Maharashtra Election 2024: ಮಹಾರಾಷ್ಟ್ರ ಸಂಪುಟ ವಿಸ್ತರಣೆ, ಬಿಜೆಪಿ ಸೂತ್ರ ಒಪ್ಪಿದ ಶಿಂಧೆ
ಮುಂಬೈ, ಡಿಸೆಂಬರ್ 15: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾನುವಾರ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ವಿಧಾನಸಭೆ ಚುನಾವಣೆ ಬಳಿಕ ಡಿಸೆಂಬರ್ 5ರಂದು 'ಮಹಾಯತಿ' ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಏಕನಾಥ್ ಶಿಂಧೆ, ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳು. ಆದರೆ ಖಾತೆ ಹಂಚಿಕೆ, ಸಂಪುಟ ವಿಸ್ತರಣೆ ಬಾಕಿ ಇತ್ತು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 132 ಸೀಟುಗಳಲ್ಲಿ ಜಯಗಳಿಸಿದೆ. ರಾಜ್ಯದಲ್ಲಿ ಮತ್ತೆ 'ಮಹಾಯತಿ' ಮೈತ್ರಿಕೂಟ ಸರ್ಕಾರ ರಚನೆ ಮಾಡಿದೆ. ಮುಖ್ಯಮಂತ್ರಿ ಬದಲಾವಣೆಯಾಗಿದ್ದು, ಈ ಬಾರಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿದ್ದಾರೆ.

ಡಿಸೆಂಬರ್ 5ರಂದು ಪ್ರಮಾಣ ವಚನ ನಡೆದರೂ ಸಹ ಇನ್ನೂ ಸಂಪುಟ ವಿಸ್ತರಣೆ ಮಾಡಿಲ್ಲ. ವಿಧಾನಸಭೆ ಚಳಿಗಾಲದ ಅಧಿವೇಶನ ಡಿಸೆಂಬರ್ 16ರಂದು ಆರಂಭವಾಗಲಿದೆ. ಇದಕ್ಕೆ ಮೊದಲು ಅಂದರೆ ಭಾನುವಾರ ಸಂಪುಟ ವಿಸ್ತರಣೆ, ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ಪಿಟಿಐ ರಾಜಭವನದ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಸಂಧಾನ ಸೂತ್ರವೇನು?; ಬಿಜೆಪಿ ಮತ್ತು ಶಿವಸೇನೆ ನಾಯಕ ಏಕನಾಥ್ ಶಿಂಧೆ ನಡುವೆ ಖಾತೆ ಹಂಚಿಕೆ ಜಟಾಪಟಿ ಕಾರಣಕ್ಕೆ ಸಂಪುಟ ವಿಸ್ತರಣೆ ವಿಳಂಬವಾಗಿತ್ತು. ಬಿಜೆಪಿ ಖಾತೆಗಳ ಕುರಿತು ಇನ್ನೊಬ್ಬ ಉಪಮುಖ್ಯಮಂತ್ರಿ ಅಜಿತ್ ಪವಾರ್ ಜೊತೆ ಈಗಾಗಲೇ ಅಂತಿಮ ಹಂತದ ಮಾತುಕತೆ ಪೂರ್ಣಗೊಳಿಸಿದೆ.
ಬಿಜೆಪಿಯ ಹಿರಿಯ ನಾಯಕರ ಹೇಳಿಕೆ ಪ್ರಕಾರ ಒಟ್ಟು 33 ಶಾಸಕರು ದೇವೇಂದ್ರ ಫಡ್ನವೀಸ್ ಸಂಪುಟವನ್ನು ಸೇರಲಿದ್ದಾರೆ. ಇವರಲ್ಲಿ ಬಿಜೆಪಿ 12, ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಎನ್‌ಸಿಪಿ (ಅಜಿತ್ ಪವಾರ್) ಬಣ 10 ಶಾಸಕರು ಇರಲಿದ್ದಾರೆ.
ಮಹಾರಾಷ್ಟ್ರ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145. ಬಿಜೆಪಿ 132 ಸೀಟುಗಳಲ್ಲಿ ಗೆದ್ದಿದ್ದು ಮುಖ್ಯಮಂತ್ರಿ ಹುದ್ದೆಯನ್ನು ಪಡೆದಿದೆ. 'ಮಹಾಯತಿ' ಮೈತ್ರಿಕೂಟದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟುಗಳನ್ನು ಹೊಂದಿವೆ. ಆದ್ದರಿಂದ ಇಬ್ಬರಿಗೂ ಸಮಾನ ಅವಕಾಶ ನೀಡಲಾಗಿದೆ.
ಉಳಿದಂತೆ ಏಕನಾಥ್ ಶಿಂಧೆ ಗೃಹ ಖಾತೆಯ ಬೇಡಿಕೆಯನ್ನು ಈಗಾಗಲೇ ಬಿಜೆಪಿ ತಳ್ಳಿ ಹಾಕಿದೆ. ಎನ್‌ಸಿಪಿ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದವರಿಗೆ ಮತ್ತೊಂದು ಅವಕಾಶ ನೀಡಲಿದೆ. ಶಿವಸೇನೆಯಲ್ಲಿ ಕೆಲವು ಹೊಸ ಶಾಸಕರನ್ನು ಸಚಿವರನ್ನಾಗಿ ಮಾಡಲಾಗುತ್ತದೆ.
ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಜೊತೆ ಸಮಾಲೋಚನೆ ನಡೆಸಿ ಮಹಾರಾಷ್ಟ್ರದ ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಯಾವ ಪಕ್ಷಕ್ಕೆ ಯಾವ ಖಾತೆ? ಎಂದು ಬಿಜೆಪಿ ಮಂಡಿಸಿದ ಸೂತ್ರಕ್ಕೆ ಶಿವಸೇನೆ, ಎನ್‌ಸಿಪಿ ಒಪ್ಪಿಗೆ ಕೊಟ್ಟಿವೆ.
ಮೂಲಗಳ ಮಾಹಿತಿ ಪ್ರಕಾರ ಗೃಹ ಖಾತೆ ಬಿಜೆಪಿ ಬಳಿಯೇ ಇರಲಿದೆ. ಏಕನಾಥ್ ಶಿಂಧೆಯ ಶಿವಸೇನೆಗೆ ಲೋಕೋಪಯೋಗಿ, ನಗರಾಭಿವೃದ್ಧಿ ಖಾತೆಗಳನ್ನು ನೀಡಲಾಗುತ್ತದೆ. ಅಜಿತ್ ಪವಾರ್‌ಗೆ ಈಗಾಗಲೇ ಹಣಕಾಸು ಖಾತೆಯನ್ನು ನೀಡಲಾಗುತ್ತದೆ ಎಂದು ಬಿಜೆಪಿ ಭರವಸೆ ನೀಡಿದೆ. ಭಾನುವಾರ ಸಂಪುಟ ವಿಸ್ತರಣೆ ಮಾಡಿದ ಬಳಿಕ ಇಂದೇ ಖಾತೆ ಹಂಚಿಕೆ ಮಾಡಲಾಗುತ್ತದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications