
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ; ತರೂರ್, ಖರ್ಗೆ ಭಿನ್ನ ಹಾದಿ?
ನವದೆಹಲಿ, ಅ. 2: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅಭ್ಯರ್ಥಿಗಳಾಗಿ ಉಳಿದುಕೊಂಡಿದ್ದಾರೆ. ಗಾಂಧಿ ಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬರು ಬಹಳ ವರ್ಷಗಳ ಬಳಿಕ ಅಧ್ಯಕ್ಷ ಸ್ಥಾನ ಅಲಂಕರಿಸುವುದು ಸ್ಪಷ್ಟವಾಗಿದೆ.
ಈ ವೇಳೆ, ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅವರಿಬ್ಬರು ಕಾಂಗ್ರೆಸ್‌ನೊಳಗೆ ಹುದುಗಿರುವ ಎರಡು ರೀತಿಯ ಭಾವನೆಗಳಿಗೆ ಪ್ರತೀಕವಾಗಿದ್ದಾರೆ. ಕಾಂಗ್ರೆಸ್‌ನ ಈಗಿರುವ ಸಂಘಟನಾ ವ್ಯವಸ್ಥೆ ಹೀಗೇ ಮುಂದುವರಿಯಲಿ ಎನ್ನುವ ಧ್ವನಿಯನ್ನು ಖರ್ಗೆ ಪ್ರತಿನಿಧಿಸುತ್ತಿರುವಂತೆ ಕಾಣುತ್ತಿದೆ. ಇನ್ನು, ಕಾಂಗ್ರೆಸ್‌ನ ಕಾರ್ಯನಿರ್ವಹಣೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕೆನ್ನುವವರಿಗೆ ಶಶಿ ತರೂರ್ ಪ್ರತಿನಿಧಿಯಂತೆ ತೋರುತ್ತಿದ್ದಾರೆ. ಈಗಾಗಲೆ ಇಬ್ಬರ ಮಾತುಗಳು ಕಾಂಗ್ರೆಸ್‌ನೊಳಗಿನ ದೊಡ್ಡ ಅಂತರವನ್ನು ತೋರಿಸುತ್ತಿವೆ.
3,500 ಕಿ. ಮೀ. ಪಾದಯಾತ್ರೆ ಆರಂಭಿಸಿದ ಪ್ರಶಾಂತ್ ಕಿಶೋರ್
ತಾನು ಕಾಂಗ್ರೆಸ್ ಅಧ್ಯಕ್ಷನಾದರೆ ಪಕ್ಷದೊಳಗೆ ಬದಲಾವಣೆ ತರುತ್ತೇನೆ. ಮಲ್ಲಿಕಾರ್ಜುನ ಖರ್ಗೆಯಿಂದ ಬದಲಾವಣೆ ಸಾಧ್ಯವಿಲ್ಲ. ಅವರು ಈಗಿರುವ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಾರಷ್ಟೇ ಎಂದು ಶಶಿ ತರೂರ್ ಹೇಳಿದ್ದಾರೆ.
"ನಾವು ಶತ್ರುಗಳಲ್ಲ. ಇದು ಯುದ್ಧವೂ ಅಲ್ಲ. ನಮ್ಮ ಪಕ್ಷದ ಭವಿಷ್ಯದ ಬಗ್ಗೆ ನಡೆಯುತ್ತಿರುವ ಒಂದು ಚುನಾವಣೆ. ಖರ್ಗೆಯವರು ಕಾಂಗ್ರೆಸ್ ಪಕ್ಷದ ಅಗ್ರ ಮೂರು ನಾಯಕರಲ್ಲಿ ಒಬ್ಬರು. ಇವರಂಥ ನಾಯಕರಿಗೆ ಬದಲಾವಣೆ ತರಲು ಆಗುವುದಿಲ್ಲ. ಈಗಿರುವ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ನಾನು ಪಕ್ಷದ ಕಾರ್ಯಕರ್ತರ ಅಪೇಕ್ಷೆಗೆ ತಕ್ಕಂತೆ ಬದಲಾವಣೆ ತರುತ್ತೇನೆ" ಎಂದು ಶಶಿ ತರೂರ್ ಸ್ಪಷ್ಟಪಡಿಸಿದ್ದಾರೆ.
ಒಬ್ಬನಿಂದ ಬದಲಾವಣೆ ಅಸಾಧ್ಯ ಎಂದ ಖರ್ಗೆ
ಇನ್ನು, ತಾನು ಪಕ್ಷದೊಳಗೆ ಬದಲಾವಣೆ ತರುತ್ತೇನೆ ಎಂದು ಶಶಿ ತರೂರ್ ನೀಡಿದ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ನಯವಾಗಿ ತಿರುಗೇಟು ನೀಡಿದ್ದಾರೆ.
"ಡಾ. ತರೂರ್ ಮಾತನಾಡುತ್ತಿರುವ ಯಥಾ ಸ್ಥಿತಿ ಮತ್ತು ಬದಲಾವಣೆ ವಿಚಾರವನ್ನು ಎಐಸಿಸಿ ಮತ್ತು ಪಕ್ಷದ ನಿಯೋಗಗಳು ನಿರ್ಧರಿಸುತ್ತವೆ. ಒಬ್ಬ ವ್ಯಕ್ತಿ ಕೈಗೊಳ್ಳುವ ನಿರ್ಧಾರವಲ್ಲ, ಅದು ಸಾಂಘಿಕವಾಗಿ ತೆಗೆದುಕೊಳ್ಳುವ ನಿರ್ಧಾರ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

"ನಾನು ಯಾರನ್ನೂ ವಿರೋಧಿಸಲು ಚುನಾವಣೆಗೆ ಸ್ಪರ್ಧಿಸಿಲ್ಲ. ಪಕ್ಷದ ಬಲವರ್ಧನೆಗೆ ಕಣಕ್ಕಿಳಿದಿದ್ದೇನೆ. ಪಕ್ಷದ ಹಿರಿಯರು ಮತ್ತು ಕಿರಿಯರೆನ್ನದೆ ಎಲ್ಲರ ಒತ್ತಾಯದ ಮೇರೆಗೆ ಸ್ಪರ್ಧಿಸುತ್ತಿದ್ದೇನೆ" ಎಂದೂ ಖರ್ಗೆ ತಿಳಿಸಿದ್ದಾರೆ.
"ಗಾಂಧಿ ಕುಟುಂಬದವರು ಮತ್ತು ಇತರ ಹಿರಿಯ ನಾಯಕರೊಂದಿಗೆ ನಾನು ಸಮಾಲೋಚಿಸುತ್ತೇನೆ. ಒಳ್ಳೆಯ ಸಲಹೆಗಳನ್ನು ಪರಿಗಣಿಸುತ್ತೇನೆ" ಎಂದೂ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ಅಧ್ಯಕ್ಷರಾಗಿ ಏನು ಮಾಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ತಮ್ಮ ಮಧ್ಯೆ ಚರ್ಚೆ ನಡೆಯಲಿ ಎಂದು ಶಶಿ ತರೂರ್ ಮಾಡಿರುವ ಒತ್ತಾಯದ ಬಗ್ಗೆ ಖರ್ಗೆ ಆಸಕ್ತಿ ತೋರಿಸಿಲ್ಲ.
ಖರ್ಗೆ ಪರ ನಿಂತ ಮೂವರು ವಕ್ತಾರರು
ಮಲ್ಲಿಕಾರ್ಜುನ ಖರ್ಗೆ, ಶಶಿ ತರೂರ್ ಮತ್ತು ಕೆಎನ್ ತ್ರಿಪಾಠಿ ಈ ಮೂವರು ಮೊನ್ನೆ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಇದರಲ್ಲಿ ತ್ರಿಪಾಠಿ ನಾಮಪತ್ರ ನಿನ್ನೆ ಶನಿವಾರ ತಿರಸ್ಕೃತಗೊಂಡಿತು. ಇದೀಗ ಖರ್ಗೆ ಮತ್ತು ತರೂರ್ ಇಬ್ಬರು ಕಣದಲ್ಲಿದ್ದಾರೆ. ನವೆಂಬರ್ ೮ರವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶ ಇದೆ. ಒಬ್ಬ ವ್ಯಕ್ತಿ ಒಂದು ಹುದ್ದೆ ನಿಯಮದಂತೆ ಖರ್ಗೆ ಮೊನ್ನೆ ನಾಮಪತ್ರ ಸಲ್ಲಿಕೆಗೆ ಮುನ್ನ ರಾಜ್ಯಸಭಾ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
ನಿನ್ನೆ ಶನಿವಾರ ಮಲ್ಲಿಕಾರ್ಜುನ ಖರ್ಗೆ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ ಪಕ್ಷದ ಮುಂದಿನ ಜವಾಬ್ದಾರಿಗಳ ಬಗ್ಗೆ ಮಾತನಾಡಿದ್ದರು. ನಿರುದ್ಯೋಗ, ಹಣದುಬ್ಬರ, ಬಡತನ ಇತ್ಯಾದಿ ವಿಚಾರದಲ್ಲಿ ಬಿಜೆಪಿ ನೀಡಿರುವ ಭರವಸೆ ಈಡೇರದೇ ಉಳಿದಿರುವ ಬಗ್ಗೆ ಹೇಳಿದರು.
ಆ ಪತ್ರಿಕಾಗೋಷ್ಠಿಯಲ್ಲಿ ದೀಪೇಂದರ್ ಹೂಡಾ, ಸಯದ್ ನಸೀರ್ ಹುಸೇನ್ ಮತ್ತು ಗೌರವ್ ವಲ್ಲಭ್ ಕೂಡ ಇದ್ದರು. ಈ ಮೂವರೂ ಕೂಡ ಕಾಂಗ್ರೆಸ್ ವಕ್ತಾರ ಸ್ಥಾನಗಳಿಗೆ ರಾಜೀನಾಮೆ ನೀಡಿ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ.
ಖರ್ಗೆಗೆ ಗಾಂಧಿಗಳ ಆಶೀರ್ವಾದ?
ಮಲ್ಲಿಕಾರ್ಜುನ ಖರ್ಗೆಗೆ ಗಾಂಧಿ ಕುಟುಂಬದ ಆಶೀರ್ವಾದ ಇದೆ ಎನ್ನಲಾಗಿದೆ. ಕುತೂಹಲ ಎಂದರೆ ಕಾಂಗ್ರೆಸ್‌ನೊಳಗೆ ಬಹುತೇಕ ಬಂಡಾಯದ ಧ್ವನಿ ಎತ್ತಿದ್ದ ಜಿ-23 ಗುಂಪಿನ ಹಿರಿಯ ನಾಯಕರೂ ಕೂಡ ಖರ್ಗೆಗೆ ಬೆಂಬಲಿಸಿರುವುದು ತಿಳಿದುಬಂದಿದೆ. ದೇಶಾಧ್ಯಂತ ಇರುವ ಕಾಂಗ್ರೆಸ್‌ನ 9 ಸಾವಿರ ನಿಯೋಗ ಸದಸ್ಯರು ಹೊಸ ಕಾಂಗ್ರೆಸ್ ಅಧ್ಯಕ್ಷ ಯಾರೆಂದು ನಿರ್ಧರಿಸುತ್ತಾರಾದರೂ ಗಾಂಧಿ ಕುಟುಂಬ ಯಾರ ಪರ ಒಲವು ಹೊಂದಿದೆ ಎಂಬುದೇ ಪ್ರಮುಖ ನಿರ್ಧಾರಕವಾಗಬಹುದು.
ಒಂದು ವೇಳೆ ಅಕ್ಟೋಬರ್ 8ರ ನಂತರ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಅಕ್ಟೋಬರ್ 17ರಂದು ಚುನಾವಣೆ ನಡೆಯುತ್ತದೆ. ಅಕ್ಟೋಬರ್ 19ರಂದು ಮತ ಎಣಿಕೆಯಾಗಿ ಅದೇ ದಿನ ಫಲಿತಾಂಶ ಪ್ರಕಟವಾಗುತ್ತದೆ.
(ಒನ್ಇಂಡಿಯಾ ಸುದ್ದಿ)