Maharashtra Assembly Election 2024: ಮಹಾರಾಷ್ಟ್ರದಲ್ಲಿ ಎಂವಿಎ ಮೈತ್ರಿಕೂಟದಲ್ಲಿ 'ಸಿಎಂ' ಸಂಕಟ
ಮುಂಬೈ, ಅಕ್ಟೋಬರ್ 20: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ದಿನಾಂಕ ಘೋಷಣೆಯಾಗಿದೆ. 288 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ನವೆಂಬರ್ 20ರಂದು ಮತದಾನ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದ ವಿರೋಧ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ರಚನೆ ಮಾಡಿಕೊಂಡು ಚುನಾವಣೆಗೆ ಹೋಗಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಕಗ್ಗಂಟಾಗಿದೆ.
ಎಂವಿಎ ಮೈತ್ರಿಕೂಟದ ಸೀಟು ಹಂಚಿಕೆ ಸಹ ಇನ್ನೂ ಅಂತಿಮಗೊಂಡಿಲ್ಲ. ಇದರ ನಡುವೆಯೇ ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ ಮೂರು ಪಕ್ಷದಲ್ಲಿ ಪೈಪೋಟಿಗೆ ಕಾರಣವಾಗಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪಕ್ಷದ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸುಳಿವು ನೀಡಿದ್ದಾರೆ. ಆದರೆ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಈ ವಿಚಾರದಲ್ಲಿ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

"ಶರದ್ ಪವಾರ್ ಅವರು ಜಯಂತ್ ಪಾಟೀಲ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸುಳಿವು ನೀಡಿದರೆ ನಾವು ಅವರ ಜೊತೆ ಮಾತುಕತೆ ನಡೆಸುತ್ತೇವೆ" ಎಂದು ಶಿವಸೇನೆಯ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ. ಅಕ್ಟೋಬರ್ 22ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ರಾಜ್ಯದ ರಾಜಕೀಯ ಚಟುವಟಿಕೆ ಮತ್ತಷ್ಟು ಬಿರುಸಾಗಿದೆ.
ಶರದ್ ಪವಾರ್ ಮಾತು ತಂದ ಇಕ್ಕಟ್ಟು: ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರ್‌ನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಶರದ್ ಪವಾರ್ ಪಕ್ಷದ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಹೊಗಳಿದರು. "ನನಗೆ ನಂಬಿಕೆ ಇದೆ ಅವರು ರಾಜ್ಯವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗುತ್ತಾರೆ" ಎಂದರು.
ಶರದ್ ಪವಾರ್ ಭಾಷಣಕ್ಕೂ ಮೊದಲು ಜಯಂತ್ ಪಾಟೀಲ್ ಸಮಾವೇಶದಲ್ಲಿ ಮಾತನಾಡಿದರು. ಅವರು ಮಾತನಾಡಲು ಪ್ರಾರಂಭಿಸಿದಾಗ ಜನರು ಜೋರಾಗಿ ಕೂಗಲು ಆರಂಭಿಸಿದರು. ಮುಂದಿನ ಮುಖ್ಯಮಂತ್ರಿ ಜಯಂತ್ ಪಾಟೀಲ್ ಎಂಬ ಘೋಷಣೆಗಳು ಕೇಳಿ ಬಂದವು.
ಸಂಜತ್ ರಾವತ್ ಮಾತನಾಡಿ, "ಶರದ್ ಪವಾರ್ ಯಾವುದೇ ಸೂಚನೆ ನೀಡಿಲ್ಲ. ಕೆಲವು ದಿನಗಳ ಹಿಂದೆ ಅವರು ರೋಹಿತ್ ಪವಾರ್ ಹೆಸರು ಶಿಫಾರಸು ಮಾಡಿದ್ದರು. ಪಕ್ಷದಲ್ಲಿನ ಅವರ ಮುಖ್ಯ ಪಾತ್ರದ ಬಗ್ಗೆ ಹೇಳಿದ್ದರು. ಒಂದು ಪಕ್ಷದಿಂದ ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿ ಆಗಲು ಸಾಧ್ಯವಿಲ್ಲ. ಸುಪ್ರಿಯಾ ಸುಳೆ ಅವರ ಹೆಸರು ಯಾವಾಗಲೂ ಸಿಎಂ ಸ್ಥಾನಕ್ಕೆ ಕೇಳಿ ಬರುತ್ತದೆ. ಪಕ್ಷದಲ್ಲಿ 5 ರಿಂದ 6 ಜನ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ" ಎಂದರು.
"ಎರಡು ತಿಂಗಳಿನಿಂದ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಮುಖ್ಯಮಂತ್ರಿ ಅಭ್ಯರ್ಥಿ ಹೆಸರಿಸಬೇಕು ಎಂದು ಉದ್ಧವ್ ಠಾಕ್ರೆ ಬೇಡಿಕೆ ಇಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಮತ್ತು ಶರದ್ ಪವಾರ್ ಪಕ್ಷಗಳು ಒಪ್ಪಬೇಕು. ಉದ್ಧವ್ ಠಾಕ್ರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದಾರೆ. ಆದರೆ ಈ ವಿಚಾರದಲ್ಲಿ ಪಕ್ಷ ಗಮನಹರಿಸುತ್ತಿಲ್ಲ" ಎಂದು
ಸಂಜತ್ ರಾವತ್ ಹೇಳಿದರು.
ಕಾಂಗ್ರೆಸ್ ನಾಯಕ ನಿತಿನ್ ರಾವತ್ ಮಾತನಾಡಿ, "ಮುಖ್ಯಮಂತ್ರಿ ಹುದ್ದೆಗೆ ಯಾವುದೇ ಅಭ್ಯರ್ಥಿಯ ಹೆಸರನ್ನು ಈಗ ಹೇಳುವುದಿಲ್ಲ. ಶರದ್ ಪವಾರ್ ಅವರು ಜಯಂತ್ ಪಾಟೀಲ್ ಮುಖ್ಯಮಂತ್ರಿಯಾಗಲು ಅರ್ಹರು ಎಂದು ಹೇಳಿದ್ದಾರೆ. ಎಲ್ಲಾ ಪಕ್ಷದಲ್ಲೂ ಈ ಮಾದರಿಯ ನಾಯಕರು ಇರುತ್ತಾರೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಈ ಕುರಿತು ತೀರ್ಮಾನ ಕೈಗೊಳ್ಳುತ್ತಾರೆ" ಎಂದರು.
ಗುರುವಾರ ಮಾತನಾಡಿದ ಶರದ್ ಪವಾರ್, "ಮುಖ್ಯಮಂತ್ರಿ ಹುದ್ದೆಯ ಮಾತು ನಮ್ಮಲ್ಲಿ ಮುಗಿದಿದೆ. ನಾವು ಪತ್ರಿಕಾಗೋಷ್ಠಿಯಲ್ಲೇ ಈ ಕುರಿತು ಅಂತಿಮ ತೀರ್ಮಾನ ಹೇಳಿದ್ದೇನೆ. ಉದ್ಧವ್ ಠಾಕ್ರೆ ಸಹ ಆಗ ಜೊತೆಗಿದ್ದರು. ಈಗ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಮಾತನಾಡುವುದಿಲ್ಲ. ಚುನಾವಣಾ ಫಲಿತಾಂಶ ಬರಲಿ, ಆಗ ನಾವು ಈ ಕುರಿತು ಮಾತನಾಡುತ್ತೇವೆ" ಎಂದು ಸ್ಪಷ್ಟಪಡಿಸಿದರು.
"ಎಂವಿಎ ಮೈತ್ರಿಕೂಟದ ಸೀಟು ಹಂಚಿಕೆ ಕುರಿತು ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಜಯಂತ್ ಪಾಟೀಲ್‌ಗೆ ನೀಡಿದ್ದೇವೆ. ಅವರಿಗೆ ಪಕ್ಷ ಬಹುದೊಡ್ಡ ಜವಾವ್ದಾರಿಯನ್ನು ಕೊಟ್ಟಿದೆ" ಎಂದು ಶದರ್ ಪವಾರ್ ಹೇಳಿದರು.












Click it and Unblock the Notifications