ತಿರುಪತಿಯಲ್ಲಿ ತಿಮ್ಮಪ್ಪ ಆಶೀರ್ವದಿಸಿದ ತಾಳಿ ಮಾರಾಟ- ಮದುವೆಗೆ ಮಾಂಗಲ್ಯ ಪಡೆಯುವುದು ಹೇಗೆ?
ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗಾಗಿ ಮಾಂಗಲ್ಯವನ್ನು ಮಾರಾಟ ಮಾಡಲು ತಿರುಮಲ ತಿರುಪತಿ ಟ್ರಸ್ಟ್ ನಿರ್ಧರಿಸಿದೆ. ಕುಟುಂಬದಲ್ಲಿ ಮದುವೆ ಇದ್ದರೆ ತಿರುಮಲ ತಿರುಪತಿ ದೇವಸ್ಥಾನದಿಂದ ಮಾಂಗಲ್ಯವನ್ನು ಖರೀದಿಸಬಹುದು. ಮಾತ್ರವಲ್ಲದೆ ಏಳು ಬೆಟ್ಟಗಳ ಒಡೆಯ ತಿಮ್ಮಪ್ಪನ ದರ್ಶನವನ್ನು ಉಚಿತವಾಗಿ ಪಡೆಯಬಹುದು. ಹಾಗಾದರೆ ಮಾಂಗಲ್ಯವನ್ನು ಖರೀದಿಸುವುದು ಹೇಗೆ ಎಂಬ ಸಂಪೂರ್ಣ ವಿವರವನ್ನು ತಿಳಿಯೋಣ.
ತಿರುಮಲ ತಿರುಪತಿ ದೇವಸ್ಥಾನಂ ಕಳೆದ ಫೆಬ್ರವರಿಯಲ್ಲಿ ನಡೆದ ಸಭೆಯಲ್ಲಿ ಭಕ್ತರಿಗೆ ಮಾಂಗಲ್ಯವನ್ನು ಮಾರಾಟ ಮಾಡಲು ನಿರ್ಧರಿಸಿದೆ. ಇದರಿಂದ ವೈವಾಹಿಕ ಜೀವನಕ್ಕೆ ಕಾಲಿಡುವವರು ತಿರುಪತಿಯಲ್ಲಿ ಮಾಂಗಲ್ಯ ಖರೀದಿಸಬಹುದು. ತಿರುಪತಿಯಲ್ಲಿ ಭಕ್ತರು ಚಿನ್ನದ ತಾಳಿಯನ್ನು ಖರೀದಿಸಿ ದೇವರ ಕೃಪೆಗೆ ಪಾತ್ರರಾಗಬಹುದು.

ಅಂದಹಾಗೆ 5 ಮತ್ತು 10 ಗ್ರಾಂ ತೂಕದ ಮಾಂಗಲ್ಯವನ್ನು ತಿರುಪತಿಗೆ ಕಾಣಿಕೆಯಾಗಿ ನೀಡುವ ಚಿನ್ನದಿಂದ ತಯಾರಿಸಲಾಗುತ್ತದೆ ಎಂದು ದೇವಸ್ತಾನಂ ಆಡಳಿತ ಮಂಡಳಿ ತಿಳಿಸಿದೆ. ತಿರುಪತಿ ತಿಮ್ಮಪ್ಪನ ಪಾದಪೂಜೆಯ ನಂತರ ನವ ದಂಪತಿಗಳಿಗೆ ಪ್ರಸಾದವನ್ನು ನೀಡುವ ಮೂಲಕ ಮಾಂಗಲ್ಯವನ್ನು ನೀಡಲಾಗುತ್ತದೆ. ಹಾಗಾದರೆ ಮದುವೆಗೆ ಮಾಂಗಲ್ಯ ಪಡೆಯುವುದು ಹೇಗೆ?
ಮದುವೆಗೆ ಮಾಂಗಲ್ಯ ಪಡೆಯುವುದು ಹೇಗೆ?
* ನವದಂಪತಿಗಳು ತಮ್ಮ ಮದುವೆ ಕಾರ್ಡ್‌ನೊಂದಿಗೆ ತಿರುಪತಿ ವಿಳಾಸಕ್ಕೆ ಪೋಸ್ಟ್ ಕಳುಹಿಸಬಹುದು.
* ತಿರುಪತಿಯಲ್ಲಿಯೂ ಮಾಂಗಲ್ಯ ಖರೀದಿ ಮಾಡಬಹುದು.
* ನವದಂತಿಗಳು ಸ್ವತ: ತಿರುಪತಿಗೆ ಹೋಗಿ ಮಾಂಗಲ್ಯ ಖರೀದಿ ಮಾಡುವ ಮೂಲಕ ತಿಮ್ಮಪ್ಪನ ಆಶೀರ್ವಾದವನ್ನು ಉಚಿತವಾಗಿ ಪಡೆಯಬಹುದು.
ಬಡ ಜೋಡಿಗಳಿಗೆ ಮದುವೆ
ಈಗಾಗಲೇ ತಿರುಪತಿ ದೇವಸ್ಥಾನಂ ಟ್ರಸ್ಟ್ ತನ್ನ ವಿಶಿಷ್ಟ ಕಲ್ಯಾಣಮಸ್ತು ಕಾರ್ಯಕ್ರಮದ ಮೂಲಕ ಬಡ ಜೋಡಿಗಳಿಗೆ 32,000 ಮದುವೆಗಳನ್ನು ಮಾಡಿದೆ. ಇವರಿಗೆ ದೇವಸ್ತಾನದ ಆಡಳಿತ ಮಂಡಳಿ 2 ಗ್ರಾಂ ಚಿನ್ನದ ತಾಳಿಯನ್ನು ನೀಡಿದೆ. ಹೀಗೆ ಮದುವೆಯಾದ ದಂಪತಿಗಳು ಸಕಲ ಸಂಪತ್ತು ಪಡೆದು ಕ್ಷೇಮವಾಗಿದ್ದಾರೆ ಎಂದು ತಿರುಪತಿ ದೇವಸ್ತಾನ ತಿಳಿಸುತ್ತದೆ.
ಈ ರೀತಿಯ ಮಾಂಗಲ್ಯ ಮಾರಾಟವನ್ನು ಪರಿಚಯಿಸುವ ಮೂಲಕ, ಇದು ನವ ದಂಪತಿಗಳ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುತ್ತದೆ. ಸಂತೋಷದ ದಾಂಪತ್ಯ ಜೀವನಕ್ಕೆ ಸಹಾಯ ಮಾಡುತ್ತದೆ ಎಂದು ದೇವಸ್ತಾನಂ ಅರ್ಚಕರು ಹೇಳುತ್ತಾರೆ. ಈ ಮಂಗಲ ಸೂತ್ರಗಳು 5 ಗ್ರಾಂ ಮತ್ತು 10 ಗ್ರಾಂ ಗಾತ್ರದಲ್ಲಿ ನಾಲ್ಕೈದು ವಿನ್ಯಾಸಗಳಲ್ಲಿ ಬೆಲೆಗೆ ಅನುಗುಣವಾಗಿ ಲಭ್ಯವಿರುತ್ತದೆ. ಇವುಗಳ ಜತೆಗೆ ಲಕ್ಷ್ಮೀ ಕಾಸನ್ನೂ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ದೇವಸ್ತಾನದ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಆಡಳಿತ ಮಂಡಳಿ ಸಭೆಯ ಬಳಿಕ ತಿಳಿಸಿದರು.
5 ಕೋಟಿ ರೂಪಾಯಿ ದೇಣಿಗೆ ಸಂಗ್ರಹ
ತಿರುಮಲ ದೇವಸ್ಥಾನದ ಶ್ರೀವಾರಿ ಉಂಡಿಯಲ್ಲಿ ಪ್ರತಿನಿತ್ಯ ಸರಾಸರಿ 4.5 ಕೋಟಿಯಿಂದ 5 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗುತ್ತದೆ. ತಿರುಪತಿ ದೇವಸ್ಥಾನದ ಬಜೆಟ್ 5 ಸಾವಿರ ಕೋಟಿ ದಾಟುತ್ತಿರುವುದು ಇದೇ ಮೊದಲು. ನಗದು ಕಾಣಿಕೆಗಳಲ್ಲದೆ, ತಿರುಮಲ ದೇವಸ್ಥಾನಕ್ಕೆ ಚಿನ್ನ, ಬೆಳ್ಳಿ ಮತ್ತು ಇತರ ಲೋಹಗಳು ಸಹ ಬರುತ್ತಿವೆ. ಬಜೆಟ್ ಅಂದಾಜಿನ ಪ್ರಕಾರ, ತಿರುಪತಿ ದೇವಸ್ಥಾನವು 2024-25ರಲ್ಲಿ 1,611 ಕೋಟಿ ರೂಪಾಯಿಗಳ ಸಂಗ್ರಹವನ್ನು ನಿರೀಕ್ಷಿಸುತ್ತದೆ.
ವೆಂಕಟೇಶ್ವರ ದೇವಸ್ಥಾನಕ್ಕೆ ಭಕ್ತರಿಂದ ಕಾಣಿಕೆಯಾಗಿ ಸರಾಸರಿ ಒಂದು ಟನ್ ಚಿನ್ನ ಬರುತ್ತದೆ. ತಿರುಮಲ ತಿರುಪತಿ ದೇವಸ್ಥಾನವು ವಿವಿಧ ಬ್ಯಾಂಕ್‌ಗಳಲ್ಲಿನ ಠೇವಣಿಗಳ ಮೇಲಿನ ಬಡ್ಡಿಯಾಗಿ 1,068 ಕೋಟಿ ರೂಪಾಯಿಗಳನ್ನು ಗಳಿಸುತ್ತದೆ ಎಂದು ಅಂದಾಜಿಸಲಾಗಿದೆ. ಪ್ರಸಾದ ಮಾರಾಟದಿಂದ 600 ಕೋಟಿ ರೂಪಾಯಿ ಮತ್ತು ದರ್ಶನ ಟಿಕೆಟ್‌ಗಳ ಮಾರಾಟದಿಂದ 338 ಕೋಟಿ ರೂಪಾಯಿಗಳನ್ನು ಗಳಿಸುತ್ತದೆ. ಈ ವೇಳೆ ತಿರುವಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಭಕ್ತರು ಹಣ ನೀಡಿ ಮಾರಾಟ ಮಾಡುವ ಚಿನ್ನದ ತಾಳಿಗಳನ್ನು ಖರೀದಿಸಬಹುದು ಎಂದು ದೇವಸ್ತಾನ ತಿಳಿಸಿದೆ.












Click it and Unblock the Notifications