ಮಣಿಪುರ; ಮತ್ತೆ ಘರ್ಷಣೆ, ಎರಡು ಜಿಲ್ಲೆಗಳಲ್ಲಿ ಕರ್ಪ್ಯೂ ಜಾರಿ
ಗುವಾಹಟಿ, ಸೆಪ್ಟೆಂಬರ್ 22; ಮಣಿಪುರದ ಇಂಫಾಲ್ ಕಣಿವೆಯಲ್ಲಿ 'ಮೀರಾ ಪೈಬಿ' ನೇತೃತ್ವದಡಿ ಮಹಿಳೆಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರ ಜೊತೆ ಘರ್ಷಣೆ ನಡೆದಿದೆ. ಎರಡು ಜಿಲ್ಲೆಗಳಲ್ಲಿ ಮತ್ತೆ ಕರ್ಪ್ಯೂ ಜಾರಿಗೊಳಿಸಲಾಗಿದೆ.
ಮೈತೇಯಿ ಸಮುದಾಯಕ್ಕೆ ಸೇರಿದ ಐವರು ಯುವಕರನ್ನು ಯಾವುದೇ ಷರತ್ತುಗಳಿಲ್ಲದೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಮಹಿಳೆಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿದರು. ಹಲವು ಕಡೆ ರಸ್ತೆ ಸಂಚಾರವನ್ನು ಬಂದ್ ಮಾಡಿದರು. ಇದನ್ನು ತಡೆಯಲು ಬಂದ ಪೊಲೀಸರ ಜೊತೆ ಸಂಘರ್ಷ ನಡೆಸಿದರು.

ಪೊಲೀಸರು ಪ್ರತಿಭಟನಾ ಗುಂಪನ್ನು ಚದುರಿಸಲು ಟಿಯರ್ ಗ್ಯಾಸ್ ಶೆಲ್ ಸಿಡಿಸಿದರು. ಮತ್ತೆ ಘರ್ಷಣೆ ಉಂಟಾಗುವ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಿ, ಕರ್ಪ್ಯೂ ಜಾರಿ ಮಾಡಲಾಗಿದೆ.
ಯುವಕರ ಬಂಧನ ಏಕೆ?; ಪೊಲೀಸರು ಹೇಳುವ ಪ್ರಕಾರ ಯುವಕರು ಸೆಪ್ಟೆಂಬರ್ 16ರಂದು ಪೊಲೀಸರ ಸೋಗಿನಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಾಗಾಟ ಮಾಡುತ್ತಿದ್ದರು. ಆಗ ಅವರನ್ನು ಬಂಧಿಸಿ ಕಾನೂನು ಬಾಹಿರ (ಚಟುವಟಿಕೆಗಳ ತಡೆಗಟ್ಟುವಿಕೆ) ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಮಣಿಪುರದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಸುಲಿಗೆ, ಬೆದರಿಕೆ ಹಾಕಿದ ಪ್ರಕರಣಗಳು ವರದಿಯಾಗಿದ್ದವು. ಮೊದಲ ಬಾರಿಗೆ ಯುವಕರು ಪೊಲೀಸರ ಸಮವಸ್ತ್ರ ಧರಿಸಿ ಶಸ್ತ್ರಾಸ್ತ್ರ ಸಾಗಣೆ ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕುರಿತು ಎಲ್ಲಾ ಆಯಾಮದಿಂದಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಐವರು ಯುವಕರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ತಮ್ಮ ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಬಂಧನ ಖಂಡಿಸಿ ಪೊರೊಂಪತ್ ಪೊಲೀಸ್ ಠಾಣೆ ಎದುರು ಜನರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದರು.
ಆಗಲೂ ಸಹ ಘರ್ಷಣೆ ಉಂಟಾಗಿತ್ತು. ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದರು. ಗುರುವಾರ ಮಹಿಳೆಯರು 'ಮೀರಾ ಪೈಬಿ' ನೇತೃತ್ವದಡಿ ಯುವಕರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಆಗಮಿಸಿದ್ದರು. ಆಗ ಮಹಿಳೆಯರನ್ನು ಪೊಲೀಸರು ತಡೆದಾಗ ಘರ್ಷಣೆ ನಡೆದಿದೆ.
ಮಣಿಪುರದಲ್ಲಿ ಹಲವು ದಿನಗಳಿಂದ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಘರ್ಷಣೆ ನಡೆದು ಹಿಂಸಾಚಾರ ನಡೆಯುತ್ತಿದೆ. ಇದುವರೆಗೂ ರಾಜ್ಯದಲ್ಲಿ 175 ಜನರು ಮೃತಪಟ್ಟಿದ್ದು, ಸುಮಾರು 60 ಸಾವಿರ ಜನರು ನಿರಾಶ್ರಿತರಾಗಿದ್ದಾರೆ.
ಪೊಲೀಸ್ ಅಧಿಕಾರಿಗಳ ಮಾಹಿತಿಯಂತೆ ಮಣಿಪುರದಲ್ಲಿ ಇದುವರೆಗೆ 32 ಮಂದಿ ನಾಪತ್ತೆಯಾಗಿದ್ದಾರೆ. 4,786 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. 386 ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ. ಹೆಚ್ಚು ಹಿಂಸಾಚಾರ ನಡೆದ ಜಿಲ್ಲೆಗಳಲ್ಲಿ ಕರ್ಪ್ಯೂ ಜಾರಿಗೊಳಿಸಲಾಗುತ್ತದೆ. ಕಳೆದ ಒಂದು ವಾರದಿಂದ ಹಿಂಸಚಾರ ನಡೆಯದ ಕಡೆ ಕರ್ಪ್ಯೂವನ್ನು ಕೆಲವು ಗಂಟೆಗಳ ಕಾಲ ಸಡಿಲಿಸಲಾಗಿತ್ತು.
ಮಣಿಪುರದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಐ. ಕೆ. ಮುವಾ ಮಾತನಾಡಿ, "ಮಣಿಪುರವನ್ನು ಸಹಜ ಸ್ಥಿತಿಗೆ ತರಲು ಪೊಲೀಸರು, ಕೇಂದ್ರದ ಪಡೆಗಳು ಮತ್ತು ನಾಗರಿಕ ಆಡಳಿತ ಕೆಲಸ ಮಾಡುತ್ತಿದೆ. ಮಣಿಪುರವನ್ನು ಮೊದಲಿನ ಸ್ಥಿತಿಗೆ ತರುವ ಭರವಸೆನ್ನು ನಾವು ನೀಡುತ್ತೇವೆ" ಎಂದು ಭರವಸೆ ನೀಡಿದ್ದಾರೆ.
"ಹಿಂಸಚಾರದ ಸಂದರ್ಭದಲ್ಲಿ ಪೊಲೀಸರ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿದೆ. ಕಾಣೆಯಾಗಿದ್ದ ಶಸ್ತ್ರಾಸ್ತ್ರಗಳಲ್ಲಿ 1,359 ಬಂದೂಕು, 15,050 ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ" ಎಂದು ಹೇಳಿದ್ದರು.












Click it and Unblock the Notifications