Ram Mandir crowd: ರಾಮಮಂದಿರದಲ್ಲಿ ಭಾರಿ ಜನಸ್ತೋಮ: ಅಯೋಧ್ಯೆಗೆ ಹೋಗುವ ವಾಹನಗಳ ಪ್ರವೇಶ ನಿರ್ಬಂಧ
ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಸಮಾರಂಭ ಸೋಮವಾರ ಅದ್ಧೂರಿಯಾಗಿ ಪೂರ್ಣಗೊಂಡಿದೆ. ಮಂಗಳವಾರ ದೇವಾಲಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಕಂಡುಬಂದಿದ್ದಾರೆ. ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಅಯೋಧ್ಯೆಯಲ್ಲಿ ಅಧಿಕಾರಿಗಳು ಒಳಬರುವ ಎಲ್ಲಾ ವಾಹನಗಳಿಗೆ ತಕ್ಷಣ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಅಯೋಧ್ಯೆಯಲ್ಲಿ ಹಠಾತ್ ಯಾತ್ರಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಇದು ಸ್ಥಳದಲ್ಲಿ ಭದ್ರತಾ ವ್ಯವಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ಜನದಟ್ಟಣೆಯಿಂದಾಗಿ ಕೆಲವು ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಗಂಭೀರ ಹಾನಿಯ ವರದಿಯಾಗಿಲ್ಲ. ಭಾರೀ ಜನಸಂದಣಿಯನ್ನು ಗಮನಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಮತ್ತಷ್ಟು ಯಾತ್ರಿಗಳ ಆಗಮನವನ್ನು ನಿರ್ಬಂಧಿಸಲು ಆದೇಶಿಸಿದರು.

ಅಯೋಧ್ಯೆಗೆ ಹೋಗುವ ವಾಹನಗಳ ಪ್ರವೇಶ ನಿರ್ಬಂಧ
ಅಯೋಧ್ಯೆಯಲ್ಲಿನ ಪರಿಸ್ಥಿತಿ ಕುರಿತು ಸಭೆ ನಡೆಸಲಾಗಿದ್ದು, ಮುಂದಿನ ಕೆಲವು ದಿನಗಳವರೆಗೆ ಅಯೋಧ್ಯೆಗೆ ತೆರಳುವ ಎಲ್ಲಾ ವಾಹನಗಳ ಮೇಲೆ ನಿಷೇಧ ಹೇರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ವಾಹನಗಳಿಗೆ ಮಾಡಲಾದ ಎಲ್ಲಾ ಆನ್‌ಲೈನ್ ಬುಕಿಂಗ್‌ಗಳನ್ನು ರದ್ದುಗೊಳಿಸಲಾಗಿದೆ ಮತ್ತು ಯಾತ್ರಿಕರ ಬಸ್ ದರಗಳ ಮರುಪಾವತಿಯನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತಿದೆ.
ಸೋಮವಾರ ಅಯೋಧ್ಯೆ ದೇವಸ್ಥಾನದಲ್ಲಿ ನೂತನ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಮಾರಂಭವನ್ನು ದೇಶಾದ್ಯಂತ ನೇರಪ್ರಸಾರ ಮಾಡಲಾಯಿತು. ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು, ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ಸಾವಿರಾರು ಜನರನ್ನು ಆಹ್ವಾನಿಸಲಾಗಿತ್ತು. ಆಮಂತ್ರಿತರು ನಂತರ ಮಹಾಮಸ್ತಕಾಭಿಷೇಕ ಮುಗಿದ ಕೂಡಲೇ ದೇವರ ದರ್ಶನ ಪಡೆದರು.
ಭಕ್ತರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಳ
ಸಾರ್ವಜನಿಕರಿಗೆ ಮಂಗಳವಾರ ಬೆಳಗ್ಗೆ ದೇವಸ್ಥಾನದ ಬಾಗಿಲು ತೆರೆಯಲಾಗಿತ್ತು. ಆದರೆ ರಾಮನ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿದ್ದಂತೆ ಭಕ್ತರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಇದರಿಂದ ಸ್ಥಳದಲ್ಲಿ ಭದ್ರತೆಗೆ ಸವಾಲಾದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದ ಎಲ್ಲಾ ಭಕ್ತರಿಗೆ ರಾಮಲಲ್ಲಾನ ದರ್ಶನಕ್ಕೆ ಅವಕಾಶವಿದೆ. ಆದರೆ, ತಾಳ್ಮೆಯಿಂದ ಇರುವಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಅಚಾರ್ಯ ಸತ್ಯೇಂದ್ರ ದಾಸ್ ಅವರು ಮಂಗಳವಾರ ಮನವಿ ಮಾಡಿದ್ದಾರೆ.
ಭದ್ರತೆಗೆ ಸವಾಲಾದ ಭಕ್ತರ ಸಂಖ್ಯೆ
ದೇವಾಲಯದ ಭದ್ರತೆ ನಿರ್ವಹಣಾ ಅಧಿಕಾರಿಗಳು ಮಂಗಳವಾರ ಭದ್ರತಾ ಸಿಬ್ಬಂದಿ ಭಾರೀ ಯಾತ್ರಾರ್ಥಿಗಳ ಗುಂಪನ್ನಿ ನಿಯಂತ್ರಿಸಲು ಕಷ್ಟಪಟ್ಟ ನಂತರ ಈ ಹೇಳಿಕೆ ಬಂದಿದೆ. ಎಲ್ಲಾ ಭಕ್ತರು ರಾಮಲಲ್ಲಾನ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ದರ್ಶನವು ನಿರಂತರವಾಗಿ ನಡೆಯುತ್ತಿದೆ. ಭಕ್ತರು ತಾಳ್ಮೆಯಿಂದ ಇರಬೇಕೆಂದು ಅವರು ಹೇಳಿದ್ದಾರೆ.
ಮಂಗಳವಾರ ಮುಂಜಾನೆ ಶ್ರೀರಾಮನ ದರ್ಶನ ಪಡೆಯಲು ರಾಮಮಂದಿರಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಸುಮಾರು ಮೂರು ಲಕ್ಷ ಜನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಹೊರಗೆ ಕಾಯುತ್ತಿರುವವರ ಸಂಖ್ಯೆಯೂ ಅಧಿಕವಾಗಿತ್ತು. ಸೋಮವಾರ ರಾತ್ರಿಯಿಂದಲೇ ಕೆಲವರು ಸರತಿ ಸಾಲಿನಲ್ಲಿ ನಿಂತಿದ್ದರು.
ರಾಮಮಂದಿರದ ಗರ್ಭಗುಡಿಯೊಳಗೆ ಜನಸಂದಣಿಯನ್ನು ನಿರ್ವಹಿಸಲು ಸ್ವತ: ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಮತ್ತು ಉತ್ತರ ಪ್ರದೇಶ ಡಿಜಿ ಪ್ರಶಾಂತ್ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications