Manipur Violence: ಹಿಂಸೆಯ ಬೆಂಕಿಯಲ್ಲಿ ಬೆಂದವರಿಗೆ 3000 ಮನೆ ಸಿದ್ಧ
ಇಂಫಾಲ್: ಅಲ್ಲಿನ ಜನರಿಗೆ ನೆಮ್ಮದಿಯೇ ಇಲ್ಲ, ನೆಮ್ಮದಿಯಾಗಿ ನಿದ್ದೆ ಮಾಡುವಂತಿಲ್ಲ. ಒಂದು ತುತ್ತು ಅನ್ನ ತಿನ್ನೋದಕ್ಕೂ ಆಗುತ್ತಿಲ್ಲ. ಇನ್ನು ಹೊರಗೆ ಬಂದರೆ ಎಲ್ಲಿ ಜೀವವೇ ಹೋಗಿಬಿಡುತ್ತೋ? ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಇದು ಮಣಿಪುರದಲ್ಲಿ ಎದುರಾಗಿರುವ ಪರಿಸ್ಥಿತಿಯ ವ್ಯಥೆ. ಹೀಗೆ ಹಿಂಸೆಯ ಕಾರಣಕ್ಕೆ ಮನೆ ಕಳೆದುಕೊಂಡವರಿಗೆ ಸರ್ಕಾರ ಭರ್ಜರಿ ಸುದ್ದಿ ಕೊಟ್ಟಿದೆ.
ಹೌದು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಕಾರಣ ಮನೆ ಕಳೆದು ಕಳೆದುಕೊಂಡು ಪರದಾಡುತ್ತಿರುವ ಜನರಿಗೆ ಸರ್ಕಾರ ಸಹಾಯ ಹಸ್ತ ಚಾಚಿದೆ. ಮೇ 3ರಂದು ಮಣಿಪುರದಲ್ಲಿ ಆರಂಭವಾದ ಹಿಂಸಾಚಾರದಲ್ಲಿ 180 ಕ್ಕೂ ಹೆಚ್ಚು ಜನ ಮೃತಪಟ್ಟು, 3000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 60 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದು, ಆಸ್ತಿ ನಷ್ಟಕ್ಕೆ ಲೆಕ್ಕ ಸಿಗುತ್ತಿಲ್ಲ. ಈ ಸ್ಥಿತಿಯಲ್ಲಿ ಮಣಿಪುರ ಸರ್ಕಾರ 3,000 ಸಿದ್ಧಪಡಿಸಿದ ಮನೆಗಳನ್ನ ಜನರಿಗೆ ಹಂಚಿಕೆ ಮಾಡಲು ಸಿದ್ಧತೆ ನಡೆಸುತ್ತಿದೆ.

ಎಲ್ಲೆಲ್ಲೂ ಧಗಧಗಿಸಿದ ಕಿಚ್ಚು!
ಮಣಿಪುರದಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ಎಲ್ಲಿ ಬೇಕಾದರೂ ಬೆಂಕಿ ಬೀಳಬಹುದು. ಹೀಗೆ ಉದ್ರಿಕ್ತರ ಗುಂಪು ಕಂಡ ಕಂಡ ಜಾಗದಲ್ಲಿ ಬೆಂಕಿ ಹಚ್ಚಿ ಸಂಭ್ರಮಿಸುತ್ತಿದೆ. ಆದರೆ ಮನೆ, ಕುಟುಂಬ ಕಳೆದುಕೊಂಡ ಜನ ಮಾತ್ರ ತಾತ್ಕಾಲಿಕ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದು ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಹೀಗೆ ಚಿಂತೆಯಲ್ಲಿ ಮುಳುಗಿದ್ದ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. 3,000 ಸಿದ್ಧಪಡಿಸಿದ ಮನೆಗಳನ್ನ ಜನರಿಗೆ ಹಂಚಲು ಕ್ಷಣಗಣನೆ ಆರಂಭವಾಗಿದ್ದು 5 ವಿವಿಧ ಜಾಗದಲ್ಲಿ ಜೂನ್ 26ರಿಂದ ಕಾರ್ಯ ಶುರುವಾಗಿದೆ ಎನ್ನಲಾಗಿದೆ. ಸಾಧ್ಯವಾದಷ್ಟು ಬೇಗ ಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಮನೆಗಳ ವಿನ್ಯಾಸ ಹೇಗೆ ಇರಲಿದೆ?
ನಿರಾಶ್ರಿತರಿಗೆ ನಿರ್ಮಾಣ ಮಾಡುತ್ತಿರುವ ಮನೆಗಳಿಗೆ ಹಲವು ಪ್ರದೇಶಗಳನ್ನು ಮೀಸಲಿರಿಸಿದೆ ಮಣಿಪುರ ಸರ್ಕಾರ. ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿರುವ ಸಾಜಿವ ಕಾರಾಗೃಹದ ಬಳಿ 200 ಮನೆಗಳ ಕಾರ್ಯ ಆಗಸ್ಟ್ 20ರೊಳಗೆ ಮುಗಿಸುವ ನಿರೀಕ್ಷೆ ಇದೆ. ಪ್ರತಿ ಸಾಲಿನಲ್ಲಿ 10 ಮನೆ ಇರಲಿದ್ದು, ಎಲ್ಲ ಮನೆಗಳಲ್ಲೂ 2 ರೂಂ, 1 ಶೌಚಾಲಯ ಹಾಗೂ ಅಡುಗೆ ಮನೆ ವ್ಯವಸ್ಥೆ ಇರಲಿದೆ. ಒಟ್ಟು 160 ಕಾರ್ಮಿಕರು ಮನೆಗಳ ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ. ಹಾಗೇ ಥೌಬಲ್ ಜಿಲ್ಲೆಯ ಯೈಥಿಬಿ ಲೌಕೊಲ್ ಪ್ರದೇಶದಲ್ಲಿ ಕನಿಷ್ಠ 400 ಕುಟುಂಬಗಳಿಗೆ ಮನೆ ನಿರ್ಮಿಸಲಾಗುತ್ತಿದೆ. ಬಿಷ್ಣುಪುರ ಜಿಲ್ಲೆಯ ಕ್ವಾಟ್ಕಾದಲ್ಲಿ 120 ಮನೆ ಸಿದ್ಧವಾಗುತ್ತಿವೆ. ಹೀಗೆ ಒಟ್ಟಾರೆ 3 ಸಾವಿರ ಮನೆಗಳನ್ನ ಸರ್ಕಾರ ನಿರ್ಮಿಸಲು ಮುಂದಾಗಿದೆ.

ಶಾಂತಿ ಸಂದೇಶ ಸಾರಿದ ಮಣಿಪುರ ಸಿಎಂ
ಮಣಿಪುರ ರೈಫಲ್ಸ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ಬಳಿಕ ಮಣಿಪುರ ಸಿಎಂ ಬಿರೇನ್ ಸಿಂಗ್ ಶಾಂತಿ ಸಂದೇಶ ಸಾರಿದ್ದಾರೆ. ಹತ್ತಾರು ವರ್ಷದಿಂದ ನಾವು ಒಟ್ಟಿಗೆ ವಾಸಿಸಿದ್ದು ಈಗ ಅದೇ ರೀತಿ ಸಾಮರಸ್ಯದಿಂದ ಒಟ್ಟಿಗೆ ಬಾಳಬೇಕು. ನೂರಾರು ಜನರು ಜೀವ ಕಳೆದುಕೊಂಡು, ಹಿಂಸಾಚಾರದಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಆಸ್ತಿ ಪಾಸ್ತಿ ನಷ್ಟವಾಗಿ ಜನರು ಸಂಕಷ್ಟದಲ್ಲಿದ್ದಾರೆ. ಹಿಂಸಾಚಾರದಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗಲ್ಲ. ಹೀಗಾಗಿ ಎಲ್ಲ ಸಮುದಾಯದ ಮುಖಂಡರು ಕುಳಿತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚರ್ಚಸಲಿ ಎಂದು ಸಲಹೆ ನೀಡಿದ್ದಾರೆ.
ಡ್ರಗ್ಸ್ ವಿರುದ್ಧ ವಾರ್ ಗ್ಯಾರಂಟಿ!
ಮಣಿಪುರ ಹಿಂಸೆಯ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುವಾಗಲೇ ಮಣಿಪುರದ ಸಿಎಂ ಡ್ರಗ್ಸ್ ದಂಧೆ ವಿರುದ್ಧ ಗರಂ ಆಗಿದ್ದಾರೆ. ಡ್ರಗ್ಸ್ ವಿರುದ್ಧದ ಕ್ರಮ ಯಾವುದೇ ಸಮುದಾಯದ ಅಥವಾ ವ್ಯಕ್ತಿಗಳ ವಿರುದ್ಧ ಅಲ್ಲ. ದೇಶವನ್ನು ರಕ್ಷಿಸಲು ಇದು ಅನಿವಾರ್ಯ ಎಂದು ಬಿರೇನ್ ಸಿಂಗ್ ಗುಡುಗಿದ್ದಾರೆ. ನಿಷೇಧಿತ ಕೃಷಿಗಾಗಿ ವ್ಯಾಪಕ ಅರಣ್ಯನಾಶ ಆರಂಭಿಸಿದಾಗ ಸರ್ಕಾರವು ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ, ಅಕ್ರಮ ಡ್ರಗ್ಸ್ ದಂಧೆ ಕೊನೆಗಾಣಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಮಣಿಪುರ ಸಿಎಂ ಹೇಳಿದ್ದಾರೆ. ಹೀಗಾಗಿ ಹಿಂಸೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮದ ಮುನ್ಸೂಚನೆ ಸಿಕ್ಕಿದೆ.












Click it and Unblock the Notifications