ಬಿಡುಗಡೆ ಹಂತದಲ್ಲಿ ಸಾಧ್ವಿ ಪ್ರಜ್ಞಾ: ಆಕೆ ಮೇಲೆ ನಡೆದ ದೌರ್ಜನ್ಯ?

Posted By:
Subscribe to Oneindia Kannada

ಆಕೆ ಪ್ರಖರ ಹಿಂದೂವಾದಿ, ಅಪ್ಪಟ ದೇಶಭಿಮಾನಿ. ದೇಶ ವಿರೋಧಿ ಚಟುವಟಿಕೆ ಕಂಡರೆ ಮುಗಿಬೀಳುವ ಸ್ವಭಾವ. ಬೆಂಕಿಯುಂಡೆಯಂತಹ ಈಕೆಯ ಭಾಷಣಕ್ಕೆ ಮೋಡಿಯಾಗದವರೇ ಇಲ್ಲ.

ದೇಶಾದ್ಯಂತ ಸುತ್ತಿ ನೂರಾರು ಭಾಷಣಗಳನ್ನು ಮಾಡಿ ಹಿಂದುತ್ವ ಮತ್ತು ರಾಷ್ಟವಾದ ಬಗ್ಗೆ ಜನಜಾಗೃತಿ ಮೂಡಿಸಿದ್ದ ಈಕೆ ಈಗ ಸರಿಯಾಗಿ ನಡೆದೇಳುವ ಸ್ಥಿತಿಯಲ್ಲಿಲ್ಲ. ವ್ಹೀಲ್ ಚೇರನ್ನು ಆಶ್ರಯಿಸಿರುವ ಈಕೆಗೆ ಕ್ಯಾನ್ಸರ್ ಮೂರನೇ ಹಂತದಲ್ಲಿದೆ. ಇವರೇ, ಸುಮಾರು ಎಂಟು ವರ್ಷಗಳ ಸೆರೆವಾಸದ ನಂತರ ಬಿಡುಗಡೆಯ ಹೊಸ್ತಿಲಲ್ಲಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್. (ಸಾಧ್ವಿ ಪ್ರಜ್ಞಾಗೆ ರಿಲೀಫ್)

ಮಧ್ಯಪ್ರದೇಶದ ಭಿಂಡ್ ಜಿಲ್ಲೆಯೊಂದರ ಗ್ರಾಮದಲ್ಲಿ ಜನಿಸಿದ ಈಕೆಯ ತಂದೆ ಕಟ್ಟಾ ಆರ್ ಎಸ್ ಎಸ್ ಪ್ರತಿಪಾದಕ. ನಾಲ್ವರು ಹೆಣ್ಣುಮಕ್ಕಳು, ಒಬ್ಬ ಗಂಡುಮಗ ಇದು ಅವರ ಸಂಸಾರ. ಸಾಧ್ವಿ ಪ್ರಜ್ಞಾ ಎರಡನೇಯವಳು, ಹಿಂದೂತ್ವ, ದೇಶಪ್ರೇಮ ರಕ್ತಗತವಾಗಿ ಬಂದಿತ್ತು.

ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿ, ಎಬಿವಿಪಿಯಲ್ಲಿ ತೊಡಗಿಸಿಕೊಂಡು ತನ್ನ ಹದಿನಾಲ್ಕನೇ ವಯಸ್ಸಿಗೆ ಆರ್ ಎಸ್ ಎಸ್ ಸಂಪರ್ಕಕ್ಕೆ ಬಂದ ಸಾಧ್ವಿ ಪ್ರಜ್ಞಾ, ಪ್ರಮುಖವಾಗಿ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ವಿವಿದೆಡೆ ಭಾಷಣಗಳನ್ನು ಮಾಡಿ ಅಸಂಖ್ಯಾತ ಹಿಂಬಾಲಕರನ್ನು ಹೊಂದಿದ್ದವರು.

ಗೋ ಮತ್ತು ಧರ್ಮ ರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸಿದ ಸಾಧ್ವಿ ಪ್ರಜ್ಞಾ ಸಿಂಗ್ ನಂತರದ ದಿನಗಳಲ್ಲಿ ಸನ್ಯಾಸತ್ವ ಸ್ವೀಕರಿಸಿದರು. ಸಂತರ, ಆಖಾಡ, ನಾಗಸಾಧುಗಳ ಸಂಪರ್ಕಕ್ಕೆ ಬಂದ ಸಾಧ್ವಿ, ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಮಠವನ್ನು ಸ್ಥಾಪಿಸಿದರು.

2008 ಸೆಪ್ಟಂಬರ್, ರಂಜಾನ್ ಹಬ್ಬದ ಸಮಯ. ನಾಸಿಕ್ ಜಿಲ್ಲೆ ಮಾಲೇಗಾಂವ್ ನಲ್ಲಿ ಮುಸ್ಲಿಂ ಬಾಂಧವರು ನಮಾಜ್ ಮುಗಿಸಿ ಹೊರಬಂದಾಗ ಬಾಂಬ್ ಸ್ಪೋಟಿಸಿ ಏಳು ಜನ ಮೃತ ಪಟ್ಟು, ಎಂಬತ್ತಕ್ಕೂ ಹೆಚ್ಚು ಜನ ಗಾಯಗೊಂಡರು.

ಈ ಘಟನೆಗೆ ಸಂಬಂಧಿಸಿದಂತೆ, ಬಂಧನಕ್ಕೊಳಗಾದ ಸಾಧ್ವಿ ಪ್ರಜ್ಞಾ ಸುಮಾರು ಎಂಟು ವರ್ಷಗಳ ನಂತರ ಈಗ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆಗೊಳ್ಳುವ ಹೊಸ್ತಿಲಲ್ಲಿದ್ದಾರೆ. (ಸಾಧ್ವಿ ಪ್ರಜ್ಞಾ ಸಿಂಗ್ ಜಾಮೀನು ಅರ್ಜಿ ವಜಾ)

ರಾಜಕೀಯವೇ ಮೇಲುಗೈ ಸಾಧಿಸಿದ ಈ ಪ್ರಕರಣದಲ್ಲಿ, ಕನಿಷ್ಠ ಹೆಣ್ಣು ಎನ್ನುವ ಸೌಜನ್ಯಕ್ಕಾದರೂ ಬೆಲೆಕೊಡದ ತನಿಖಾಧಾರಿಗಳು ಪ್ರಜ್ಞಾರನ್ನು ಅತ್ಯಂತ ಹೇಯವಾಗಿ, ಅಮಾನುಷವಾಗಿ ನಡೆಸಿಕೊಂಡರೆಂದೇ ಚರ್ಚೆಯಾಗಿತ್ತು. ಘಟನೆಯ ವರದಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

 ವಿಲಾಸ್ ರಾವ್ ದೇಶಮುಖ್

ವಿಲಾಸ್ ರಾವ್ ದೇಶಮುಖ್

ಮಾಲೇಗಾಂವ್ ಸ್ಪೋಟ ಪ್ರಕರಣವನ್ನು ಅಂದಿನ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ನೇತೃತ್ವದ ಕಾಂಗ್ರೆಸ್ ಸರಕಾರ ಎಟಿಎಸ್ (ಉಗ್ರ ನಿಗ್ರಹ ದಳ) ಗೆ ವಹಿಸಿತ್ತು. ಹೇಮಂತ್ ಕರ್ಕರೆ ತನಿಖಾ ತಂಡದ ನೇತೃತ್ವ ವಹಿಸಿಕೊಂಡರು.

 ಸಾಧ್ವಿ ಪ್ರಜ್ಞಾ ಸಿಂಗ್ ಮೊದಲು ಬಂಧನ

ಸಾಧ್ವಿ ಪ್ರಜ್ಞಾ ಸಿಂಗ್ ಮೊದಲು ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 2008ರಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಮೊದಲು ಬಂಧನಕ್ಕೊಳಗಾದರು.ಇದಾದ ನಂತರ ಕರ್ನಲ್ ಪುರೋಹಿತ್, ಸ್ವಾಮಿ ಆಸೀಮಾನಂದ ಸೇರಿದಂತೆ ಸುಮಾರು ಎಂಟು ಜನರನ್ನು ಬಂಧಿಸಲಾಯಿತು. ಮೂರು ವರ್ಷದ ನಂತರ (2011) ಪ್ರಕರಣವನ್ನು ಎನ್ಐಎಗೆ ವಹಿಸಲಾಯಿತು. ಜೊತೆಗೆ ಮೋಕಾ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿತ್ತು.

 ಎನ್ಐಐ ಕ್ಲೀನ್ ಚಿಟ್

ಎನ್ಐಐ ಕ್ಲೀನ್ ಚಿಟ್

ಈಗ ಕಳೆದ ಶುಕ್ರವಾರದಂದು (ಮೇ 13) ಎನ್ಐಎ, ಮಾಲೇಗಾಂವ್ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಬಂಧಿಸಲ್ಪಟ್ಟಿರುವ ಸಾಧ್ವಿ ಪ್ರಜ್ಞಾ ಮತ್ತು ಇತರ ಐವರ ಮೇಲೆ ಸೂಕ್ತ ಸಾಕ್ಷಿ ಲಭ್ಯವಾಗಿಲ್ಲ. ಬಾಂಬುಗಳು ಇರಿಸಲಾಗಿದ್ದ ಬೈಕ್ ಸಾಧ್ವಿಯದ್ದಾಗಿರಲಿಲ್ಲ ಎಂದು ಮುಂಬೈ ವಿಶೇಷ ನ್ಯಾಯಾಲಯದ ಮುಂದೆ ಹೇಳಿದೆ.

 ಬಾಂಬ್ ಇರಿಸಿದ್ದ ಬೈಕ್

ಬಾಂಬ್ ಇರಿಸಿದ್ದ ಬೈಕ್

ಬಾಂಬ್ ಇರಿಸಿದ್ದ ಬೈಕ್ ಸಾಧ್ವಿಗೆ ಸೇರಿದ್ದು ಎನ್ನುವುದನ್ನೇ ಪ್ರಮುಖ ಪುರಾವೆಯಂತೆ ಎಟಿಎಸ್ ಪರಿಗಣಿಸಿತ್ತು. ಅಸಲಿಗೆ ಎರಡು ವರ್ಷಗಳ ಹಿಂದೆಯೇ ಸಾಧ್ವಿ ಪ್ರಜ್ಞಾ ಬೈಕನ್ನು ಇನ್ನೊಬ್ಬರಿಗೆ ಮಾರಾಟ ಮಾಡಿದ್ದರು. ವಿಚಾರಣೆಯ ವೇಳೆ ಸಾರಿ ಸಾರಿ ಇದನ್ನು ಹೇಳಿದರೂ ಪ್ರಯೋಜನವಾಗಿರಲಿಲ್ಲ.

 ನಿರಂತರ ದೌರ್ಜನ್ಯ

ನಿರಂತರ ದೌರ್ಜನ್ಯ

ಜುಲೈ 2009ರಲ್ಲಿ ತನ್ನ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯದ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಿಗೆ ಸಾಧ್ವಿ ಪ್ರಜ್ಞಾ ಪತ್ರ ಬರೆದಿದ್ದರು. ಆದರೆ, ಇವರ ಆಕ್ರಂದನಕ್ಕೆ ಸ್ಪಂದಿಸದ ವಾಹಿನಿಗಳು ವಸ್ತುನಿಷ್ಠ ವರದಿ ಪ್ರಕಟಿಸಲು ತೋರಿಸಿದ ಅಸಡ್ಡೆಯೂ ಪರವಿರೋಧ ಚರ್ಚೆಗೂಳಗಾಗಿತ್ತು.

 ಮಾನವಹಕ್ಕು ಹೋರಾಟಗಾರರು

ಮಾನವಹಕ್ಕು ಹೋರಾಟಗಾರರು

ಅಧಿಕಾರಿಗಳು ನನಗೆ ತುಂಬಾ ಹಿಂಸೆ ನೀಡುತ್ತಿದ್ದಾರೆ. ಬೆಲ್ಟಿನಲ್ಲಿ, ಕಾಲಿನಲ್ಲಿ ಒದೆಯುತ್ತಾರೆ. ಅನುಮತಿ ಇಲ್ಲದೇ ಏನೇನೋ ರಕ್ತ ಪರೀಕ್ಷೆ ಮಾಡಿಸುತ್ತಿದ್ದಾರೆಂದು ಮಾಧ್ಯಮದವರಿಗೆ ಪತ್ರದ ಮೂಲಕ ಅವಲತ್ತು ತೋಡಿಕೊಂಡರೂ ಉಪಯೋಗಕ್ಕೆ ಬರಲಿಲ್ಲ. ಇನ್ನು ಮಾನವಹಕ್ಕು ಹೋರಾಟಗಾರರು ಏನು ಮಾಡುತ್ತಿದ್ದರೋ ದೇವರೇ ಬಲ್ಲ.

 ಸುಶೀಲ್ ಕುಮಾರ್ ಶಿಂಧೆ

ಸುಶೀಲ್ ಕುಮಾರ್ ಶಿಂಧೆ

ಕೇಸರಿ ಭಯೋತ್ಪಾದನೆ ಎನ್ನುವ ಹೊಸ ಹೆಸರನ್ನು ಹುಟ್ಟುಹಾಕಿದ್ದ ಅಂದಿನ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ನಂತರ ಕ್ಷಮೆ ಕೇಳಿದ್ದರು. ಸಾಧ್ವಿ ಬಂಧನಕ್ಕೊಳಗಾದಾಗ ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಸಾಧ್ವಿ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿತ್ತು, ಈಗ ಬಿಜೆಪಿ ಅಧಿಕಾರಕ್ಕೆ ಬಂದಿದೆ.

 ಎದೆ ಕ್ಯಾನ್ಸರ್ ಮೂರನೇ ಹಂತದಲ್ಲಿ

ಎದೆ ಕ್ಯಾನ್ಸರ್ ಮೂರನೇ ಹಂತದಲ್ಲಿ

ಸಾಧ್ವಿಗೆ ಈಗ ಎದೆ ಕ್ಯಾನ್ಸರ್ ಮೂರನೇ ಹಂತದಲ್ಲಿದೆ. ಸಂಪೂರ್ಣ ಜರ್ಝರಿತರಾಗಿರುವ ಸಾಧ್ವಿ, ಭೋಪಾಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎನ್ಐಐ ನೀಡಿದ ವರದಿಯಂತೆ ಮೇ 30ರಂದು ವಿಚಾರಣೆ ನಡೆಯುವ ಸಾಧ್ಯತೆಯಿದ್ದು, ಎಲ್ಲರೂ ಬಿಡುಗಡೆಯಾಗುವ ಸಾಧ್ಯತೆಯಿದೆ. ಫೈರ್ ಬ್ರ್ಯಾಂಡ್ ಆಗಿದ್ದ ಸಾಧ್ವಿನ ಈಗಿನ ಪರಿಸ್ಥಿತಿ ಕಂಡರೆ ಯಾರಿಗಾದರೂ ವಿಷಾದವಾಗದೇ ಇರದು.

 ಸಾಧ್ವಿ ಪ್ರಜ್ಞಾ ಅನುಭವಿಸಿದ ಯಮಯಾತನೆ

ಸಾಧ್ವಿ ಪ್ರಜ್ಞಾ ಅನುಭವಿಸಿದ ಯಮಯಾತನೆ

ಸಾಕ್ಷ್ಯಾಧಾರದ ಕೊರತೆಯಿಂದ ಸಾಧ್ವಿ ಈಗ ಬಿಡುಗಡೆಯ ಹಂತದಲ್ಲಿರಬಹುದು, ಆದರೆ ಎಂಟು ವರ್ಷಗಳಲ್ಲಿ ಅವರು ಪಟ್ಟರು ಎನ್ನಲಾಗುವ ಯಮಯಾತನೆಗೆ ಉತ್ತರ ಕೊಡುವವರು ಯಾರು? ಇದೇ ಇತರ ಸಮುದಾಯದ ಮುಖಂಡರಿಗೇನಾದರೂ ಈ ರೀತಿಯ ಟ್ರೀಟ್ಮೆಂಟ್ ಸಿಕ್ಕಿದ್ದಲ್ಲಿ ಕಾಂಗ್ರೆಸ್, ಎಡಪಕ್ಷ, ಮೂರನೇ, ನಾಲ್ಕನೇ ರಂಗದವರು ಸುಮ್ಮನಿರುತ್ತಿದ್ದರೇ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುವುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
NIA clean chit to Sadhvi Pragya Singh on Malegaon blast: Tough days she faced during during eight years of jail term.
Please Wait while comments are loading...