Maharashtra Assembly Elections 2024: ಎಂವಿಎ ಸೀಟು ಹಂಚಿಕೆ ಬಗ್ಗೆ ಪವಾರ್ ಮಹತ್ವದ ಘೋಷಣೆ
ಮುಂಬೈ, ಸೆಪ್ಟೆಂಬರ್ 30: ಮಹಾರಾಷ್ಟ್ರ ರಾಜ್ಯದ 288 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ದೀಪಾವಳಿ ಹಬ್ಬದ ಬಳಿಕ ನವೆಂಬರ್ 26ರೊಳಗೆ ಚುನಾವಣಾ ಪ್ರಕ್ರಿಯೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಕೇಂದ್ರ ಚುನಾವಣಾ ಆಯೋಗ ಚುನಾವಣಾ ಸಿದ್ಧತೆ ಕುರಿತು ರಾಜ್ಯದಲ್ಲಿ ಮೂರು ದಿನಗಳ ಕಾಲ ಮಹತ್ವದ ಸಭೆಯನ್ನು ನಡೆಸಿದೆ. ರಾಜ್ಯದ ರಾಜಕೀಯ ಪಕ್ಷಗಳು ಸಹ ಚುನಾವಣಾ ತಯಾರಿಯನ್ನು ಆರಂಭಿಸಿವೆ.
ರಾಜ್ಯದಲ್ಲಿ ಸದ್ಯ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿ 'ಮಹಾಯುತಿ' ಮೈತ್ರಿಕೂಟದ ಸರ್ಕಾರ ಅಧಿಕಾರದಲ್ಲಿದೆ. ಏಕನಾಥ್ ಶಿಂಧೆ ಮುಖ್ಯಮಂತ್ರಿ. 2024ರ ಚುನಾವಣೆಯನ್ನು ಸಹ ಮೈತ್ರಿಕೂಟ ಮಾಡಿಕೊಂಡೇ ಪಕ್ಷಗಳು ಎದುರಿಸಲಿವೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ.

ರಾಜ್ಯದ ವಿರೋಧ ಪಕ್ಷಗಳು ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟವಿದು. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 146.
ಶರದ್ ಪವಾರ್ ಮಹತ್ವದ ಘೋಷಣೆ: ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಸೀಟು ಹಂಚಿಕೆ ಕುರಿತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. "8-10 ದಿನದಲ್ಲಿ ಎಂವಿಎ ಮೈತ್ರಿಕೂಟ ಸೀಟು ಹಂಚಿಕೆ ಮಾತುಕತೆಯನ್ನು ಅಂತಿಮಗೊಳಿಸಲಿದೆ" ಎಂದು ಅವರು ಹೇಳಿದ್ದಾರೆ.
ಭಾನುವಾರ ಬಾರಾಮತಿಯಲ್ಲಿ ಮಾತನಾಡಿದ ಶರದ್ ಪವಾರ್, "ರಾಜ್ಯದಲ್ಲಿ ಅಧಿಕಾರವನ್ನು ಹಿಡಿಯಲು ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ರಚನೆಯಾಗಿದೆ, ಇದು ಅಗತ್ಯವೂ ಆಗಿದೆ" ಎಂದು ತಿಳಿಸಿದರು.
ಎಂವಿಎ ಮೈತ್ರಿಕೂಟ 288ರಲ್ಲಿ ಅರ್ಧದಷ್ಟು ಸೀಟುಗಳನ್ನು ಗೆಲ್ಲುವುದಿಲ್ಲ ಎಂಬ 'ಮಹಾಯುತಿ' ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿ (ಅಜಿತ್ ಪವಾರ್ ಬಣ) ಪಕ್ಷದ ಹಿಂದಿನ ನಾಯಕರ ಹೇಳಿಕೆಗಳ ವಿರುದ್ಧ ಶರದ್ ಪವಾರ್ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಎಂವಿಎ ಮೈತ್ರಿಕೂಟದ ಸೀಟು ಹಂಚಿಕೆಯಲ್ಲಿ ಅಭ್ಯರ್ಥಿಗಳ ಗೆಲುವು ಮೊದಲ ಮಾನದಂಡವಾಗಿದೆ. ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಲಿದೆ? ಎಂಬುದು 2ನೇ ಅಂಶವಾಗಿದೆ. ಸೀಟು ಹಂಚಿಕ ವಿಚಾರದಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನಡುವೆ ಒಮ್ಮತವಿದೆ. ಗೆಲ್ಲುವ ಅಭ್ಯರ್ಥಿಯನ್ನು ಎಲ್ಲರೂ ಬೆಂಬಲಿಸಲಿದ್ದಾರೆ ಎಂದರು.
ಶರದ್ ಪವಾರ್, "ಈ ಮೈತ್ರಿಕೂಟದ ಭಾಗವಾಗಿರದ ಇತರ ಪಕ್ಷಗಳು ಚುನಾವಣೆಯಲ್ಲಿ ನಮ್ಮ ಜೊತೆ ಕೈ ಜೋಡಿಸುತ್ತೇವೆ ಎಂದು ಬಂದರೆ ಅವರನ್ನು ಸ್ವಾಗತಿಸಲಾಗುತ್ತದೆ" ಎಂದು ಹೇಳಿದರು. ಈ ಮೂಲಕ ಚುನಾವಣೆಯಲ್ಲಿ ಪಕ್ಷೇತರರು ಎಂವಿಎ ಮೈತ್ರಿಕೂಟ ಬೆಂಬಿಸಬಹುದು ಎಂದು ಪವಾರ್ ಸುಳಿವು ನೀಡಿದರು.
"ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಫಲಿತಾಂಶದ ಕುರಿತು ಪ್ರತಿ ತಾಲೂಕುಗಳಲ್ಲಿ ಸಮೀಕ್ಷೆಗಳನ್ನು ಮಾಡಲಾಗುತ್ತಿದೆ. ಲೋಕಸಭೆ ಚುನಾವಣೆ 2024ರ ಮಾದರಿಯಲ್ಲಿ ನಾವು ಒಟ್ಟಾಗಿ ಕೆಲಸ ಮಾಡೋಣ. ಆಗ ಚುನಾವಣೆಯಲ್ಲಿಯೂ ಹೆಚ್ಚಿನ ಸ್ಥಾನಗಳನ್ನು ಗಳಿಸಬಹುದು" ಎಂದು ಶರದ್ ಪವಾರ್ ಕರೆ ಕೊಟ್ಟರು. ರಾಜ್ಯದ 40 ಲೋಕಸಭಾ ಸೀಟುಗಳಲ್ಲಿ 30 ಸೀಟುಗಳು ಈ ಬಾರಿ ಎಂವಿಎ ಮೈತ್ರಿಕೂಟದ ಪಾಲಾಗಿವೆ.
ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಸಹ ಸೀಟು ಹಂಚಿಕೆಯ ಕಸರತ್ತು ನಡೆಸುತ್ತಿದೆ. ವಿದರ್ಭ ಪ್ರಾಂತ್ಯ, ಮುಂಬೈ ನಗರದ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಈ ಭಾಗದಲ್ಲಿ ಹೆಚ್ಚಿನ ಸೀಟುಗಳು ಪಕ್ಷಕ್ಕೆ ಬೇಕು ಎಂದು ಬೇಡಿಕೆ ಇಟ್ಟಿದೆ. ಕಳೆದ ವಾರದ ಕೇಂದ್ರ ಗೃಹ ಸಚಿವ, ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ರಾಜ್ಯದಲ್ಲಿ ಪ್ರವಾಸ ನಡೆಸಿದ್ದಾರೆ.












Click it and Unblock the Notifications