು ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ನೀಡಿದ್ದಾರೆ.












Click it and Unblock the Notifications