Maharashtra Truck Accident: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ 10 ಮಂದಿ ಸಾವು
ಮುಂಬೈ, ಜುಲೈ 4: ಮಹಾರಾಷ್ಟ್ರದ ಧುಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಧುಲೆ ಜಿಲ್ಲೆಯ ಹೆದ್ದಾರಿಯಲ್ಲಿ ಟ್ರಕ್ ನಿಯಂತ್ರಣ ಕಳೆದುಕೊಂಡಿದ್ದು ವಾಹಗಳಿಗೆ ಡಿಕ್ಕಿ ಹೊಡೆದಿದ್ದಲ್ಲದೆ, ರಸ್ತೆ ಬದಿಯಲ್ಲಿದ್ದ ಹೋಟೆಲ್‌ಗೆ ನುಗ್ಗಿದೆ.
ಮಂಗಳವಾರ ಬೆಳಗ್ಗೆ ಈ ಭೀಕರ ಅಪಘಾತ ಸಂಭವಿಸಿದೆ. ಮುಂಬೈನಿಂದ 300 ಕಿಮೀ ದೂರದಲ್ಲಿರುವ ಧುಲೆಯ ಮುಂಬೈ-ಆಗ್ರಾ ಹೆದ್ದಾರಿಯ ಪಲಾಸ್ನರ್ ಗ್ರಾಮದ ಬಳಿ ಬೆಳಿಗ್ಗೆ 10.45 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟ್ರಕ್‌ನ ಬ್ರೇಕ್ ವಿಫಲವಾಗಿದ್ದು ಚಾಲಕ ಟ್ರಕ್ ಮೇಲೆ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ರಸ್ತೆಯಲ್ಲಿ ಸಾಗುತ್ತಿದ್ದ ಎರಡು ದ್ವಿಚಕ್ರ ವಾಹನ, ಕಾರು ಮತ್ತು ಇನ್ನೊಂದು ಕಂಟೈನರ್‌ಗೆ ನಿಯಂತ್ರಣ ಕಳೆದುಕೊಂಡ ಟ್ರಕ್ ಡಿಕ್ಕಿ ಹೊಡೆದಿದೆ. ನಂತರ ಹೆದ್ದಾರಿಯಲ್ಲಿ ಬಸ್ ನಿಲ್ದಾಣದ ಬಳಿ ಇದ್ದ ಹೋಟೆಲ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ದುರ್ಘಟನೆಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಟ್ರಕ್ ಮಧ್ಯಪ್ರದೇಶದಿಂದ ಧುಲೆ ಕಡೆಗೆ ಹೋಗುತ್ತಿತ್ತು. ಬಸ್‌ಗಾಗಿ ಕಾಯುತ್ತಿದ್ದವರ ಮೇಲೆ ಟ್ರಕ್ ಹರಿದ ಪರಿಣಾಮ ಸಾವು-ನೋವಿನ ಸಂಖ್ಯೆ ಹೆಚ್ಚಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಶಿರ್‌ಪುರ ಮತ್ತು ಧುಲೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಯನಲ್ಲಿ ಬಸ್ ಕಂಬಕ್ಕೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡು 25 ಜನ ದುರ್ಮರಣ ಹೊಂದಿದ್ದ ಭೀಕರ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಎರಡನೇ ಘೋರ ದುರಂತ ನಡೆದುಹೋಗಿದೆ.












Click it and Unblock the Notifications