Rajyasabha: ಮಣಿಪುರಕ್ಕೆ ಹೋಗಲು ಪ್ರಧಾನಿ ಮೋದಿಗೆ ಸಮಯ ಸಿಕ್ಕಿಲ್ಲವೇ ಎಂದ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆ ಕಲಾಪದಲ್ಲಿ ಮಣಿಪುರ ವಿಚಾರ ಮುನ್ನಲೆಗೆ ಬಂದಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಕಲಾಪದಲ್ಲಿ ಮಣಿಪುರ ಹಿಂಸಾಚಾರ ವಿಚಾರವನ್ನು ಪ್ರಸ್ತಾಪಿಸಿದ್ದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಮಣಿಪುರದಲ್ಲಿ ಅಷ್ಟು ಹಿಂಸಾಚಾರ ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯಕ್ಕೆ ಭೇಟಿ ನೀಡಲು ಇನ್ನೂ ಸಮಯ ಸಿಕ್ಕಿಲ್ಲವೇ ಎಂದು ಪ್ರಶ್ನೆ ಮಾಡಿದರು.
'ಭಾರತ ಸಂವಿಧಾನದ 75 ವರ್ಷಗಳ ವೈಭವಯುತ ಪ್ರಯಾಣ' ವಿಚಾರ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಮಲ್ಲಿಕಾರ್ಜುನ ಖರ್ಗೆ, ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾಗಿ ಒಂದೂವರೆ ವರ್ಷ ಕಳೆದರೂ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಇನ್ನೂ ಸಮಯ ಸಿಕ್ಕಿಲ್ಲವೇ ಎಂದು ಕೇಳಿದರು.

2023ರ ಮೇ 3ರಂದು ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ ಇಂದಿಗೂ ರಾಜ್ಯದ ಜನರ ಜೀವ ಹಿಂಡುತ್ತಿದೆ. ಕುಕಿ ಮತ್ತು ಮೈತೇಯಿ ಜನಾಂಗದ ನಡುವೆ ಸಂಘರ್ಷ ನಡೆಯುತ್ತಿದ್ದು ಗಲಭೆಯಲ್ಲಿ ಈವರೆಗೂ 220ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದ್ದರೂ ಆಗಾಗ್ಗೆ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ.
ಪ್ರಧಾನಿ ನರೇಂದ್ರ ಮೋದಿ ಎಲ್ಲೇ ಚುನಾವಣೆ ನಡೆದರೂ ಅಲ್ಲಿಗೆ ಪ್ರಚಾರಕ್ಕೆ ಹೋಗಲು ಸಮಯ ಇರುತ್ತದೆ. ಆದರೆ ಮಣಿಪುರಕ್ಕೆ ಹೋಗಲು ಮಾತ್ರ ಅವರಿಗೆ ಸಮಯವಿಲ್ಲ. ರಾಹುಲ್ ಗಾಂಧು ಮಣಿಪುರಕ್ಕೆ ಭೇಟಿ ನೀಡಿ ಜನರ ಕಷ್ಟ ಕೇಳಿದರು. ನಿಮಗೆ ಇಷ್ಟೊಂದು ಭದ್ರತೆ ಇದ್ದರೂ ಮಣಿಪುರಕ್ಕೆ ಹೋಗದೇ ಇರುವುದೇಕೆ, ಮಣಿಪುರ ಸಮಸ್ಯೆಯನ್ನು ಬಗೆಹರಿಸಲು ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ನೆಹರೂ ಪತ್ರದ ಬಗ್ಗೆ ಖರ್ಗೆ ಸ್ಪಷ್ಟನೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದ ಆರೋಪಗಳಿಗೂ ಉತ್ತರ ಕೊಟ್ಟರು. ಮೇಲ್ಮನೆಯಲ್ಲಿ ಮಾತನಾಡಿದ ಸೀತಾರಾಮನ್, ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಮಾಜಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಇವರು ಸಂವಿಧಾನವನ್ನು ತಿದ್ದುಪಡಿ ಮಾಡಿದ್ದು ಪ್ರಜಾಪ್ರಭುತ್ವವನ್ನು ಬಲಪಡಿಸಲು ಅಲ್ಲ, ಅಧಿಕಾರದಲ್ಲಿದ್ದ ನಾಯಕರನ್ನು ರಕ್ಷಿಸಲು ಎಂದು ಟೀಕಿಸಿದ್ದರು.
ನಿರ್ಮಲಾ ಸೀತಾರಾಮನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ ಖರ್ಗೆ, ಜುಲೈ 3, 1950ರಂದು ಸರ್ದಾರ ವಲ್ಲಭಾಬಾಯ್ ಪಡೇಲ್, ಅಂದಿನ ಪ್ರಧಾನಿ ನೆಹರೂ ಅವರಿಗೆ ಪತ್ರ ಬರೆದಿದ್ದರು. ಸಮಸ್ಯೆಗಳಿಗೆ ಸಂವಿಧಾನದ ತಿದ್ದುಪಡಿಯೊಂದೇ ಪರಿಹಾರ ಎಂದಿದ್ದರು. ಪಟೇಲ್ ಅವರೇ ಆ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ, ಆದರೆ ನೆಹರೂ ಮೇಲೆ ಆರೋಪ ಮಾಡಲಾಗುತ್ತಿದೆ ಎಂದರು.
ನಾನು ಮುನ್ಸಿಪಾಲಿಟಿ ಶಾಲೆಯಲ್ಲಿ ಓದಿದ್ದು ನಿರ್ಮಲಾ ಸೀತಾರಾಮನ್ ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ. ಆದ್ದರಿಂದಲೇ ಅವರಿಗೆ ಇಂಗ್ಲಿಷ್, ಹಿಂದಿ ಮಾತನಾಡಲು ಚನ್ನಾಗಿ ಬರುತ್ತದೆ. ನುಡಿ ಚನ್ನಾಗಿದ್ದರೂ ನಡೆ ಸರಿಯಿಲ್ಲ ಎಂದರು. ಸಂವಿಧಾನ, ರಾಷ್ಟ್ರಧ್ವಜ, ಅಶೋಕ ಚಕ್ರವನ್ನು ದ್ವೇಷ ಮಾಡಿದವರು, ಭಾರತದ ಹಳೆಯ ಪಕ್ಷಕ್ಕೆ ಈಗ ಪಾಠ ಹೇಳಲು ಬಂದಿದ್ದಾರೆ ಎಂದು ಕಿಡಿ ಕಾರಿದರು.
ಸಂವಿಧಾನವನ್ನು ರಚಿಸಿದಾಗ ಅದರ ಪ್ರತಿಗಳನ್ನು ಸುಟ್ಟವರು ನೀವು, ಸಂವಿಧಾನ ಅಂಗೀಕರಿಸಿದಾಗ ರಾಮಲೀಲಾ ಮೈದಾನದಲ್ಲಿ ಅಂಬೇಡ್ಕರ್, ನೆಹರು, ಗಾಂಧಿ ಪ್ರತಿಕೃತಿಗಳನ್ನು ಸುಟ್ಟಿದ್ದು ಬಿಜೆಪಿಯವರು ಎಂದು ಆರೋಪಿಸಿದರು.












Click it and Unblock the Notifications