ತಮಿಳುನಾಡು ರಾಜಭವನ ಮೇಲೆ ಪೆಟ್ರೋಲ್ ಬಾಂಬ್ ದಾಳಿ; ಆರೋಪಿ ಬಂಧನ!
ಚೆನ್ನೈ, ಅಕ್ಟೋಬರ್ 25: ತಮಿಳುನಾಡು ರಾಜಭವನದ ಎದುರು ಪೆಟ್ರೋಲ್ ಬಾಂಬ್ ಎಸೆಯಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.ರಾಜ್ಯಪಾಲರ ಭವನದ ಮುಂದೆ ಪೆಟ್ರೋಲ್ ಬಾಂಬ್ ಎಸೆಯಲು ಯತ್ನಿಸಿದ ಖ್ಯಾತ ರೌಡಿ ಕರುಕ್ಕ ವಿನೋದ್ ನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಭವನದ ಮುಂದೆ ಬುಧವಾರ ಮಧ್ಯಾಹ್ನ 2.45ರ ಸುಮಾರಿಗೆ ಈ ಘಟನೆ ನಡೆದಿದ್ದು, ರಾಜ್ಯಪಾಲ ಆರ್.ಎನ್.ರವಿ ಅವರು ಬಳಸುತ್ತಿರುವ ರಾಜಭವನದ ಮುಖ್ಯ ಗೇಟ್ ಬಳಿ ವ್ಯಕ್ತಿ ಬಾಂಬ್ ಎಸೆಯಲು ಯತ್ನಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಪಾಲರ ಭವನದ ಎದುರು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ ನಿಗೂಢ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪೆಟ್ರೋಲ್ ಬಾಂಬ್ ಎಸೆದ ವ್ಯಕ್ತಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಕರುಕ್ಕ ವಿನೋದ್ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆತನಿಂದ ಇನ್ನೂ 3 ಪೆಟ್ರೋಲ್ ಬಾಂಬ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ವ್ಯಕ್ತಿ ಕೆಲವು ತಿಂಗಳ ಹಿಂದೆ ನಗರದ ಬಿಜೆಪಿ ಕಚೇರಿಯ ಹೊರಭಾಗದಲ್ಲಿ ಇದೇ ಕೃತ್ಯಕ್ಕೆ ಯತ್ನಿಸಿದ್ದ. ವಿನೋದ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಅವರ ಮಾನಸಿಕ ಆರೋಗ್ಯದ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ. ಅವರನ್ನು ಬಂಧಿಸಲಾಗಿದೆ ಎಂದು ಚೆನ್ನೈ ಪೊಲೀಸ್ ಆಯುಕ್ತ ಸಂದೀಪ್ ರೈ ರಾಥೋಡ್ ತಿಳಿಸಿದ್ದಾರೆ.
ಫೆಬ್ರವರಿ 2022 ರಲ್ಲಿ ಚೆನ್ನೈನಲ್ಲಿರುವ ತಮಿಳುನಾಡು ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದ ಅದೇ ವ್ಯಕ್ತಿ ಇಂದು ರಾಜಭವನದ ಮೇಲಿನ ದಾಳಿಗೆ ಹೊಣೆಗಾರನಾಗಿದ್ದಾನೆ. ಈ ನಿರಂತರ ದಾಳಿಗಳು ಡಿಎಂಕೆ ಸರ್ಕಾರವು ಈ ದಾಳಿಯನ್ನು ಪ್ರಾಯೋಜಿಸುತ್ತಿದೆ ಎನ್ನುವ ಸಂದೇಹ ಹುಟ್ಟುಹಾಕಿದೆ. ಎಂಕೆ ಸ್ಟಾಲಿನ್ ಅವರು ಎಂದಿನಂತೆ ಮುಂದಿನ ತಿರುವಿಗೆ ತಯಾರಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಅಪರಾಧ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಡಿಎಂಕೆ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ರಾಜ್ಯಪಾಲರು ರಾಜ್ಯ ಸರ್ಕಾರದ ವಿರುದ್ಧ ಮುಸುಕಿನ ಗುದ್ದಾಟ ನಡೆಸಿದ್ದರು, "ಬ್ರಿಟಿಷ್ ದ್ರಾವಿಡ ನಿರೂಪಣೆಯನ್ನು ಉತ್ತೇಜಿಸುವ ರಾಜಕೀಯ ಪಿತೂರಿಯ ಹಿನ್ನೆಲೆಯಲ್ಲಿ ತಮಿಳುನಾಡಿನ ಹಲವಾರು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರನ್ನು ಜಾತಿ ನಾಯಕರನ್ನಾಗಿ ಮಾಡಲಾಗಿದೆ" ಎಂದು ಹೇಳಿದ್ದರು. ಇದು ಡಿಎಂಕೆಯಿಂದ ಬಲವಾದ ಪ್ರತಿಕ್ರಿಯೆಯನ್ನು ಉಂಟುಮಾಡಿತು.












Click it and Unblock the Notifications