ಮುಂದುವರಿದ ಮಣಿಪುರ ಹಿಂಸಾಚಾರ: ಕುಕಿ ಮುಖಂಡರೊಂದಿಗೆ ಹಿಂಬಾಗಿಲ ಮಾತುಕತೆ ನಡೆಸಿದ ಕೇಂದ್ರ ಸರ್ಕಾರ
ನವದೆಹಲಿ, ಜುಲೈ 08: ಮಣಿಪುರದಲ್ಲಿ ಹಿಂಸಾಚಾರ ನಡೆಸಿದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಿದ್ದೇವೆ ಎಂದು ಕೇಂದ್ರ ಸರ್ಕಾರ ಕುಕಿ ಗುಂಪುಗಳಿಗೆ ಭರವಸೆ ನೀಡಿದೆ. ಆದರೆ, ರಾಜ್ಯವು ಸಹಜ ಸ್ಥಿತಿಗೆ ಮರಳಿದ ನಂತರವೇ ರಾಜಕೀಯ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.
ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಮತ್ತು ಮಣಿಪುರ ಟ್ರೈಬಲ್ ಫೋರಮ್ ದೆಹಲಿಯ ಸದಸ್ಯರು ಜುಲೈ 7 ರಂದು ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ.

ಗೃಹ ಸಚಿವಾಲಯದ ನಾರ್ತ್ ಬ್ಲಾಕ್‌ನಲ್ಲಿರುವ ಗುಪ್ತಚರ ಬ್ಯೂರೋ (ಐಬಿ) ನಿರ್ದೇಶಕ ತಪನ್ ಕುಮಾರ್ ದೇಕಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಮೇ 3 ರಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಕುಕಿ ಮತ್ತು ಮೈಟೈ ಸಮುದಾಯಗಳು ಪರಸ್ಪರ ಸಂಘರ್ಷಕ್ಕೆ ಇಳಿದಿವೆ. ಈ ಸಮುದಾಯಗಳನ್ನು ಪ್ರತಿನಿಧಿಸುತ್ತಿರುವ ಗುಂಪುಗಳೊಂದಿಗೆ ಕೇಂದ್ರ ಸರ್ಕಾರವು ಹಿಂಬಾಗಲಿನಿಂದ ಮಾತುಕತೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ವರೆಗೆ ಮಣಿಪುರ ಸಂಘರ್ಷದಲ್ಲಿ 140 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಮಾರು 60,000 ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ. ಜೂನ್ 1 ರಂದು ಗೃಹ ಸಚಿವ ಅಮಿತ್ ಶಾ ಘೋಷಿಸಿದ ಮಣಿಪುರ ರಾಜ್ಯಪಾಲರ ನೇತೃತ್ವದ ಶಾಂತಿ ಸಮಿತಿ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ.

ಮುಂದುವರಿದ ಹಿಂಸಾಚಾರ
ಬಿಷ್ಣುಪುರ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಶಂಕಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಶುಕ್ರವಾರ ನಡುರಾತ್ರಿ 1 ಗಂಟೆ ಸುಮಾರಿಗೆ ಫೌಗಕ್ಚಾವೊ ಇಖೈ ಅವಾಂಗ್ ಲೈಕೈ ಮತ್ತು ಕ್ವಾಕ್ಟಾ ಪ್ರದೇಶದ ಕಡೆಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಒಬ್ಬ ನಾಗರಿಕ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ.
ಪೊಲೀಸರು ಮತ್ತು ಭದ್ರತಾ ಪಡೆಗಳು ಧಾವಿಸಿ ದುಷ್ಕರ್ಮಿಗಳನ್ನು ಹಿಮ್ಮೆಟ್ಟಿಸಿದ್ದಾರೆ. ಐವರು ಶಂಕಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳಿಗೆ ಬುಲೆಟ್ ಗಾಯಗಳಾಗಿದ್ದು, ಈ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೃಹ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ದೀರ್ಘಕಾಲೀನ ಮತ್ತು ಅಲ್ಪಾವಧಿಯ ಪರಿಹಾರಗಳನ್ನು ಕಂಡುಕೊಳ್ಳಲು ಚರ್ಚೆ ನಡೆಸಲಾಯಿತು ಎಂದು ಕುಕಿ ಗುಂಪುಗಳ ಸಭೆಯಲ್ಲಿ ಭಾಗವಹಿಸಿದ ಮುಖಂಡರು ತಿಳಿಸಿದ್ದಾರೆ.

ಹಿಂಸಾಚಾರ ಭುಗಿಲೆದ್ದ ನಂತರ ಸಮುದಾಯಕ್ಕೆ ಪ್ರತ್ಯೇಕ ಆಡಳಿತ ಬೇಕೆಂದು 24 ಕುಕಿ ಬಂಡಾಯ ಗುಂಪುಗಳು ಒತ್ತಾಯಿಸುತ್ತಿವೆ. ಇವರೊಂದಿಗೆ ಕೇಂದ್ರ ಸರ್ಕಾರ ಮಾತುಕತೆಯಲ್ಲಿ ತೊಡಗಿದೆ.
ರಾಜಕೀಯ ಪರಿಹಾರ
ಮಣಿಪುರದಲ್ಲಿ ಹಿಂಸಾಚಾರ ಕೊನೆಗೊಂಡರೆ ರಾಜಕೀಯ ಪರಿಹಾರವನ್ನು ತ್ವರಿತವಾಗಿ ಕಂಡುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಮೈತೈ ಸಮುದಾಯವು ದೊಡ್ಡ ಸಹೋದರನಂತೆ ವರ್ತಿಸಬೇಕು. ಕುಕಿ ಸಮುದಾಯದವರು ವಾಸವಿರುವ ಗ್ರಾಮಗಳ ಮೇಲಿನ ದಾಳಿಯನ್ನು ಮೊದಲು ನಿಲ್ಲಿಸಬೇಕು ಎಂದು ನಾವು ಹೇಳಿದ್ದೇವೆ ಎಂದು ಕುಕಿ ಮೂಲಗಳು ತಿಳಿಸಿವೆ. ಕುಕಿ ಗುಂಪುಗಳು ಐಬಿ ಅಧಿಕಾರಿಗಳಿಗೆ ಚುರಚಂದ್‌ಪುರದ 96 ಗ್ರಾಮಗಳ ಪಟ್ಟಿಯನ್ನು ಒದಗಿಸಿವೆ. ಅಲ್ಲಿ ಹಿಂಸಾಚಾರ ನಿಲ್ಲಲೇ ಬೇಕೆಂದು ಒತ್ತಾಯಿಸಿವೆ.
ಬೆಟ್ಟ ಮತ್ತು ಕಣಿವೆ ಜಿಲ್ಲೆಗಳಲ್ಲಿರುವ ಹಳ್ಳಿಗಳಲ್ಲಿ ಸ್ಥಾಪಿಸಲಾಗಿರುವ ಎಲ್ಲಾ ಬಂಕರ್‌ಗಳನ್ನು ತೆರವುಗೊಳಿಸುವುದಾಗಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿದ್ದಾರೆ. ಸಶಸ್ತ್ರ ಗುಂಪುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಗ್ರಾಮಸ್ಥರು ಮರಳಿನ ಚೀಲಗಳಿಂದ ಕೂಡಿದ ಟಿನ್ ಶೆಡ್‌ಗಳನ್ನು ನಿರ್ಮಿಸಿದ್ದಾರೆ.
ದುರ್ಬಲ ಪ್ರದೇಶಗಳಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಹಿಂಸಾಚಾರ ಪ್ರಾರಂಭವಾದಾಗಿನಿಂದ, 4,000 ಕ್ಕೂ ಹೆಚ್ಚು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೊಲೀಸರಿಂದ ಕಳವು ಮಾಡಲಾಗಿದೆ; ಇಲ್ಲಿಯವರೆಗೆ ಸುಮಾರು 1,100 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications