Chhattisgarh: ಪ್ರಮುಖ ನಾಯಕ ಸೇರಿ 29 ಮಾವೋವಾದಿಗಳನ್ನು ಹತ್ಯೆಗೈದ ಭದ್ರತಾ ಪಡೆಗಳು
ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಎನ್‌ಕೌಂಟರ್‌ನಲ್ಲಿ ಹಿರಿಯ ಬಂಡಾಯ ನಾಯಕ ಶಂಕರ್ ರಾವ್ ಸೇರಿದಂತೆ 29 ಮಾವೋವಾದಿಗಳನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದಾರೆ.
ಎನ್‌ಕೌಂಟರ್ ಬಳಿಕ ಎಕೆ-47 ಮತ್ತು ಐಎನ್‌ಎಸ್‌ಎಎಸ್ ರೈಫಲ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಮಾವೋವಾದಿಗಳಿಂದ ವಶಪಡಿಸಿಕೊಳ್ಳಲಾಗಿದೆ. ದಾಳಿಯ ಸಂದರ್ಭದಲ್ಲಿ ಮೂವರು ಭದ್ರತಾ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.

ಗಾಯಗೊಂಡ ಮೂವರಲ್ಲಿ ಇಬ್ಬರು ಬಿಎಸ್‌ಎಫ್‌ನವರಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಮತ್ತೊಬ್ಬರು ಡಿಆರ್‌ಜಿ ಸಿಬ್ಬಂದಿಯಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಮೂವರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಆರ್‌ಜಿ-ಬಿಎಸ್‌ಎಫ್ ಜಂಟಿ ತಂಡವು ಮಾವೋವಾದಿ ವಿರೋಧಿ ಕಾರ್ಯಾಚರಣೆ ಸಂದರ್ಭದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಘರ್ಷಣೆ ಆರಂಭವಾಯಿತು ಎಂದು ವರದಿಗಳು ತಿಳಿಸಿವೆ. ಛತ್ತಿಸ್‌ಗಢದಲ್ಲಿ ಮಾವೋವಾದಿ ವಿರುದ್ಧ ಕಾರ್ಯಾಚರಣೆ ನಡೆಸಲು 2008ರಲ್ಲಿ ಡಿಆರ್‌ಜಿ ಅನ್ನು ಸ್ಥಾಪಿಸಲಾಯಿತು.
ಮಾರ್ಚ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಮತ್ತೊಂದು ಎನ್‌ಕೌಂಟರ್ ನಡೆದಿತ್ತು, ಈ ಘರ್ಷಣೆಯಲ್ಲಿ ಇಬ್ಬರು ಮಾವೋವಾದಿಗಳು ಮತ್ತು ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದರು. ಭದ್ರತಾ ಪಡೆಗಳು ಬಂದೂಕು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದವು.
ಗಡಿ ಭದ್ರತಾ ಪಡೆಗಳೊಂದಿಗೆ ರಾಜ್ಯ ಪೊಲೀಸ್ ಪಡೆಯ ಎರಡೂ ಘಟಕಗಳಾದ ಡಿಆರ್‌ಜಿ ಮತ್ತು ಬಸ್ತಾರ್ ಫೈಟರ್ಸ್‌ನ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಗಸ್ತು ತಿರುಗುತ್ತಿದ್ದ ತಂಡ ಅರಣ್ಯ ಪ್ರದೇಶವನ್ನು ಸುತ್ತುವರಿದಿದ್ದಾಗ ಮನಬಂದಂತೆ ಗುಂಡು ಹಾರಿಸಿದ್ದು, ಕಾಳಗಕ್ಕೆ ಕಾರಣವಾಯಿತು.
ಕಳೆದ ವರ್ಷ ನವೆಂಬರ್‌ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಅದೇ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಮಾವೋವಾದಿ ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆದಿತ್ತು.












Click it and Unblock the Notifications