ಶ್ರೀರಾಮನ ಹೆಸರಿನಲ್ಲಿ ಲೂಟಿ ಮಾಡಿದವರಿಗೆ ಆ ದೇವರೇ ಶಿಕ್ಷೆ ನೀಡಲಿ: BJP ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಪಾಟ್ನಾ: ಅಯೋಧ್ಯೆ ರಾಮಮಂದಿರ ದೇಣಿಗೆ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಶ್ರೀರಾಮನ ಹೆಸರಿನಲ್ಲಿ ಭಕ್ತರ ಹಣವನ್ನು ಲೂಟಿ ಮಾಡಿದವರಿಗೆ ಆ ದೇವರೇ ಕಣ್ತೆರೆದು ಕಠಿಣ ಶಿಕ್ಷೆ ನೀಡಲಿ" ಎಂದು ಪ್ರಾರ್ಥಿಸಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ಭಾನುವಾರ ನಡೆದ ಬೃಹತ್ ಸಮಾವೇಶವನ್ನ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕಿಡಿಕಾರಿದರು.

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಬಗ್ಗೆ ಆಕ್ರೋಶ
ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ನೀಡಿದ್ದ ದೇಣಿಗೆ ಹಣವನ್ನ, ಎಣಿಕೆ ಮಾಡಲು ನಿಯೋಜಿಸಿದ್ದ ಸಿಬ್ಬಂದಿಯೇ ಕದ್ದಿರುವ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಸಿಸಿಟಿವಿ ದೃಶ್ಯಾವಳಿ ಹಾಗೂ ಆಂತರಿಕ ಲೆಕ್ಕಪರಿಶೋಧನೆಯ ಬಳಿಕ ದೇವಸ್ಥಾನದ ಟ್ರಸ್ಟ್ ನೀಡಿದ ದೂರಿನ ಮೇರೆಗೆ ಹಲವರನ್ನ ಬಂಧಿಸಲಾಗಿತ್ತು.
ಅಧಿಕೃತ ಖಾತೆಗೆ ಜಮೆಯಾಗುವ ಮುನ್ನವೇ ಹಣ ಎಗರಿಸಿದ್ದ ಈ ವಿಚಾರವನ್ನ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ, ದೇವರ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿರುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ರಾಮನ ಹೆಸರಿನಲ್ಲಿ ಯಾರು ಭ್ರಷ್ಟಾಚಾರ ಮಾಡುತ್ತಿದ್ದಾರೋ, ಅಂಥವರ ವಿರುದ್ಧ ದೇವರು ಕಠಿಣ ಕ್ರಮ ಕೈಗೊಳ್ಳಬೇಕು" ಎಂದರು.
ಹಲ್ದ್ವಾನಿ ಶುದ್ಧೀಕರಣ ವಿವಾದ: ಕಠಿಣ ಕ್ರಮಕ್ಕೆ ಆಗ್ರಹ
ಕಳೆದ ಆಗಸ್ಟ್ ತಿಂಗಳಲ್ಲಿ ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಖರ್ಗೆ ಭಾಷಣ ಮಾಡಿದ್ದರು. ಆ ಬಳಿಕ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಮೈದಾನವನ್ನ ಗಂಜಲ ಹಾಕಿ ಶುದ್ಧ ಮಾಡಿದ್ದರು.
ಈ ಶುದ್ಧೀಕರಣ ವಿವಾದದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, "ಈ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭರವಸೆ ನೀಡಿದ್ದರು. ಆದರೆ, ತನಿಖೆ ಮಾಡುವ ಬದಲು ರಾಹುಲ್ ಗಾಂಧಿ ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿದೆ. ಇಂಥ ಅಸ್ಪೃಶ್ಯತೆ ಆಚರಿಸುವವರನ್ನು ಗುರುತಿಸಿ ಕಠಿಣ ಶಿಕ್ಷೆ ನೀಡಬೇಕು" ಎಂದು ಆಗ್ರಹಿಸಿದರು.
ರಾಹುಲ್ ಗಾಂಧಿ ಅವರು ಕೂಡ ಪ್ರಧಾನಿ ಮೋದಿಯವರು ಈ ಕೃತ್ಯ ಎಸಗಿದವರ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಬೇಕು ಎಂದು ಈ ಮೊದಲು ಒತ್ತಾಯಿಸಿದ್ದರು.
ನಿತೀಶ್ ಕುಮಾರ್ ನಡೆಗೆ ಬೇಸರ
ದೇಶದಲ್ಲಿ ಆರ್‌ಎಸ್‌ಎಸ್ ಸಿದ್ಧಾಂತ ಇರುವವರೆಗೂ ಶಾಂತಿ ನೆಲೆಸಲು ಖಂಡಿತ ಸಾಧ್ಯವಿಲ್ಲ ಎಂದು ಖರ್ಗೆ ಪ್ರತಿಪಾದಿಸಿದರು. ಇದೇ ವೇಳೆ ಬಿಹಾರ ಸಿಎಂ ನಿತೀಶ್ ಕುಮಾರ್ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, "ನಿತೀಶ್ ಕುಮಾರ್ ಅವರಂತಹ ಸಮಾಜವಾದಿ ನಾಯಕರು ಇಂದು ಆರ್‌ಎಸ್‌ಎಸ್ ಸಿದ್ಧಾಂತವನ್ನ ನಂಬುವವರ ಜೊತೆ ಕೈಜೋಡಿಸಿರುವುದು ನನಗೆ ತೀವ್ರ ನೋವು ತಂದಿದೆ" ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಮತ ಕಳ್ಳತನ
ಬಂಗಾಳ, ಹರಿಯಾಣ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಜೆಪಿ ಮತ ಕಳ್ಳತನ ಮಾಡುವ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಖರ್ಗೆ ಗಂಭೀರ ಆರೋಪ ಮಾಡಿದರು. ಮುಂಬರುವ ದಿನಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಯಬೇಕು ಮತ್ತು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನ ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕಳೆದ ಎರಡು ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳನ್ನ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧದ ಹೋರಾಟವನ್ನ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಬಣ್ಣಿಸಿದರು.
ಕೊನೆಯದಾಗಿ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಅವರು, "ಈ ಸರ್ಕಾರಕ್ಕೆ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಈರುಳ್ಳಿ ಮತ್ತು ಬ್ರೆಡ್ ನೀಡಲು ಸಾಧ್ಯವಾಗುತ್ತಿಲ್ಲ, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ಇವರು ಅಮೃತ ಕಾಲವನ್ನ ತರುವುದು ಹೇಗೆ?" ಎಂದು ಖಾರವಾಗಿ ಪ್ರಶ್ನಿಸಿದರು.


Click it and Unblock the Notifications
