Tirupati Fire Incident: ಕಾಲ್ತುಳಿತ ಘಟನೆ ಬೆನ್ನಲ್ಲೆ ಲಡ್ಡು ಕೌಂಟರ್ ಬೆಂಕಿಗೆ ಆಹುತಿ, ಆಗಿದ್ದೇನು?
ತಿರುಮಲ, ಜನವರಿ 13: ಚಿರತೆಯಿಂದ ಬಾಲಕಿ ಸಾವು, ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಂಬು ಮಿಶ್ರಣ, ಕಾಲ್ತುಳಿತ ಪ್ರಕರಣ ನಂತರ ತಿರುಪತಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಸಂಕ್ರಾಂತಿ ಒಂದು ದಿನ ಪೂರ್ವದಲ್ಲೇ ಸೋಮವಾರ ಆಂಧ್ರ ಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡಿದೆ. ಇತ್ತೀಚೆಗೆ ದೇಶದ ಪ್ರಮುಖ ಧಾರ್ಮಿಕ ಕೇಂದ್ರ ತಿರುಪತಿ ವೆಂಕಟೇಶ್ವರ ದೇವಸ್ಥಾನವು ಬರಿ ನಕಾರಾತ್ಮಕ ಸುದ್ದಿಗಳಿಂದ ಹೆಚ್ಚು ಸದ್ದು ಮಾಡುತ್ತಿದೆ. ಇದೀಗ ಬೆಂಕಿ ಘಟನೆ ಭಕ್ತರನ್ನು ಆತಂಕಕ್ಕೀಡು ಮಾಡಿದೆ.
ಇತ್ತೀಚೆಗೆ ಕಾಲ್ತುಳಿತ ಪ್ರಕರಣ ಸಂಭವಿಸಿ ಆರು ಜನರು ಮೃತಪಟ್ಟಿದ್ದರು. ಇದರಲ್ಲಿ ಬಳ್ಳಾರಿ ಜಿಲ್ಲೆಯ ಮಹಿಳೆಯು ಇದ್ದರು. ಮೃತರಿಗೆ ಮುಖ್ಯಮಂತ್ರಿ ಚಂದ್ರುಬಾಬು ನಾಯ್ಡು ನೇತೃತ್ವದಲ್ಲಿ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಲಡ್ಡು ವಿತರಣೆ ಕೌಂಟರ್ 45ರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಅವಘಡದಿಂದಾಗಿ ಲಡ್ಡು ಪಡೆಯುತ್ತಿದ್ದ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ. ಮೂಲಗಳ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕೌಂಟರ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಲಡ್ಡು ವಿತರಣೆ ಕೌಂಟರ್‌ನಲ್ಲಿದ್ದ ಕಂಪ್ಯೂಟರ್ ಗಳಿಗೆ ಸಂಪರ್ಕ ಕಲ್ಪಿಸಿದ್ದ ವೈಯರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬೆಂಕಿ ನಿಯಂತ್ರಣಕ್ಕೆ ತರಲಾಗಿದೆ.
ದೇವರ ದರ್ಶನ್ ಬಳಿಕ ಕೌಂಟರ್ ನತ್ತ ಪ್ರಸಾದ್ ಸ್ವೀಕರಿಸಲು ನಿಂತಿದ್ದ ಭಕ್ತರು ಬೆಂಕಿ ಕಾಣುತ್ತಿದ್ದಂತೆ ಕಾಲ್ಕಿತ್ತರು. ಭಯಗೊಂಡು ಹಿಂದು ಮುಂದು ನೋಡರೆ ಸುರಕ್ಷಿತ ಸ್ಥಳಕ್ಕೆ ಓಡಿ ಹೋಗಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ, ಟಿಟಿಡಿ ಸಿಬ್ಬಂದಿ ಬೆಂಕಿ ನಂದಿಸಿದೆ.
ಇದೇ ತಿಂಗಳ ಜನವರಿ 08ರಂದು ತಿರುಪತಿ ವೈಕುಂಠ ದ್ವಾರ ದರ್ಶನ ಟಿಕೆಟ್ ಕೌಂಟರ್ ಬಳಿಕ ಕಾಲ್ತುಳಿತ ಸಂಭವಿಸಿತ್ತು. ಒಟ್ಟು ಸುಮಾರು 4000ಕ್ಕೂ ಅಧಿಕ ಜನರು ದೇಗುದಲ ಆವರಣದಲ್ಲಿದ್ದರು. ಕೌಂಟರ್ ತೆರಯುತ್ತಿದ್ದಂತೆ ಸುದ್ದಿ ತಿಳಿದು ಟಿಕೆಟ್ ಪಡೆಯಲು ಮುಂದಾದಾಗ ಈ ಅವಘಡ ಸಂಭವಿಸಿದೆ. ಒಟ್ಟು ಆರು ಮಂದಿ ಮೃತಪಟ್ಟಿದ್ದರು. ಇದು ದೇಶಾದ್ಯಂತ ಭಾರಿ ಸುದ್ದಿಯಾಗಿತ್ತು.
ಸದ್ಯ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಭಕ್ತರು ಭಯಗೊಂಡಿದ್ದಾರೆ. ಒಂದು ಕೌಂಟರ್ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಕ್ಕ ಪಕ್ಕದ ಕೌಂಟರ್ ಲಡ್ಡು ಪ್ರಸಾದ್ ವಿತರಣೆ ಕೊಂಚ ವಿಳಂಬ ವಾಯಿತು. ಪರಿಸ್ಥಿತಿ ತಿಳಿಗೊಳಿಸಲು ಟಿಟಿಡಿ ಸಿಬ್ಬಂದಿ ಹರಸಾಹಸ ಪಟ್ಟ ದೃಶ್ಯ ಕಂಡು ಬಂತು. ಬೆಂಕಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಗಿದೆಯೇ ಇಲ್ಲ ಬೇರೆ ಕಾರಣದಿಂದ ಆಗಿದೆಯೇ ಎಂದು ಪರಿಶೀಲನೆ ನಡೆಯುತ್ತಿದೆ.












Click it and Unblock the Notifications