Manipur violence: ರಾತ್ರಿಯಿಡೀ ಗಲಭೆ, ಗುಂಡಿನ ದಾಳಿ, ಶಸ್ತ್ರಾಗಾರ ಧ್ವಂಸ, ಬಿಜೆಪಿ ನಾಯಕರ ಮನೆಗಳೇ ಟಾರ್ಗೆಟ್
ಗುವಾಹಟಿ, ಜೂನ್ 17: ಸಂಘರ್ಷ ಪೀಡಿತ ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾ ಮತ್ತು ಚುರಾಚಂದ್‌ಪುರ ಜಿಲ್ಲೆಯ ಕಾಂಗ್ವಾಯ್‌ನಲ್ಲಿ ನಿನ್ನೆ ರಾತ್ರಿಯಿಡೀ ಗಲಭೆ, ದೊಂಬಿ ಹಾಗೂ ದಾಳಿಗಳು ನಡೆದಿವೆ. ಉದ್ರಿಕ್ತರ ಗುಂಪು ಸೇನಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆದಿವೆ. ಇಂದು ಬೆಳಗಿನ ವರೆಗೂ ರಕ್ತಸಿಕ್ತ ಸಂಘರ್ಷ ಮುಂದುವರಿದೇ ಇದೆ ಎಂದು ಪೊಲೀಸ್ ಮತ್ತು ಸೇನಾ ಮೂಲಗಳು ತಿಳಿಸಿವೆ. ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವ ಅನೇಕ ಘಟನೆಗಳು ವರದಿಯಾಗಿವೆ.
ಸೇನೆ, ಅಸ್ಸಾಂ ರೈಫಲ್ಸ್, ರಾಪಿಡ್ ಆಕ್ಷನ್ ಫೋರ್ಸ್ ಮತ್ತು ರಾಜ್ಯ ಪೊಲೀಸರ ಜಂಟಿ ಪಡೆಗಳು ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮಧ್ಯರಾತ್ರಿಯವರೆಗೆ ಪರೇಡ್ ಅನ್ನು ಕೈಗೊಂಡವು. ಬಳಿಕ ಶುರುವಾದ ಗಲಭೆ ಬೆಳಗಿನ ವರೆಗೂ ಮುಂದುವರಿಯಿತು ಎಂದು ತಿಳಿದುಬಂದಿದೆ.

ಅಡ್ವಾನ್ಸ್ ಆಸ್ಪತ್ರೆ ಬಳಿಯ ಅರಮನೆ ಕಾಂಪೌಂಡ್‌ನಲ್ಲಿ ಬೆಂಕಿ ಹಚ್ಚುವ ಯತ್ನ ನಡೆದಿದೆ. ಸುಮಾರು 1,000 ಜನರ ಗುಂಪು ನಿನ್ನೆ ಸಂಜೆ ಒಟ್ಟುಗೂಡಿತು. ಬೆಂಕಿ ಹಚ್ಚಿ ವಿಧ್ವಂಸಕ ಕೃತ್ಯಕ್ಕೆ ಪ್ರಯತ್ನಿಸಿತು. ಗುಂಪನ್ನು ಚದುರಿಸಲು ಆರ್‌ಎಎಫ್ ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಹಾರಿಸಲಾಯಿತು. ಇದರಲ್ಲಿ ಇಬ್ಬರು ನಾಗರಿಕರು ಗಾಯಗೊಂಡರು ಎಂದು ವರದಿಯಾಗಿದೆ.
ಮಣಿಪುರ ವಿಶ್ವವಿದ್ಯಾನಿಲಯದ ಬಳಿ ಗುಂಪು ಗಲಭೆ ಆರಂಭಿಸಿತು. ರಾತ್ರಿ 10.40ಕ್ಕೆ ತೊಂಗ್ಜು ಬಳಿ ಜಮಾಯಿಸಿದ 200ರಿಂದ 300 ಮಂದಿ ಸ್ಥಳೀಯ ಶಾಸಕರ ನಿವಾಸವನ್ನು ಧ್ವಂಸಗೊಳಿಸಲು ಯತ್ನಿಸಿದರು ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ ಮತ್ತೊಂದು ಗುಂಪು ಇಂಫಾಲ್ ಪಶ್ಚಿಮ ಜಿಲ್ಲೆಯ ಇರಿಂಗ್‌ಬಾಮ್ ಪೊಲೀಸ್ ಠಾಣೆಯ ಶಸ್ತ್ರಾಗಾರವನ್ನು ಧ್ವಂಸಗೊಳಿಸಲು ಪ್ರಯತ್ನಿಸಿದೆ. ರಾತ್ರಿ 11.40ರ ವೇಳೆಗೆ 300ರಿಂದ 400 ಮಂದಿ ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದರು. ಆರ್‌ಎಎಫ್‌ನಿಂದ ಗುಂಪನ್ನು ಚದುರಿಸಲಾಗಿದೆ ಎಂದು ವರದಿಯಾಗಿದೆ.
ಸೇನಾ ಮೂಲಗಳ ಪ್ರಕಾರ, 200 ರಿಂದ 300 ಜನರ ಗುಂಪು ಮಧ್ಯರಾತ್ರಿಯ ನಂತರ ಸಿಂಜೆಮೈಯಲ್ಲಿ ಬಿಜೆಪಿ ಕಚೇರಿಯನ್ನು ಸುತ್ತುವರೆದಿತು ಧ್ವಂಸಕ್ಕೆ ಪ್ರಯತ್ನಿಸಿದೆ. ಗುಂಪನ್ನು ಚದುರಿಸಲು ಸೇನೆ ಸಫಲವಾಗಿದೆ ಎಂದು ತಿಳಿದುಬಂದಿದೆ.
ಮಧ್ಯರಾತ್ರಿ ಇಂಫಾಲ್ ವೆಸ್ಟ್‌ನಲ್ಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಅಧಿಕಾರಿಮಯುಮ್ ಶಾರದಾ ದೇವಿ ಅವರ ನಿವಾಸವನ್ನು ಗುಂಪು ಧ್ವಂಸ ಮಾಡಲು ಪ್ರಯತ್ನಿಸಿದೆ. ಆದರೆ ಅದನ್ನು ಸೇನೆ ಮತ್ತು ಆರ್‌ಎಎಫ್ ತಡೆಯಿತು ಎಂದು ಸೇನೆಯ ಮೂಲಗಳು ತಿಳಿಸಿವೆ.
ಕೇಂದ್ರ ಸಚಿವ ಆರ್‌ಕೆ ರಂಜನ್ ಸಿಂಗ್ ಅವರ ಮನೆಯನ್ನು 1200 ಜನರ ಗುಂಪೊಂದು ಪೆಟ್ರೋಲ್ ಬಾಂಬ್‌ಗಳನ್ನು ಎಸೆದು ಸುಟ್ಟು ಹಾಕಿದ ಒಂದು ದಿನದ ನಂತರ ಮಣಿಪುರದಲ್ಲಿ ದಾಳಿಗಳು ಮತ್ತೆ ಭುಗಿಲೆದ್ದಿವೆ.
ಕಳೆದ ಕೆಲವು ದಿನಗಳಿಂದ ಮಣಿಪುರದಲ್ಲಿ ಎರಡು ಸಮುದಾಯಗಳ ನಡುವಿನ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ ನಾಯಕರ ಆಸ್ತಿಪಾಸ್ತಿಗಳು ಗುರಿಯಾಗುತ್ತಿದೆ. ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಅತ್ಯಂತ ಅಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications