Maharashtra assembly election 2024: ಸೀಟು ಹಂಚಿಕೆ ಬಗ್ಗೆ ಬಿಜೆಪಿ ಬಿಗ್ ಅಪ್‌ಡೇಟ್
ಮುಂಬೈ, ಸೆಪ್ಟೆಂಬರ್ 17: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸೀಟು ಹಂಚಿಕೆ ಕುರಿತು ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ರಾಜ್ಯದ ಆಡಳಿತಾರೂಢ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದಲ್ಲಿ ಯಾರಿಗೆ ಎಷ್ಟು ಸೀಟು? ಎಂಬುದು ಚರ್ಚಿತ ವಿಚಾರ. ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್‌ನಲ್ಲಿ ಮತದಾನ ನಡೆಯುವ ನಿರೀಕ್ಷೆ ಇದೆ.
ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ 'ಮಹಾಯುತಿ' ಮೈತ್ರಿಕೂಟದ ಸೀಟು ಹಂಚಿಕೆ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಮೈತ್ರಿಕೂಟದ ಪಕ್ಷಗಳ ಸೀಟು ಹಂಚಿಕೆ ಕುರಿತು ಶೇ 70 ರಿಂದ 80ರಷ್ಟು ಒಮ್ಮತ ಮೂಡಿದೆ ಎಂದು ಹೇಳಿದ್ದಾರೆ. ಸೀಟು ಹಂಚಿಕೆ ಕುರಿತು ಅಧಿಕೃತ ಘೋಷಣೆ ಬಾಕಿ ಇದೆ.

ಸೀಟು ಹಂಚಿಕೆ ಕುರಿತು ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಸದ್ಯದ ಮಾಹಿತಿ ಪ್ರಕಾರ 140-150 ಸೀಟುಗಳಲ್ಲಿ ಬಿಜೆಪಿ, 55 ಸೀಟುಗಳಲ್ಲಿ ಎನ್‌ಸಿಪಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಪ್ರಾಂತ್ಯವಾರು ಸೀಟು ಹಂಚಿಕೆ ಹೇಗೆ ಆಗಬೇಕು? ಎಂದು ಪಕ್ಷಗಳು ಚರ್ಚೆಯಲ್ಲಿ ತೊಡಗಿವೆ.
ಹೇಗಿರಲಿದೆ ಸೀಟು ಹಂಚಿಕೆ?; "ಗೆಲ್ಲುವ ಅಭ್ಯರ್ಥಿಗಳಿಗೆ ಸೀಟು ಹಂಚಿಕೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಎನ್‌ಸಿಪಿ (ಅಜಿತ್ ಪವಾರ್ ಬಣ) 70-80 ಸೀಟುಗಳಿಗೆ ಬೇಡಿಕೆ ಇಟ್ಟಿದ್ದು, ಈ ಕುರಿತು ನಾವು ಅವರಿಗೆ ಮನವರಿಕೆ ಮಾಡಿಕೊಡಲಿದ್ದೇವೆ" ಎಂದು ಚಂದ್ರಶೇಖರ ಬವಾಂಕುಲೆ ಹೇಳಿದರು.
"ಸೀಟು ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ, ದೇವೇಂದ್ರ ಫಡ್ನವೀಸ್ (ಬಿಜೆಪಿ) ಮತ್ತು ಎನ್‌ಸಿಪಿ (ಅಜಿತ್ ಪವಾರ್) ಒಮ್ಮತಕ್ಕೆ ಬಂದಿದ್ದಾರೆ. ಮುಂದಿನ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಮೂವರು ನಾಯಕರ ತೀರ್ಮಾನಕ್ಕೆ ನಾವು ಅವರನ್ನು ಅಭಿನಂದಿಸುತ್ತೇವೆ" ಎಂದು ತಿಳಿಸಿದರು.
"ಪಶ್ಚಿಮ ಮಹಾರಾಷ್ಟ್ರ ಭಾಗದಲ್ಲಿ 14 ಸೀಟುಗಳಲ್ಲಿ ಬಿಜೆಪಿ ಪ್ರಭಾವ ಹೊಂದಿಲ್ಲ. ಇಲ್ಲಿ ಎನ್‌ಸಿಪಿ ಪ್ರಭಾವಿಯಾಗಿದೆ. ಆ ಕ್ಷೇತ್ರಗಳನ್ನು ಅವರಿಗೆ ಬಿಟ್ಟುಕೊಡಲಾಗುತ್ತದೆ. ವಿದರ್ಭ ಮತ್ತು ಮುಂಬೈನ ಸೀಟುಗಳಲ್ಲಿ ಎನ್‌ಸಿಪಿಗಿಂತ ಬಿಜೆಪಿ ಪ್ರಬಲವಾಗಿದೆ. ಈ ಕ್ಷೇತ್ರಗಳು ಬಿಜೆಪಿಗೆ ಸಿಗಲಿವೆ. ಹೀಗೆ ಒಪ್ಪಂದದಂತೆ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು. ಸೀಟು ಹಂಚಿಕೆ ಮಾಡಲಾಗುತ್ತದೆ" ಎಂದು ವಿವರಣೆ ನೀಡಿದರು.
"ಎನ್‌ಸಿಪಿ ಶಿವಸೇನೆ & ಬಿಜೆಪಿಗೆ ವಿದರ್ಭ ಪ್ರಾಂತ್ಯದ ಸೀಟುಗಳನ್ನು ಬಿಟ್ಟುಕೊಡಲಿದೆ. ಲೋಕಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಬಿಜೆಪಿಗೆ ಸವಾಲಾಗಿದೆ. ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಒಮ್ಮತದಿಂದ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತೇವೆ" ಎಂದು ಚಂದ್ರಶೇಖರ ಬವಾಂಕುಲೆ ಹೇಳಿದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ 145. ಬಿಜೆಪಿ, ಶಿವಸೇನೆ, ಎನ್‌ಸಿಪಿ ಸೀಟು ಹಂಚಿಕೆ ಮಾಡಿಕೊಳ್ಳಲು ತಯಾರಾಗಿವೆ. ಒಮ್ಮತವೂ ಮೂಡಿದೆ, 'ಮಹಾಯುತಿ' ಮೈತ್ರಿಕೂಟದ ಆಡಳಿತ ನೋಡಿರುವ ಜನರು ಪುನಃ ನಮಗೆ ಬೆಂಬಲ ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರು ಭರವಸೆ ಹೊಂದಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ 'ಮಹಾಯುತಿ' ಮೈತ್ರಿಕೂಟಕ್ಕೆ ಎದುರಾಳಿ 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟ. ರಾಜ್ಯದ ವಿರೋಧ ಪಕ್ಷಗಳಾದ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟ ಸಹ ಸೀಟು ಹಂಚಿಕೆಯ ಚರ್ಚೆಯಲ್ಲಿವೆ.












Click it and Unblock the Notifications