Manipur: ಯುವಕರಿಗೆ ಮಹಿಳೆಯರನ್ನು ಒಪ್ಪಿಸಿದ್ದ ಪೊಲೀಸರು- ಬೆತ್ತಲೆ ಮೆರವಣಿಗೆ, ಲೈಂಗಿಕ ದೌರ್ಜನ್ಯದ ಕುರಿತು ಮಹಿಳೆ ಹೇಳಿದ್ದೇನು?
ಇಂಪಾಲ, ಜುಲೈ 20: ಕುಕಿ-ಜೋಮಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲಾಗಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ಮಣಿಪುರದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಸಂತ್ರಸ್ತ ಮಹಿಳೆಯರು 'ಇಂಡಿಯನ್ ಎಕ್ಸ್‌ಪ್ರೆಸ್' ಜೊತೆ ಮಾತನಾಡಿ, ಘಟನೆಯ ಬಗ್ಗೆ ವಿವರಿಸಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ಯುವಕರ ಗುಂಪೊಂದು ಕರೆದೊಯ್ಯುತ್ತಿದೆ. ಒಬ್ಬ ಮಹಿಳೆಯ ವಯಸ್ಸು 20 ಹಾಗೂ ಇನ್ನೊಬ್ಬ ಮಹಿಳೆಯ ವಯಸ್ಸು 40. ಈ ಇಬ್ಬರು ಅಸಹಾಯಕ ಮಹಿಳೆಯರನ್ನು ಹಿಡಿದುಕೊಂಡು ಯುವಕರ ಗುಂಪೊಂದು ಹೊಲದ ಕಡೆಗೆ ನಡೆಯುತ್ತಿದೆ. ಈ ಸಮಯದಲ್ಲಿ ಒಬ್ಬ ಮಹಿಳೆಯ ಜನನಾಂಗದ ಮೇಲೆ ದುಷ್ಕರ್ಮಿಯೊಬ್ಬ ಕೈಇಡುವುದು ವಿಡಿಯೊದಲ್ಲಿ ಕಂಡುಬರುತ್ತದೆ.

ಸಂತ್ರಸ್ತರ ಪೈಕಿ ಕಿರಿಯ ಮಹಿಳೆ ಮೇಲೆ ಹಾಡಹಗಲೇ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಮೇ 18 ರಂದು ಸಲ್ಲಿಸಿದ ಪೊಲೀಸ್ ದೂರಿನಲ್ಲಿ ದಾಖಲಾಗಿದೆ.
ಕಾಂಗ್‌ಪೋಕ್ಪಿ ಜಿಲ್ಲೆಯ ತಮ್ಮ ಹಳ್ಳಿಯ ಮೇಲೆ ಯುವಕರ ಗುಂಪೊಂದು ದಾಳಿ ಮಾಡಿತು. ಬಳಿಕ ತೌಬಲ್ ಪೊಲೀಸರು ನಮ್ಮನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕಡೆಗೆ ಕರೆದೊಯ್ದರು. ಹಿಂಬಾಲಿಸಿದ ಯುವಕರ ಗುಂಪು ನಮ್ಮನ್ನು ಒಪ್ಪಿಸುವಂತೆ ಪೊಲೀಸರಿಗೆ ಒತ್ತಾಯಿಸಿತು. ಆಗ ಪೊಲೀಸರು ನಮ್ಮನ್ನು ಯುವಕರಿಗೆ ಒಪ್ಪಿಸಿದರು. ಪೊಲೀಸ್ ಠಾಣೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದ ವರೆಗೂ ನಮ್ಮನ್ನು ಬೆತ್ತಲು ಮಾಡಿ ಯುವಕರು ಕರೆದೊಯ್ದರು ಎಂದು ದೂರಿನಲ್ಲಿ ದಾಖಲಾಗಿದೆ.

ಈ ಘಟನೆ ಕುರಿತು ಗಂಡನ ಫೋನ್ ಮೂಲಕ 'ಇಂಡಿಯನ್ ಎಕ್ಸ್‌ಪ್ರೆಸ್' ಜೊತೆ ಮಾತನಾಡಿರುವ ಕಿರಿಯ ಮಹಿಳೆ, 'ನಮ್ಮ ಹಳ್ಳಿಯ ಮೇಲೆ ದಾಳಿ ಮಾಡುತ್ತಿದ್ದ ಗುಂಪಿನೊಂದಿಗೆ ಪೊಲೀಸರು ಇದ್ದರು. ಪೋಲೀಸರು ನಮ್ಮನ್ನು ಮನೆಯಿಂದ ಕರೆದುಕೊಂಡು ಹೋದರು. ಹಳ್ಳಿಯಿಂದ ಸ್ವಲ್ಪ ದೂರ ಕರೆದುಕೊಂಡು ಹೋಗಿ ಯುವಕರ ಗುಂಪಿನಲ್ಲಿ ನಮ್ಮನ್ನು ಬಿಟ್ಟರು. ಪೊಲೀಸರೇ ಮುಂದೆ ನಿಂತು ಅವರಿಗೆ ನಮ್ಮನ್ನು ಒಪ್ಪಿಸಿದರು' ಎಂದು ಹೇಳಿದ್ದಾಳೆ.
ವಿಡಿಯೊದಲ್ಲಿ ಕಾಣಿಸಿಕೊಂಡ ಇಬ್ಬರು ಮಹಿಳೆಯರ ಜೊತೆ 50 ರ ಹರೆಯದ ಇನ್ನೊಬ್ಬ ಮಹಿಳೆಯನ್ನು ಸಹ ವಿವಸ್ತ್ರಗೊಳಿಸಲಾಗಿದೆ. ಕಿರಿಯ ಮಹಿಳೆಯ ತಂದೆ ಮತ್ತು ಸಹೋದರರನ್ನು ಹತ್ಯೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಮ್ಮ ಜೊತೆಗಿದ್ದ ಪುರುಷರು ಕೊಲ್ಲಲ್ಪಟ್ಟರು. ಯುವಕರ ಗುಂಪು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿತು. ಆ ನಂತರ ನಮ್ಮನ್ನು ಬಿಟ್ಟು ಯುವಕರು ಹೋದರು. ನಾವು ಅಲ್ಲಿಯೇ ಉಳಿದೆವು ಎಂದು ಕಿರಿಯ ಮಹಿಳೆ ಹೇಳಿದ್ದಾರೆ.
ಎಫ್‌ಐಆರ್ ದಾಖಲಾಗಿ ಎರಡು ತಿಂಗಳು ಕಳೆದಿವೆ. ಈ ಘಟನೆಯನ್ನು ಸೆರೆಹಿಡಿದಿರುವ ವಿಡಿಯೊದ ಬಗ್ಗೆ ನನಗೆ ಅಥವಾ ನನ್ನ ಕುಟುಂಬಕ್ಕೆ ತಿಳಿದಿಲ್ಲ. ಈ ವಿಡಿಯೊ ರಾಷ್ಟ್ರದ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಮತ್ತು ಪೊಲೀಸರಿಗೆ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಿದೆ ಎಂದು ಅವರು ಹೇಳಿದ್ದಾರೆ.

'ಮಣಿಪುರದಲ್ಲಿ ಇಂಟರ್ನೆಟ್ ಇಲ್ಲ, ಈ ವಿಡಿಯೊ ವೈರಲ್ ಆಗಿರುವ ಬಗ್ಗೆ ನಮಗೆ ಗೊತ್ತಿಲ್ಲ' ಎಂದು ಅವರು ತಿಳಿಸಿದ್ದಾರೆ.












Click it and Unblock the Notifications