Devendra Fadnavis: ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಇರುವ 3 ಚಾಲೆಂಜ್ ಇವೇ!
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರು ಆಯ್ಕೆಯಾಗಿದ್ದು, ನಾಳೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ನವೆಂಬರ್ 23ಕ್ಕೆ. ಈ ರಾಜ್ಯದಲ್ಲಿ ನವೆಂಬರ್ 20ಕ್ಕೆ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟವು ಅಮೋಘ ವಿಜಯ ಸಾಧಿಸಿದೆ. ಆದರೆ, ಅಸಲಿ ಆಟ ಈಗ ಶುರು ಎನ್ನುವಂತಾಗಿದೆ. ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರು ಮುಂದೆ ಹಾಗೂ ಮಹಾಯುತಿ ಮೈತ್ರಿಕೂಟದ ಮುಂದೆ ಬೆಟ್ಟದಷ್ಟು ಸವಾಲು ಇದೆ. ಮೂರು ಪ್ರಮುಖ ಚಾಲೆಂಜ್‌ಗಳ ವಿವರ ಇಲ್ಲಿದೆ.
ಮಹಾರಾಷ್ಟ್ರದಲ್ಲಿ ಈ ಬಾರಿ ಮಹಾಯುತಿ ಅಂದರೆ ಬಿಜೆಪಿ, ಶಿವಸೇನಾ (ಏಕನಾಥ್ ಶಿಂಧೆ ಬಣ) ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಅಜಿತ್‌ಪವಾರ್ ಬಣ) ಒಂದಾಗಿ ಚುನಾವಣೆ ಎದುರಿಸಿದ್ದವು. ಮಹಾರಾಷ್ಟ್ರದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಮಹಾಯುತಿ ಸರ್ಕಾರ ಅಧಿಕಾರದಲ್ಲಿದ್ದು, ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಇದೀಗ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗುತ್ತಿದ್ದಾರೆ. ಮಹಾಯುತಿಗೆ ಬಹುಮತ ಇದ್ದರೂ, ಮಹಾಯುತಿ ಮೈತ್ರಿಕೂಟದ ಮುಂದೆ ಸಾಲು.. ಸಾಲು ಸವಾಲುಗಳು ಇವೆ. ಅವೇನು ಎನ್ನುವ ವಿವರ ಇಲ್ಲಿದೆ.

ಮಿತ್ರಪಕ್ಷಗಳನ್ನು ನಿಭಾಯಿಸುವುದು: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಅವರ ಮುಂದೆ ಇರುವ ಬಹುದೊಡ್ಡ ಸವಾಲೆಂದರೆ, ಬಿಜೆಪಿ ಮಿತ್ರಪಕ್ಷಗಳೊಂದಿಗೆ ಹೊಂದಾಣಿಕೆಯಿಂದ ಸಾಗುವುದು ಹಾಗೂ ಅವರ ವಿಶ್ವಾಸಕ್ಕೆ ತೆಗೆದುಕೊಳ್ಳುವುದು. ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ. ಯಾಕೆಂದರೆ ಈ ರಾಜ್ಯದಲ್ಲಿ ಯಾವುದೇ ಪಕ್ಷವೂ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿಲ್ಲ.
ಹೌದು ಮಹಾರಾಷ್ಟ್ರದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿದ್ದು, ಈ ರಾಜ್ಯದ ಬಹುಮತ ಸಂಖ್ಯೆ 145 ಆಗಿದೆ. ಆದರೆ, ಯಾವುದೇ ಏಕೈಕ ಪಕ್ಷಕ್ಕೆ ಬಹುಮತ ಬಂದಿಲ್ಲ. ಈ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಿತ್ರ ಪಕ್ಷಗಳೊಂದಿಗೆ ಸೇರಿ ಸೆಣಿಸಿದ್ದವು. ಹೀಗಾಗಿ, ಶಿವಸೇನಾ (ಏಕನಾಥ್ ಶಿಂಧೆ ಬಣ) ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಅಜಿತ್‌ಪವಾರ್ ಬಣ) ನಾಯಕರು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಂದಾಣಿಕೆಯ ರಾಜಕೀಯ ಮಾಡಬೇಕಾದ ಸವಾಲು ದೇವೇಂದ್ರ ಫಡ್ನವಿಸ್ ಅವರ ಮುಂದಿದೆ.

ಈಗಾಗಲೇ ಸರ್ಕಾರ ರಚನೆ ಮಾಡುವ ಹಂತದಲ್ಲೇ ಏಕನಾಥ್ ಶಿಂಧೆ ಅವರು ಬಿಜೆಪಿ ಹೈಕಮಾಂಡ್‌ಗೆ ತಲೆಬಿಸಿಯಾಗಿದ್ದರು. ಏಕನಾಥ್ ಶಿಂಧೆ ಅವರು ಹಲವು ಡಿಮ್ಯಾಂಡ್‌ಗಳಿಗೆ ಮಣಿದೆ ಬಿಜೆಪಿ ಮುಂದಡಿ ಇಟ್ಟಿದೆ. ಅತ್ತ ಅಜಿತ್ ಪವಾರ್ ಅವರು ಸಹ ಟ್ರಬಲ್ ಕೊಡುವ ಸಾಧ್ಯತೆ ಇದೆ. ಸದ್ಯಕ್ಕೆ ಅವರು ತಣ್ಣಗಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ರಾಜಕೀಯ ಹೇಗಿರಲಿದೆ ಎನ್ನುವ ಕುತೂಹಲವಿದೆ.
ಭರವಸೆಗಳನ್ನು ಈಡೇರಿಸುವುದು: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮಿತ್ರಪಕ್ಷಗಳು ಹಲವು ಭರವಸೆಗಳನ್ನು ಕೊಟ್ಟಿವೆ. ಅದರಲ್ಲಿ ಲಡ್ಕಿ ಬಹಿನ್ (ಪ್ರೀತಿಯ ಸಹೋದರಿಯರೇ) ಎನ್ನುವ ಯೋಜನೆಯೂ ಪ್ರಮುಖವಾಗಿದೆ. ಈ ಯೋಜನೆಯು ಮಹಾರಾಷ್ಟ್ರ ಚುನಾವಣೆಯಲ್ಲಿ ಭಾರೀ ಪ್ರಭಾವ ಬೀರಿದೆ. ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರವು ಮಹಿಳೆಯರ ಸಬಲೀಕರಣ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಿತ್ತು.
ಚುನಾವಣೆಯಲ್ಲಿ ಗೆದ್ದರೆ ಈ ಯೋಜನೆಯನ್ನು ಮುಂದುವರಿಸುವುದಾಗಿ ಹೇಳಿದೆ. ಅಷ್ಟೇ ಅಲ್ಲ, ಈ ಯೋಜನೆ ಮೂಲಕ ಪ್ರತಿ ತಿಂಗಳು ಈ ಹಿಂದೆ 1,500 ರೂಪಾಯಿ ನೀಡಲಾಗುತ್ತಿತ್ತು. ಅಧಿಕಾರಕ್ಕೆ ಬಂದರೆ 2,100 ರೂಪಾಯಿ ನೀಡುವುದಾಗಿ ಭರವಸೆ ನೀಡಲಾಗಿದೆ. ಇದರೊಂದಿಗೆ ಹಲವು ಪ್ರಮುಖ ಭರವಸೆಗಳನ್ನು ನೀಡಿದ್ದು, ಇದೆಲ್ಲವನ್ನೂ ಜಾರಿ ಮಾಡುವ ಸವಾಲು ನೂತನ ಸರ್ಕಾರದ ಮೇಲಿದೆ.
ಏಕನಾಥ್ ಶಿಂಧೆಗಿಂತ ಒಳ್ಳೆಯ ಆಡಳಿತ: ಕಳೆದ ಎರಡೂವರೆ ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರವೇ ಆಡಳಿತ ನಡೆಸುತ್ತಿದ್ದು, ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿಯಾಗಿದ್ದರು. ಮಹಾರಾಷ್ಟ್ರದಲ್ಲಿ ಅವರು ಕಳೆದ ಎರಡೂವರೆ ವರ್ಷಗಳಲ್ಲಿ ಉತ್ತಮ ಆಡಳಿತ ನೀಡಿದ್ದು, ಹಲವು ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅಲ್ಲದೇ ಜನಪರ ಆಡಳಿತ ನೀಡಿದ ಹೆಗ್ಗಳಿಕೆಯೂ ಅವರ ಮೇಲೆ ಇದೆ. ಈಗ ದೇವೇಂದ್ರ ಫಡ್ನವಿಸ್ ಅವರ ಆಡಳಿತವನ್ನು ಜನ ಈ ಹಿಂದಿನ ಸರ್ಕಾರದೊಂದಿಗೆ ಹೋಲಿಕೆ ಮಾಡಿ ನೋಡಲಿದ್ದಾರೆ. ಈ ಕಾರಣಕ್ಕೆ ಅವರಷ್ಟೇ ಅಥವಾ ಅವರಿಗಿಂತ ಉತ್ತಮ ಆಡಳಿತ ನೀಡಬೇಕಾದ ಸವಾಲು ಇದೆ.
ಅಲ್ಲದೇ ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ, ಏಕಾಂಗಿಯಾಗಿ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ತರುವಷ್ಟು ಸಮರ್ಥವಾಗಿ ಪಕ್ಷವನ್ನು ಸಂಘಟಿಸುವ ಸವಾಲು ಸಹ ದೇವೇಂದ್ರ ಫಡ್ನವಿಸ್ ಅವರ ಮೇಲಿದೆ.












Click it and Unblock the Notifications