Maharashtra Election 2024: ಮಹಾರಾಷ್ಟ್ರದಲ್ಲಿ ಶಿವಸೇನೆ V/S ಶಿವಸೇನೆ, ಎನ್‌ಸಿಪಿ V/S ಎನ್‌ಸಿಪಿ
ಮುಂಬೈ, ನವೆಂಬರ್ 20: ಬುಧವಾರ ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ಆರಂಭವಾಗಿದೆ. ಮತ್ತೊಂದು ಕಡೆ ಜಾರ್ಖಂಡ್ ರಾಜ್ಯದಲ್ಲಿ 38 ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನವೂ ನಡೆಯುತ್ತಿದೆ. ಮಹಾರಾಷ್ಟ್ರ ರಾಜ್ಯದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಒಂದೇ ಪಕ್ಷಗಳು ಎರಡು ಬಣಗಳಾಗಿ ಚುನಾವಣೆ ಎದುರಿಸುತ್ತಿದ್ದು, ಯಾರಿಗೆ ಜನರ ಬೆಂಬಲವಿದೆ? ಎಂಬುದು ನವೆಂಬರ್ 23ರ ಶನಿವಾರ ತಿಳಿಯಲಿದೆ.
ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ಬುಧವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಈ ಚುನಾವಣೆ ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣ 2019ರ ಬಳಿಕ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು.

ಮಹಾರಾಷ್ಟ್ರದ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿ 'ಮಹಾಯುತಿ' ಮೈತ್ರಿಕೂಟ ಮತ್ತು ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಎದುರಾಳಿಗಳು.
ಶಿವಸೇನೆ V/S ಶಿವಸೇನೆ, ಎನ್‌ಸಿಪಿ V/S ಎನ್‌ಸಿಪಿ: ಮಹಾರಾಷ್ಟ್ರದ ಚುನಾವಣೆ ಶಿವಸೇನೆ V/S ಶಿವಸೇನೆ, ಎನ್‌ಸಿಪಿ V/S ಎನ್‌ಸಿಪಿ ನಡುವಿನ ಹೋರಾಟವಾಗಿದೆ. ಎರಡೂ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಮತ್ತು ಎನ್‌ಸಿಪಿ (ಶರದ್ ಪವಾರ್) ಬಣ ಎದುರಾಳಿಗಳು.
2019ರ ಚುನಾವಣೆಯಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳು ಒಂದಾಗಿದ್ದವು. ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರು. ಎನ್‌ಸಿಪಿ ನಾಯಕ ಅಜಿತ್ ಪವಾರ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಜನರ ಮುಂದೆ ಹೋಗಿದ್ದರು.
ಆದರೆ 2019ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದ ರಾಜಕೀಯ ಚಿತ್ರಣ ಬದಲಾಯಿತು. ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ಕಾಂಗ್ರೆಸ್ ಜೊತೆ ಕೈ ಜೋಡಿಸಿದರು. ರಾಜ್ಯದ ಮುಖ್ಯಮಂತ್ರಿಯೂ ಆದರು. ಆಗ ಶಿವಸೇನೆಯಲ್ಲಿ ಒಡಕು ಮೂಡಿತು. ಏಕನಾಥ್ ಶಿಂಧೆ ಠಾಕ್ರೆ ವಿರುದ್ಧ ಬಂಡಾಯ ಎದ್ದರು. ಪಕ್ಷದಿಂದ ಹೊರಬಂದರು.
2022ರಲ್ಲಿ ಕಾಂಗ್ರೆಸ್, ಶಿವಸೇನೆ, ಎನ್‌ಸಿಪಿ ಪಕ್ಷಗಳ ಎಂವಿಎ ಮೈತ್ರಿಕೂಟದ ಸರ್ಕಾರ ಪತನಗೊಂಡಿತು. ಶಿವಸೇನೆಯಲ್ಲಿ ಏಕನಾಥ್ ಶಿಂಧೆ ಬಣ ನಿರ್ಮಾಣವಾಯಿತು. ಅತ್ತ ಶರದ್ ಪವಾರ್ ವಿರುದ್ಧ ಅಸಮಾಧಾನಗೊಂಡ ಅಜಿತ್ ಪವಾರ್ ಪಕ್ಷದಿಂದ ಹೊರ ಬಂದರು. ಎನ್‌ಸಿಪಿ ಅಜಿತ್ ಪವಾರ್ ಬಣ ನಿರ್ಮಾಣಗೊಂಡಿತು.
ಈ ಬಾರಿಯ ಚುನಾವಣೆಯಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಮತ್ತು ಎನ್‌ಸಿಪಿ (ಶರದ್ ಪವಾರ್) ಬಣಗಳಾಗಿ ಜನರ ಮುಂದೆ ಹೋಗಿವೆ. ಪಕ್ಷದ ನಿಜವಾದ ಮತದಾರರು ಯಾವ ಬಣದ ಜೊತೆ ಇದ್ದಾರೆ? ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಆದ್ದರಿಂದ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಬುಧವಾರ ಮಹಾರಾಷ್ಟ್ರದ ಜೊತೆಗೆ ಜಾರ್ಖಂಡ್ ವಿಧಾನಸಭೆಯ 38 ಕ್ಷೇತ್ರಗಳಿಗೂ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದ್ದು, ಬಳಿಕ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಲಿದೆ. ಆಗ ಚುನಾವಣಾ ಫಲಿತಾಂಶದ ಕುರಿತು ಸುಳಿವು ದೊರೆಯುವ ನಿರೀಕ್ಷೆ ಇದೆ.












Click it and Unblock the Notifications