Manipur violence: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಭಾರೀ ಮಳೆ: ಅಗತ್ಯ ವಸ್ತುಗಳ ಪೂರೈಕೆಗೆ ಅಡ್ಡಿ!
ಇಂಫಾಲ್ ಆಗಸ್ಟ್ 17: ದೇಶದಲ್ಲಿ ಹಲವೆಡೆ ವರುಣನ ಅರ್ಭಟ ಜೋರಾಗಿದ್ದು ಉತ್ತರಖಂಡ, ಹಿಮಾಚಲ ಪ್ರದೇಶ ತತ್ತರಿಸಿ ಹೋಗಿವೆ. ಈ ನಡುವೆ ಮಣಿಪುರವನ್ನೂ ಮಳೆರಾಯ ಬಿಟ್ಟಿಲ್ಲ. ಹೀಮಸಾಚಾರ ಪೀಡಿತ ರಾಜ್ಯದಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ವರುಣ ಅಡ್ಡಿಪಡಿಸಿದೆ.
ಅಧಿಕ ಮಳೆಯಿಂದಾಗಿ ಮಣಿಪುರದ ನೋನಿ ಜಿಲ್ಲೆಯಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಹೀಗಾಗಿ ಇಂಫಾಲ್-ಸಿಲ್ಚಾರ್ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಇದರಿಂದಾಗಿ ಕನಿಷ್ಠ 500 ಸರಕು ವಾಹನಗಳು ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಇರಾಂಗ್ ಮತ್ತು ಅವಾಂಗ್‌ಖುಲ್ ಭಾಗ 2, ಖೋಂಗ್‌ಸಾಂಗ್ ಮತ್ತು ಅವಾಂಗ್‌ಖುಲ್ ಮತ್ತು ರಂಗ್‌ಖುಯಿ ಗ್ರಾಮದ ನಡುವಿನ ರಾಷ್ಟ್ರೀಯ ಹೆದ್ದಾರಿ 37 ರಲ್ಲಿ ಬುಧವಾರ ಭೂಕುಸಿತ ಸಂಭವಿಸಿದೆ. ರಸ್ತೆಯನ್ನು ತೆರವುಗೊಳಿಸಿ, ಸಂಚಾರವನ್ನು ಪುನರಾರಂಭಿಸುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಭೂಕುಸಿತಕ್ಕೆ ಕಾರಣವಾಗಿದೆ. ಭೂಕುಸಿತದಿಂದಾಗಿ ಕನಿಷ್ಠ 500 ಸರಕು ವಾಹನಗಳು ಹೆದ್ದಾರಿಯ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿವೆ.
ಕಳೆದ ವರ್ಷ ಜೂನ್‌ನಲ್ಲಿ ಜಿಲ್ಲೆಯಲ್ಲಿ ರೈಲ್ವೆ ನಿರ್ಮಾಣದ ಸ್ಥಳದಲ್ಲಿ ಭಾರಿ ಭೂಕುಸಿತ ಸಂಭವಿಸಿ ಕನಿಷ್ಠ 61 ಜನರು ಸಾವನ್ನಪ್ಪಿದ್ದರು. ಜೂನ್ 30 ರಂದು ಜಿರಿಬಾಮ್-ಇಂಫಾಲ್ ರೈಲು ಮಾರ್ಗದ ತುಪುಲ್ ರೈಲ್ವೆ ಯಾರ್ಡ್ ನಿರ್ಮಾಣ ಸ್ಥಳದಲ್ಲಿ ಭೂಕುಸಿತ ಸಂಭವಿಸಿತ್ತು.
ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಭೂಕುಸಿತದಿಂದಾಗಿ ಅಗತ್ಯ ವಸ್ತುಗಳ ಪೂರೈಕೆಯು ಪರಿಣಾಮ ಬೀರುವ ಆತಂಕವಿದೆ. ಅಲ್ಲಿ ದಿನಗಟ್ಟಲೆ ರಸ್ತೆ ತಡೆ ಸರಕು ವಾಹನಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ದೈನಂದಿನ ಜೀವನವನ್ನು ದುರ್ಬಲಗೊಳಿಸಿದೆ.
ಮೇ ತಿಂಗಳಲ್ಲಿ ರಾಜ್ಯದಲ್ಲಿ ಜನಾಂಗೀಯ ಘರ್ಷಣೆಗಳು ಭುಗಿಲೆದ್ದಿದ್ದು ಮೂರು ತಿಂಗಳಿಗೂ ಹೆಚ್ಚು ಕಾಲ ಹೊಂಸಾಚಾರ ಮುಂದುವರೆದಿದೆ. ಇದು 160 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು.
ಮಣಿಪುರ ಹಿಂಸಾಚಾರ
ಕಳೆದ ಮೂರು ತಿಂಗಳಿನಿಂದ ಮಣಿಪುರದಲ್ಲಿ ಮೈಟಿ ಮತ್ತು ಕುಕಿ ಜನಾಂಗಗಳ ನಡುವೆ ಘರ್ಷಣೆ ನಡೆಯುತ್ತಿದೆ. ವಿವಾದ ಶುರುವಾಗಿದ್ದು ಹೇಗೆ ಅಂದರೆ, ತಮಗೂ ಎಸ್‌ಟಿ ಸ್ಥಾನಮಾನ ನೀಡಬೇಕು ಎಂಬುದು ಮೈತೇಯಿ ಸಮುದಾಯದ ಹಲವು ದಶಕಗಳ ಆಗ್ರಹ. ಈ ಸಮುದಾಯದವರು ಮಣಿಪುರ ಹೈಕೋರ್ಟ್‌ನಲ್ಲೂ ಅರ್ಜಿ ಸಲ್ಲಿಸಿದ್ದರು. ''ಮಣಿಪುರ 1949ರಲ್ಲಿ ಭಾರತದೊಂದಿಗೆ ವಿಲೀನವಾಯಿತು. ಇದಕ್ಕೂ ಪೂರ್ವದಲ್ಲಿ ನಮಗೆ ಬುಡಕಟ್ಟು ಸ್ಥಾನಮಾನವಿತ್ತು,'' ಎಂದೂ ವಾದಿಸಿದ್ದರು. ಅಂತಿಮವಾಗಿ ಹೈಕೋರ್ಟ್, ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿಸುವಂತೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿತ್ತು.
ನಾಗಾ- ಕುಕಿಗಳ ವಾದವೇನು? ಮೈತೇಯಿ ಸಮುದಾಯಕ್ಕೆ ಮೀಸಲಾತಿ ನೀಡಲೇಬಾರದು. ರಾಜ್ಯದ 60 ವಿಧಾನಸಭಾ ಸ್ಥಾನಗಳಲ್ಲಿ 40 ಸೀಟುಗಳು ಮೈತೇಯಿ ಪ್ರಾಬಲ್ಯದ ಇಂಫಾಲ್ ಕಣಿವೆಯಲ್ಲಿವೆ. ಹೀಗಿರುವಾಗ ಇವರನ್ನು ಎಸ್‌ಟಿ ವರ್ಗಕ್ಕೆ ಸೇರಿಸಿದರೆ, ಬೆಟ್ಟಗಳಲ್ಲಿ ಇವರು ಜಮೀನು ಖರೀದಿಸಲು, ಮನೆ ಕಟ್ಟಲು ಮುಂದಾಗುತ್ತಾರೆ. ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ. ಮೈತೇಯಿ ಇನ್ನಷ್ಟು ಪ್ರಬಲಗೊಳ್ಳುತ್ತದೆ''. ಇದು ಮಣಿಪುರದಲ್ಲಿ ಘರ್ಷಣೆಗೆ ಕಾರಣವಾಗಿದೆ.
ಹಿಂಸಾಚಾರ ಪೀಡಿತ ಸ್ಥಳಗಳಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಮಳೆ ಅಡ್ಡಿಯನ್ನುಂಟು ಮಾಡಿದೆ.












Click it and Unblock the Notifications