ಇನ್‌ಸ್ಟಾಮಾರ್ಟ್ ಡೆಲಿವರಿ ಗರ್ಲ್ ಈಗ ಪ್ರವಾಹ ಸಂತ್ರಸ್ತರ ಪಾಲಿನ ಆಶಾಕಿರಣ: ಬೊನಿತಾ ದಾಸ್ ಸ್ಫೂರ್ತಿದಾಯಕ ಕಥೆ
ಬದುಕು ಕಟ್ಟಿಕೊಳ್ಳಲು ನಾವು ಮಾಡುವ ಉದ್ಯೋಗ ನಮ್ಮ ಹೊಟ್ಟೆ ತುಂಬಿಸುವುದರ ಜೊತೆಗೆ, ಸಮಾಜಕ್ಕೂ ಏನಾದರೂ ಒಳಿತು ಮಾಡುವ ಶಕ್ತಿ ನೀಡಿದರೆ ಆ ಬದುಕು ಸಾರ್ಥಕವಾಗುತ್ತದೆ. ಅಸ್ಸಾಂನ ದಿಬ್ರುಗಢದ ಯುವತಿ ಬೊನಿತಾ ದಾಸ್ ಅವರ ಕಥೆ ಕೂಡ ಇಂತಹದ್ದೇ ಒಂದು ಅದ್ಭುತ ಸಂದೇಶವನ್ನು ಸಾರುತ್ತದೆ.
ಪಿಯುಸಿ ಮುಗಿಸಿ, ತನಗೆ ತಾನೇ ಬಾಸ್ ಆಗಬೇಕು ಎಂಬ ಕನಸು ಕಂಡಿದ್ದ ಈ ಯುವತಿ ಇಂದು ನೂರಾರು ಕುಟುಂಬಗಳ ಪಾಲಿನ ಆಪತ್ಬಾಂಧವಳಾಗಿದ್ದಾಳೆ.

ಇನ್‌ಸ್ಟಾಮಾರ್ಟ್ ಡೆಲಿವರಿ ಪಾರ್ಟ್‌ನರ್ ಆಗಿ ಕೆಲಸ
ಬೊನಿತಾ ದಾಸ್ ಆರಂಭದಲ್ಲಿ ಇತರ ಯುವಜನರಂತೆ ಸಣ್ಣಪುಟ್ಟ ಕೆಲಸಗಳನ್ನ ಮಾಡುತ್ತಿದ್ದರು. ದಿನಕ್ಕೆ 8 ರಿಂದ 9 ಗಂಟೆಗಳ ಕಾಲ ದುಡಿದರೂ ಕೈಗೆ ಸಿಗುತ್ತಿದ್ದ ಸಂಬಳ ತೀರಾ ಕಡಿಮೆಯಿತ್ತು. ಕಟ್ಟುನಿಟ್ಟಾದ ನಿಯಮಗಳ ಅಡಿಯಲ್ಲಿ ಕೆಲಸ ಮಾಡುವುದು ಆಕೆಗೆ ಇಷ್ಟವಿರಲಿಲ್ಲ.
ಹಾಗಾಗಿ ಮೇ 2026ರಲ್ಲಿ ದಿಬ್ರುಗಢದಲ್ಲಿ ಇನ್‌ಸ್ಟಾಮಾರ್ಟ್ ಸೇವೆ ಆರಂಭವಾದಾಗ, ಆಕೆ ಡೆಲಿವರಿ ಪಾರ್ಟ್‌ನರ್ ಆಗಿ ಸೇರಿಕೊಂಡರು. ಈ ನಿರ್ಧಾರ ಆಕೆಯ ಬದುಕನ್ನೇ ಬದಲಿಸಿತು. ತನಗೆ ಇಷ್ಟವಾದ ಸಮಯದಲ್ಲಿ ಕೆಲಸ ಮಾಡುತ್ತಾ, ತನ್ನ ಆದಾಯವನ್ನ ಮೂರು ಪಟ್ಟು ಹೆಚ್ಚಿಸಿಕೊಂಡರು. ಇದರಿಂದ ಆಕೆಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿತು.
ಹೊಸ ಮನೆ ಹಾಗೂ ಸ್ವಂತ ಬೇಕರಿಯ ಕನಸು
ತನ್ನ ದುಡಿಮೆಯಿಂದ ಒಂದಿಷ್ಟು ಹಣ ಉಳಿಸಿದ ಬೊನಿತಾ, ತನ್ನ ಸಹೋದರನ ಜೊತೆಗೂಡಿ ಕುಟುಂಬಕ್ಕಾಗಿ ಸುಂದರವಾದ ಮನೆಯೊಂದನ್ನ ನಿರ್ಮಿಸಿದ್ದಾರೆ. ತನಗೆ ತಾನೇ ಬಾಸ್ ಆಗಿರುವುದರಿಂದ, ಬಿಡುವಿನ ವೇಳೆಯಲ್ಲಿ ಬೇಕಿಂಗ್ ಕೌಶಲ್ಯಗಳನ್ನ ಕಲಿಯುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ದಿಬ್ರುಗಢದಲ್ಲಿ ಕೇವಲ ಕೇಕ್ ಮತ್ತು ಪೇಸ್ಟ್ರಿಗಳಿಗಾಗಿಯೇ ಮೀಸಲಾದ ಸ್ವಂತ ಬೇಕರಿ ತೆರೆಯಬೇಕು ಎಂಬುದು ಆಕೆಯ ಬಹುದೊಡ್ಡ ಕನಸಾಗಿದೆ. ಅದಕ್ಕಾಗಿ ಈಗಿನಿಂದಲೇ ಹಣವನ್ನು ಕೂಡಿಡುತ್ತಿದ್ದಾರೆ.
ಅಸ್ಸಾಂ ಪ್ರವಾಹ 2026: ಸಂತ್ರಸ್ತರ ಕಣ್ಣೊರೆಸಿದ ಬೊನಿತಾ
ನದಿ ತೀರದ ಊರಿನಲ್ಲಿಯೇ ಬೆಳೆದ ಬೊನಿತಾ 2013 ಮತ್ತು 2015ರಲ್ಲಿ ಭೀಕರ ಪ್ರವಾಹದ ಕಷ್ಟಗಳನ್ನ ಎದುರಿಸಿದ್ದರು. ಇತ್ತೀಚೆಗೆ ಅಸ್ಸಾಂನಲ್ಲಿ ಮತ್ತೆ ಪ್ರವಾಹ ಬಂದಾಗ, ಆಕೆಯ ಹೊಸ ಮನೆ ಎತ್ತರ ಪ್ರದೇಶದಲ್ಲಿದ್ದ ಕಾರಣ ಸುರಕ್ಷಿತವಾಗಿತ್ತು. ಆದರೆ, ಪ್ರವಾಹದಿಂದ ತತ್ತರಿಸಿದ ಜನರ ಕಷ್ಟವನ್ನು ನೋಡಿ ಆಕೆಯ ಮನಸ್ಸು ಕರಗಿತು.
ತಾನು ಕೇವಲ ಮೂಕಪ್ರೇಕ್ಷಕಿಯಾಗಬಾರದು ಎಂದು ನಿರ್ಧರಿಸಿದ ಬೊನಿತಾ, ತನ್ನ ಸಹೋದ್ಯೋಗಿಗಳಿಂದ ಕನಿಷ್ಠ 50 ರೂಪಾಯಿಗಳಂತೆ ಹಣ ಸಂಗ್ರಹಿಸಲು ಮುಂದಾದರು. ಈ ಸಣ್ಣ ಪ್ರಯತ್ನ ದೊಡ್ಡ ಅಭಿಯಾನವಾಗಿ ಬದಲಾಯಿತು. ಇವರ ಸೇವೆಯನ್ನ ಗಮನಿಸಿದ ಇನ್‌ಸ್ಟಾಮಾರ್ಟ್ ಸಂಸ್ಥೆ ಕೂಡ ಈ ನಿಧಿಗೆ ಮತ್ತಷ್ಟು ಹಣವನ್ನ ದೇಣಿಗೆಯಾಗಿ ನೀಡಿತು.
ಪರಿಹಾರ ಕಿಟ್ ವಿತರಣೆ
ಸಂಗ್ರಹವಾದ ಹಣವನ್ನ ಬಳಸಿಕೊಂಡು ಸ್ಥಳೀಯ ಎನ್‌ಜಿಒ ಒಂದರ ಜೊತೆಗೂಡಿದ ಬೊನಿತಾ ಹಾಗೂ ತಂಡ, ಶಿವಸಾಗರ ಜಿಲ್ಲೆಯ 500ಕ್ಕೂ ಹೆಚ್ಚು ಸಂತ್ರಸ್ತ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದೆ. ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಹಾಲು ಮತ್ತು ತರಕಾರಿಗಳಂತಹ ಅಗತ್ಯ ದಿನಸಿ ವಸ್ತುಗಳ ಪರಿಹಾರ ಕಿಟ್‌ಗಳನ್ನು ವಿತರಿಸಿದ್ದಾರೆ.
"ನಾನೊಬ್ಬಳು ಸಾಮಾನ್ಯ ಡೆಲಿವರಿ ಪಾರ್ಟ್‌ನರ್ ಆಗಿರಬಹುದು, ಆದರೆ ನಾವೆಲ್ಲರೂ ಒಟ್ಟಾಗಿ ಸೇರಿದರೆ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಹುದು" ಎಂದು ಹೆಮ್ಮೆಯಿಂದ ಹೇಳುತ್ತಾರೆ ಬೊನಿತಾ ದಾಸ್.
ಒಬ್ಬ ಸಾಮಾನ್ಯ ಹೆಣ್ಣುಮಗಳು ಮನಸ್ಸು ಮಾಡಿದರೆ ತನ್ನ ಆರ್ಥಿಕ ಸ್ಥಿತಿಯನ್ನ ಸುಧಾರಿಸಿಕೊಳ್ಳುವುದರ ಜೊತೆಗೆ, ಸಂಕಷ್ಟದಲ್ಲಿರುವ ಸಮಾಜದ ಕಣ್ಣೀರನ್ನು ಹೇಗೆ ಒರೆಸಬಹುದು ಎಂಬುದಕ್ಕೆ ಬೊನಿತಾ ದಾಸ್ ಅವರ ಈ ನಿಸ್ವಾರ್ಥ ಸೇವೆ ಇಡೀ ದೇಶಕ್ಕೆ ಉದಾಹರಣೆಯಾಗಿದೆ.


Click it and Unblock the Notifications
