Maharashtra assembly election: "ಮಹಾ" ಚುನಾವಣೆ ಕರ್ನಾಟಕಕ್ಕೆ ಯಾಕೆ ಮುಖ್ಯ, ಯಾರು ಗೆದ್ದರೆ ಬೆಳಗಾವಿ ಗಡಿ ವಿವಾದ ಹೆಚ್ಚು ?
ಮಹಾರಾಷ್ಟ್ರ ಚುನಾವಣೆಗೆ ಇನ್ನು ಸರಿಯಾಗಿ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಲವು ಕಾರಣಗಳಿಂದ ಮುಖ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಯಾರು ಹಾಗೂ ಯಾವ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎನ್ನುವುದು ಕರ್ನಾಟಕಕ್ಕೂ ಮುಖ್ಯವಾಗಿದೆ. ಹೌದು ಮಹಾರಾಷ್ಟ್ರ ಚುನಾವಣೆಗೂ ನಮಗೂ ಏನು ಸಂಬಂಧ, ಅಲ್ಲಿ ಯಾರು ಬಂದರೆ ನಮಗೇನು ಎನ್ನುವ ಪ್ರಶ್ನೆ ಬರಬಹುದು. ಆದರೆ, ಖಂಡಿತವಾಗಿಯೂ ಆ ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವುದರ ಮೇಲೆಯೇ ಬೆಳಗಾವಿ ಗಡಿ ವಿವಾದ ವಿಚಾರ ನಿಂತಿದೆ.
ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಒಂದೇ ಹಂತದಲ್ಲಿ 288 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ (ಎಂಇಎಸ್) ಸಮಿತಿ ಕ್ಯಾತೆ ತೆಗೆದಿದೆ. ಈ ಬಾರಿಯ ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಎಂಇಎಸ್ ಕರಾಳ ದಿನವನ್ನು ಆಚರಿಸುವ ಮೂಲಕ ಕನ್ನಡಿಗರ ತಾಳ್ಮೆಯನ್ನು ಪರೀಕ್ಷೆ ಮಾಡಿತ್ತು. ಅಲ್ಲದೇ ಮೊದ ಮೊದಲು ಅವಕಾಶ ನೀಡುವುದಿಲ್ಲ ಎಂದೇ ಹೇಳಿದ್ದ ಬೆಳಗಾವಿ ಜಿಲ್ಲಾಡಳಿತ ಆ ಮೇಲೆ ಎಂಇಎಸ್‌ಗೆ ಪ್ರತಿಭಟನೆ ಮಾಡಲು ಅವಕಾಶ ನೀಡಿತ್ತು.

ಇನ್ನು ಮಹಾರಾಷ್ಟ್ರದಲ್ಲಿ ಮಹಾಯುತಿ ಅಥವಾ ಶಿವಸೇನಾ (ಏಕನಾಥ್ ಶಿಂಧೆ) ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಗಡಿ ವಿವಾದವನ್ನು ಕೆಣಕಲಿದೆ ಎಂದೇ ಅಂದಾಜಿಸಲಾಗುತ್ತಿದೆ. ಆದರೆ, ಇಲ್ಲೊಂದು ಸಮಾಧಾನಕರ ಸಂಗತಿ ಎಂದರೆ, ಏಕನಾಥ್ ಶಿಂಧೆ ಬಣ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಅಲ್ಲದೇ ಬಿಜೆಪಿ ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಅಜಿತ್ ಪವಾರ್) ಬಣದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ, ಯಾವುದೇ ನಿರ್ಣಯಗಳನ್ನು ಏಕಾಂಗಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಇರುವ ಬೆಳಗಾವಿ ಗಡಿ ವಿವಾದ ವಿಚಾರದಲ್ಲಿ ಏಕನಾಥ್ ಶಿಂಧೆ ಅವರು ಅಧಿಕಾರಕ್ಕೆ ಬಂದ ಮೇಲೆ ಈ ಹಿಂದೆ ಯಾವುದೇ ಸರ್ಕಾರ ಮಾಡಿದರ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಇದು ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸಿತ್ತು. ಅಲ್ಲದೇ ಕರ್ನಾಟಕದ 865 ಗ್ರಾಮಗಳು ಹಾಗೂ ಪಟ್ಟಣಗಳಲ್ಲಿ ಜ್ಯೋತಿಬಾ ಆರೋಗ್ಯ ವಿಮೆ ಅನುಷ್ಠಾನಕ್ಕೆ ಮಹಾರಾಷ್ಟ್ರದ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಬರೋಬ್ಬರಿ 54 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿತ್ತು.
ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣವು ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಆದರೆ, ಇದರ ಹೊರತಾಗಿಯೂ ಮಹಾರಾಷ್ಟ್ರ - ಕರ್ನಾಟಕದೊಂದಿಗೆ ಏನಾದರೂ ಒಂದು ಕ್ಯಾತೆಯನ್ನು ತೆಗೆಯುತ್ತಲ್ಲೇ ಇದೆ. ರಾಜಕೀಯ ಬದಲಾವಣೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಆಯ್ಕೆಯಾದರು. ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೇಲೆ ಇನ್ನಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು.
ಇನ್ನು ಮಹಾ ವಿಕಾಸ್ ಅಘಾಡಿಯೂ ಕರ್ನಾಟಕದೊಂದಿಗೆ ಹೇಳಿಕೊಳ್ಳುವಂತಹ ಉತ್ತಮ ಸಂಬಂಧವನ್ನು ಹೊಂದಿಲ್ಲವಾದರೂ, ಆ ಸರ್ಕಾರ ಮಹಾರಾಷ್ಟ್ರದಲ್ಲಿ ಎರಡೂವರೆ ವರ್ಷ ಅಧಿಕಾರದಲ್ಲಿ ಇದ್ದಾಗ. ಕರ್ನಾಟಕದೊಂದಿಗೆ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿ ಮಾಡಿರಲಿಲ್ಲ. ಕರ್ನಾಟಕ ಮತ್ತು ಬೆಳಗಾವಿ ಗಡಿಭಾಗದಲ್ಲಿನ ಜನರಿಗೆ ಆರೋಗ್ಯ ವಿಮೆಯಂತಹ ಪ್ರಯೋಗಗಳನ್ನು ಮಾಡಿರಲಿಲ್ಲ. ಹೀಗಾಗಿ, ಮಹಾರಾಷ್ಟ್ರದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎನ್ನುವುದು ಕರ್ನಾಟಕಕ್ಕೂ ಮುಖ್ಯವಾಗಿದೆ.












Click it and Unblock the Notifications