Maharashtra Assembly Elections 2024: ನವೆಂಬರ್ 2ನೇ ವಾರ ಮಹಾರಾಷ್ಟ್ರದಲ್ಲಿ ಚುನಾವಣೆ?
ಮುಂಬೈ, ಸೆಪ್ಟೆಂಬರ್ 29: ಮಹಾರಾಷ್ಟ್ರ ರಾಜ್ಯದ 288 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್‌ನಲ್ಲಿ ಮತದಾನ ನಡೆಯುವುದು ಖಚಿತವಾಗಿದೆ. ದೀಪಾವಳಿ ಹಬ್ಬದ ಬಳಿಕ ಮತದಾನ ನಡೆಯಲಿದೆ. ಆದರೆ ಎಷ್ಟು ಹಂತದಲ್ಲಿ ಮತದಾನ ನಡೆಯಲಿದೆ? ಎಂದು ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸುವಾಗ ಮಾಹಿತಿ ನೀಡಲಾಗಿದೆ. ಒಂದೇ ಹಂತದಲ್ಲಿ ಮತದಾನ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ, ಪೊಲೀಸರು ಮತ್ತು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿಯನ್ನು ಸಲ್ಲಿಕೆ ಮಾಡಿವೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ತಂಡ ಮೂರು ದಿನಗಳ ಕಾಲ ಮಹಾರಾಷ್ಟ್ರ ಪ್ರವಾಸ ಕೈಗೊಂಡಿತ್ತು. ವಿಧಾನಸಭೆ ಚುನಾವಣೆಯ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲು ಪ್ರವಾಸ ಕೈಗೊಳ್ಳಲಾಗಿತ್ತು, ಮುಂಬೈನಲ್ಲಿ ಸರಣಿ ಸಭೆಗಳನ್ನು ಆಯುಕ್ತರು ನಡೆಸಿದ್ದರು. ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಸಹ ಸಂಗ್ರಹ ಮಾಡಿದ್ದರು.

ಚುನಾವಣೆ ಕುರಿತು ಮಾತನಾಡಿದ ರಾಜೀವ್ ಕುಮಾರ್, "ಮಹಾರಾಷ್ಟ್ರದ 14ನೇ ವಿಧಾನಸಭೆಯ ಅವಧಿ ಅಂತ್ಯಗೊಳ್ಳುವ ಮೊದಲೇ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ. ಸಿದ್ಧತೆ ಕುರಿತು ವಿವಿಧ ಹಂತದ ಸಭೆಗಳನ್ನು ನಡೆಸಲಾಗಿದೆ" ಎಂದು ಹೇಳಿದರು.
ದೀಪಾವಳಿ ಹಬ್ಬ: ಮೂರು ದಿನಗಳ ಸಭೆಯ ಕುರಿತು ಮಾತನಾಡಿದ ರಾಜೀವ್ ಕುಮಾರ್, "ನಾವು 11 ರಾಜಕೀಯ ಪಕ್ಷಗಳ ಜೊತೆ ಸಭೆಯನ್ನು ನಡೆಸಿದೆವು. ಅವರು ದೀಪಾವಳಿ ಸೇರಿದಂತೆ ವಿವಿಧ ಹಬ್ಬದ ದಿನಾಂಕಗಳನ್ನು ಪರಿಶೀಲಿಸಿ ಚುನಾವಣಾ ದಿನಾಂಕವನ್ನು ನಿಗದಿಗೊಳಿಸಲು ಮನವಿ ಮಾಡಿದ್ದಾರೆ" ಎಂದರು.
"ಸದ್ಯ ಇರುವ ಸರ್ಕಾರದ ಅವಧಿ ನವೆಂಬರ್ 26ಕ್ಕೆ ಅಂತ್ಯಗೊಳ್ಳಲಿದೆ. ಅಷ್ಟರೊಳಗೆ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ದೀಪಾವಳಿ ಹಬ್ಬದ ಬಳಿಕವೇ, ಈ ಸರ್ಕಾರದ ಅವಧಿ ಪೂರ್ಣಗೊಳ್ಳುವಷ್ಟರಲ್ಲಿ ಚುನಾವಣೆಯನ್ನು ನಡೆಸಲಾಗುತ್ತದೆ" ಎಂದು ರಾಜೀವ್ ಕುಮಾರ್ ತಿಳಿಸಿದರು.
ಅಕ್ಟೋಬರ್ 31 ರಿಂದ ನವೆಂಬರ್ 3ರ ತನಕ ದೀಪಾವಳಿ ಹಬ್ಬವಿದೆ. ಹಬ್ಬದ ರಜೆಗಳು ಮುಗಿದ ಬಳಿಕ ಮತದಾನದ ದಿನಾಂಕವನ್ನು ನಿಗದಿಗೊಳಿಸುವ ನಿರೀಕ್ಷೆ ಇದೆ. ಆದರೆ ಅಕ್ಟೋಬರ್ ಅಂತ್ಯದಲ್ಲಿಯೇ ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ವೇಳಾಪಟ್ಟಿಯನ್ನು ಘೋಷಣೆ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಸದ್ಯ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದ ಸರ್ಕಾರ ಅಧಿಕಾರದಲ್ಲಿದೆ. ರಾಜ್ಯದ ಮುಖ್ಯಮಂತ್ರಿ ಏಕನಾಥ್ ಶಿಂಧೆ. ಸರ್ಕಾರದ ಅವಧಿ ನವೆಂಬರ್ 26ಕ್ಕೆ ಅಂತ್ಯಗೊಳ್ಳಲಿದೆ. ಅಷ್ಟರಲ್ಲಿ ಚುನಾವಣೆ ಪ್ರಕ್ರಿಯೆ ನಡೆದು, ಹೊಸ ಸರ್ಕಾರ ರಚನೆಯಾಗಬೇಕು.
ರಾಜೀವ್ ಕುಮಾರ್ ನೇತೃತ್ವದ ನಿಯೋಗ ರಾಜ್ಯದ ಮುಖ್ಯ ಕಾರ್ಯದರ್ಶಿ ಸುಜಾತಾ ಸುನಿಕ್ ಮತ್ತು ಪೊಲೀಸ್ ಆಯುಕ್ತೆ ರಶ್ಮಿ ಶುಕ್ಲಾ ಜೊತೆ ಸಹ ಸಭೆಯನ್ನು ನಡೆಸಿದೆ. ಪೊಲೀಸರು ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಿದರೆ ಅಗತ್ಯ ಭದ್ರತೆ ಕಲ್ಪಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದು ವಿವರಣೆ ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿಗಳ ಜೊತೆ ಆಯೋಗದ ಅಧಿಕಾರಿಗಳು ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸುವುದು, ಸರ್ಕಾರಿ ನೌಕರರ ವರ್ಗಾವಣೆಯ ಕುರಿತು ಮಾಹಿತಿಯನ್ನು ಪಡೆಯಿತು. ರಾಜ್ಯ ಚುನಾವಣಾ ಆಯೋಗದ ಜೊತೆಯೂ ಸಭೆ ನಡೆಸಿದ ತಂಡ, ನಗರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ಹಾಗೂ ಮತದಾನ ಪ್ರಮಾಣ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿತು.
ಮಹಾರಾಷ್ಟ್ರದ ಚುನಾವಣೆಯನ್ನು ಎದುರಿಸಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿ 'ಮಹಾಯುತಿ' ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ರಾಜ್ಯದಲ್ಲಿ 228 ಕ್ಷೇತ್ರಗಳಿವೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 146.
ರಾಜ್ಯದ ವಿರೋಧ ಪಕ್ಷಗಳು ಮಹಾವಿಕಾಸ್ ಅಘಾಡಿ ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟ ಇದಾಗಿದ್ದು, ಮುಂದಿನ ಚುನಾವಣೆಗೆ ಸೀಟು ಹಂಚಿಕೆ ಮಾತುಕತೆ ಈಗಾಗಲೇ ನಡೆಯುತ್ತಿದೆ.












Click it and Unblock the Notifications