Manipur video: 7ನೇ ಆರೋಪಿ ಬಂಧನ, ಸಂಸತ್‌ನಲ್ಲಿ ಪಟ್ಟು ಸಡಿಲಿಸದ ವಿಪಕ್ಷಗಳು
ಇಂಪಾಲ್, ಜುಲೈ 25: ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರ, ಮಹಿಳೆಯ ಬೆತ್ತಲೆ ಮೆರವಣಿಗೆ ಸಂಗತಿ ರಾಷ್ಟ್ರಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ. ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿದೆ. ಈ ಪ್ರಕರಣ ಸಂಬಂಧ ಪೊಲೀಸರು ಇದೀಗ 7ನೇ ಆರೋಪಿಯನ್ನು ಬಂಧಿಸಿದ್ದಾರೆ.
ಮಣಿಪುರದ ಕಾಂಗ್‌ಪೋಕ್ಪಿ ಪ್ರದೇಶದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿತ್ತು. ಅಲ್ಲದೇ ಅವರಿಬ್ಬರ ಮೇಲೆ ಬುಡಕಟ್ಟು ಸಂಘಟನೆಯೊಂದು ಹೊಲವೊಂದರಲ್ಲಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಿದೆ. ಪ್ರಕರಣ ಮತ್ತೊಬ್ಬ ಆರೋಪಿಯನ್ನು ತೌಬಲ್ ಜಿಲ್ಲೆಯಲ್ಲಿ ಸೋಮವಾರ ಬಂಧನವಾಗಿದೆ.

ಇಂಫಾಲ್ ರಾಜ್ಯದ ರಾಜಧಾನಿಯಿಂದ 35 ಕಿಲೋಮೀಟರ್ ದೂರದಲ್ಲಿರುವ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಕಳೆದ ಮೇ 4 ರಂದು ಮಹಿಳೆಯತ ಬೆತ್ತಲೆ ಮೆರವಣಿಗೆ ನಡೆದಿತ್ತು ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) ಆರೋಪಿಸಿದೆ. ಕಾಂಗ್‌ಪೊಕ್ಪಿಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಿಸಿದ್ದರೂ, ಬೇರೆ ಜಿಲ್ಲೆಯಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಣಿಪುರ: ಈವರೆಗೆ ಏಳು ಮಂದಿ ಬಂಧನ
ನಗ್ನ ಮಹಿಳೆಯರ ಮೆರವಣಿಗೆ ಘಟನೆಯ 26 ಸೆಕೆಂಡುಗಳ ವೀಡಿಯೊ ಆನ್‌ಲೈನ್‌ನಲ್ಲಿ ಹರಿದಾಡಿದೆ. ವಿಷಯ ತಿಳಿದ ಒಂದು ದಿನದ ನಂತರ ಜುಲೈ 20 ರಂದು ಗುರುವಾರ ಮೊದಲ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ದಿನ ಇನ್ನೂ ಮೂವರನ್ನು ಬಂಧಿಸಲಾಗಿದೆ. ಇನ್ನೂ ಕಳೆದ ಶನಿವಾರ ಬಂಧಿಸಲಾದ ಐದನೇ ಆರೋಪಿ 19 ವರ್ಷದವನಾಗಿದ್ದರೆ, ಆರನೇ ಆರೋಪಿ ಅಪ್ರಾಪ್ತ ವಯಸ್ಸಿನವನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ನೆನ್ನೆ ಸೋಮವಾರ ಏಳನೇ ಆರೋಪಿಯ ಬಂಧನವಾಗಿದೆ.

ಮಣಿಪುರದಲ್ಲಿ ಪರಿಶಿಷ್ಟ ಪಂಗಡಗಳ (ST) ಸ್ಥಾನಮಾನದ ಬೇಡಿಕೆ ಕಾರಣದಿಂದ ಶುರುವಾದ ಮೈತೆಯ್ ಮತ್ತು ಕುಕಿ ಬುಡಕಟ್ಟು ಜನಾಂಗದವರ ನಡುವೆ ಹಿಂಸಾಚಾರ ಭುಗಿಲೆದ್ದು ದೇಶದ ಭಯಾನಕ ಘಟನೆಯ ಸಾಲಿಗೆ ಸೇರಿದೆ. ಈ ಈಶಾನ್ಯ ರಾಜ್ಯದ ಹಿಂಸಾಚಾರದಿಂದಾಗಿ ಈವರೆಗೆ 120 ಕ್ಕೂ ಹೆಚ್ಚು ಜನರ ಸಾವಾಗಿದೆ. ಸಾವಿರಾರು ಜನರನ್ನು ಸುರಕ್ಷಿತ ಸ್ತಳಕ್ಕೆ ಸ್ಥಳಾಂತರಿಸಲಾಗಿದೆ.
ಸಂಸತ್ ಕಲಾಪ ಅಲುಗಾಡಿಸಿದ ಮಣಿಪುರ ಘರ್ಷಣೆ
ಮಣಿಪುರದ ಘಟನೆಗಳು ಸಂಸತ್ತಿನ ಮುಂಗಾರು ಅಧಿವೇಶನದ ಕಲಾಪವನ್ನೆ ಅಲುಗಾಡಿಸಿವೆ. ಈ ಜನಾಂಗೀಯ ಘರ್ಷಣೆಯ ಕುರಿತು ಸರ್ಕಾರ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳ ಸಂಸದರ ಗುಂಪು ಸಂಸತ್ ಭವನದ ಮಹಾತ್ಮ ಗಾಂಧಿ ಅವರ ಪ್ರತಿಮೆ ಎದುರು ಸೋಮವಾರ ರಾತ್ರಿ ಮೌನ ಪ್ರತಿಭಟನೆ ನಡೆಸಿದರು. ಪ್ರಧಾನಿ ಮೋದಿಯವರು ಸದನಕ್ಕೆ ಬಂದು ಜನಾಂಗೀಯ ಘರ್ಷಣೆ ಕುರಿತು ಸಮಗ್ರ ಹೇಳಿಕೆ ನೀಡುವಂತೆ ವಿಪಕ್ಷಗಳು ಆಗ್ರಹಿಸಿವೆ.
ಸಂಸತ್ ಮುಂಗಾರು ಅಧಿವೇಶನಲ್ಲಿ ಕಳೆದ ಮೂರು ದಿನಗಳಿಂದ ಮಣಿಪುರ ವಿಚಾರವಾಗಿ ಚರ್ಚೆಗಳು ನಡೆದಿಲ್ಲ. ಈ ಕುರಿತು ಅನಿಯಂತ್ರಿತವಾಗಿ ಚರ್ಚೆ ಅವಕಾಶ ನೀಡದ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಕಿಡಿ ಕಾರಿದ್ದಾರೆ. ಪ್ರಧಾನಿ ಸದನಕ್ಕೆ ಬಂದು ಹೇಳಿಕೆ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಪ್ರತಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕರು, ಪ್ರತಿಪಕ್ಷಗಳು ಮಣಿಪುರದ ಚರ್ಚೆಯಿಂದ ನುಣುಚಿಕೊಳ್ಳುತ್ತಿವೆ. ಇತರ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಅವರು ಮೌನವಹಿಸಿದ ವಿಪಕ್ಷಗಳ ನಡೆಯನ್ನು ಅವರು ಟೀಕಿಸಿದೆ.












Click it and Unblock the Notifications