Maharashtra Assembly Elections 2024: ಮುಖ್ಯಮಂತ್ರಿ ಹುದ್ದೆ ಕುರಿತು ಉದ್ಧವ್ ಠಾಕ್ರೆ ಹೇಳಿಕೆ
ಮುಂಬೈ, ಅಕ್ಟೋಬರ್ 12: ಹರಿಯಾಣ ಮತ್ತು ಜಮ್ಮು & ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನವೆಂಬರ್‌ನಲ್ಲಿ ನಡೆಯಲಿದೆ. ಕೇಂದ್ರ ಚುನಾವಣಾ ಆಯೋಗ ಮುಂದಿನ ವಾರ ಚುನಾವಣೆ ವೇಳಾಪಟ್ಟಿಯನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ. ಈ ನಡುವೆ ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಪಾಲುದಾರ ಪಕ್ಷವಾಗಿರುವ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಹುದ್ದೆ ಕುರಿತು ಮಾತನಾಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024 ಎದುರಿಸಲು ಮಹಾರಾಷ್ಟ್ರದ ವಿರೋಧ ಪಕ್ಷಗಳು 'ಮಹಾವಿಕಾಸ್ ಅಘಾಡಿ' (ಎಂವಿಎ) ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳು ಮೈತ್ರಿಕೂಟದಲ್ಲಿದ್ದು, ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ.

ಈ ಮೈತ್ರಿಕೂಟದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಪ್ರಮುಖ ಪಕ್ಷವಾಗಿದೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅದರಲ್ಲೂ ಹರಿಯಾಣ ಮತ್ತು ಜಮ್ಮು & ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಹುದ್ದೆ ಬಗ್ಗೆ ಮಾತನಾಡಿದ್ದಾರೆ.
ಉದ್ಧವ್ ಠಾಕ್ರೆ ಹೇಳಿದ್ದೇನು?; ಮುಂಬೈನಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, "ಮಹಾರಾಷ್ಟ್ರವನ್ನು ಉಳಿಸಲು ಕಾಂಗ್ರೆಸ್ ಅಥವ ಎನ್‌ಸಿಪಿ (ಶರದ್ ಪವಾರ್) ಘೋಷಣೆ ಮಾಡುವ ಮುಖ್ಯಮಂತ್ರಿ ಅಭ್ಯರ್ಥಿಯನ್ನು ತಾವು ಬೆಂಬಲಿಸುತ್ತೇವೆ" ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, "ನಕಲಿ ಜಾಹೀರಾತುಗಳನ್ನು ನೀಡಿ ಮಹಾಯತಿ ಮೈತ್ರಿಕೂಟ ರಾಜ್ಯದ ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದೆ. ಮಹಾರಾಷ್ಟ್ರವನ್ನು ಉಳಿಸಬೇಕಿದೆ. ಅದಕ್ಕಾಗಿ ಕಾಂಗ್ರೆಸ್ ಅಥವ ಎನ್‌ಸಿಪಿ (ಶರದ್ ಪವಾರ್) ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದರೆ ಬೆಂಬಲಿಸುತ್ತೇನೆ" ಎಂದರು.
ಮಾಜಿ ಮುಖ್ಯಮಂತ್ರಿಯೂ ಆಗಿರುವ ಉದ್ಧವ್ ಠಾಕ್ರೆ, "ಮಹಾರಾಷ್ಟ್ರದ ಸರ್ಕಾರ ಲಡ್ಕಿ ಬಹಿನ್ ಯೋಜನೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಹೊರಟಿದೆ. ಜನರಿಂದಲೇ ಹಣವನ್ನು ವಸೂಲಿ ಮಾಡಿ, ಅದನ್ನು ಅವರಿಗೆ ವಾಪಸ್ ನೀಡುತ್ತಿದೆ" ಎಂದು ಟೀಕಿಸಿದರು.
"ನವೆಂಬರ್ 26ಕ್ಕೆ ಈ ಸರ್ಕಾರದ ಅವಧಿ ಮುಗಿಯಲಿದೆ. ರಾಜ್ಯಕ್ಕೆ ಹೊಸ ಸರ್ಕಾರ ಬೇಕು. ಯಾವ ಸರ್ಕಾರ ಬೇಕು ಎಂದು ಜನರು ತೀರ್ಮಾನ ಮಾಡುತ್ತಾರೆ. ನಾವು ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಮೂಲಕ ಚುನಾವಣೆ ಎದುರಿಸುತ್ತೇವೆ. ಜನರು ಬೆಂಬಲ ನೀಡುವ ನಿರೀಕ್ಷೆ ಇದೆ" ಎಂದು ಭರವಸೆ ವ್ಯಕ್ತಪಡಿಸಿದರು.
ಕೇಂದ್ರ ಚುನಾವಣಾ ಆಯೋಗ ಮುಂದಿನ ವಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಅದಕ್ಕೂ ಮೊದಲು ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಸೀಟು ಹಂಚಿಕೆ ಅಂತಿಮಗೊಳಿಸಿ ಯಾರಿಗೆ ಎಷ್ಟು ಸ್ಥಾನ ಎಂದು ಘೋಷಣೆ ಮಾಡಲು ಮುಂದಾಗಿದೆ.
ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳು ಮೈತ್ರಿಕೂಟದಲ್ಲಿವೆ. ಹರಿಯಾಣ ಮತ್ತು ಜಮ್ಮು & ಕಾಶ್ಮೀರ ಚುನಾವಣೆಯ ಬಳಿಕ ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನಗಳು ತನಗೆ ಬೇಕು ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಪಟ್ಟು ಹಿಡಿದಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಹೀನಾಯ ಸೋಲು, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಸಿಕ್ಕ ಬಲವನ್ನು ನೀಡಿ ಶಿವಸೇನೆ ಈ ತೀರ್ಮಾನಕ್ಕೆ ಬಂದಿದೆ.
ಎನ್‌ಸಿಪಿ (ಶರದ್ ಪವಾರ್) ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆ ಕಡಿಮೆ. ಇದೆ ಚುನಾವಣೆಯಲ್ಲಿ ಮೈತ್ರಿಕೂಟ ಬಹುಮತ ಪಡೆದರೆ ಕಾಂಗ್ರೆಸ್ ಅಥವ ಶಿವಸೇನೆಯೇ ನಾಯಕರೇ ಮುಖ್ಯಮಂತ್ರಿಯಾಗಬೇಕಿದೆ.












Click it and Unblock the Notifications