Maharashtra Election 2024 Result: ಮುಂದಿನ ಮಹಾರಾಷ್ಟ್ರ ಸಿಎಂ, ಏಕನಾಥ್ ಶಿಂಧೆ ಮಹತ್ವದ ಹೇಳಿಕೆ
ಮುಂಬೈ, ನವೆಂಬರ್ 23: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದೆ. ಮಹಾಯತಿ ಮೈತ್ರಿಕೂಟ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವುದು ಖಚಿತವಾಗಿದೆ. ಸದ್ಯದ ಮಾಹಿತಿಯಂತೆ ಪಕ್ಷ 227 ಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸಿದೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145. 'ಮಹಾಯತಿ' ಮೈತ್ರಿಕೂಟದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬುದು ಈಗಿನ ಚರ್ಚೆ.
ರಾಜ್ಯದ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ. 2022ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದಲ್ಲಿ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾದರು. ಆದರೆ 2024ರ ಚುನಾವಣೆ ಫಲಿತಾಂಶದ ಪ್ರಕಾರ ಮೈತ್ರಿಕೂಟದಲ್ಲಿ ಸಿಎಂ ಯಾರು?.

ಏಕನಾಥ್ ಶಿಂಧೆ ಮಹತ್ವದ ಹೇಳಿಕೆ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಏಕನಾಥ್ ಶಿಂಧೆ, "ಸಂಪೂರ್ಣ ಫಲಿತಾಂಶ ಬರಲಿ. ನಾವು ಒಟ್ಟಾಗಿ ಚುನಾವಣೆ ಎದುರಿಸಿದ್ದೇವೆ. ಮೂರು ಪಕ್ಷಗಳು ಒಟ್ಟಾಗಿ ಕುಳಿತು ತೀರ್ಮಾನ ಕೈಗೊಳ್ಳುತ್ತೇವೆ" ಎಂದು ಹೇಳಿದರು.
"ಈ ಅಭೂತಪೂರ್ವ ಫಲಿತಾಂಶಕ್ಕಾಗಿ ನಾನು ಮಹಾರಾಷ್ಟ್ರ ರಾಜ್ಯದ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ. ಮಹಾಯತಿ ಬಹುಮತದಿಂದ ಸರ್ಕಾರ ರಚನೆ ಮಾಡಲಿದೆ ಎಂದು ನಾನು ಮೊದಲೂ ಹೇಳಿದ್ದೆ. ಸಮಾಜದ ಎಲ್ಲಾ ವರ್ಗದ ಜನರಿಗೆ ಮಹಾಯತಿ ಮೈತ್ರಿಕೂಟದ ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ" ಎಂದು ಏಕನಾಥ್ ಶಿಂಧೆ ತಿಳಿಸಿದರು.
"ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಇದುವರೆಗೂ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಮಹಾಯತಿ ಮೈತ್ರಿಕೂಟ ಒಟ್ಟಾಗಿ ಮುಂದಿನ ಹೆಜ್ಜೆ ಬಗ್ಗೆ ತೀರ್ಮಾನ ಕೈಗೊಳ್ಳಲು ಒಟ್ಟಾಗಿ ಸಭೆ ನಡೆಸುತ್ತೇವೆ" ಎಂದರು.
ಚುನಾವಣೆಗೂ ಮೊದಲು ಮೈತ್ರಿಕೂಟದಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಸೀಟು ಬರುತ್ತದೆಯೋ ಅವರಿಗೆ ಮುಖ್ಯಮಂತ್ರಿ ಪಟ್ಟ ಎಂದು ತೀರ್ಮಾನಿಸಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ ಬಿಜೆಪಿ 132 ಸೀಟುಗಳಲ್ಲಿ ಮುನ್ನಡೆಯಲ್ಲಿದ್ದು, 30 ಸೀಟುಗಳಲ್ಲಿ ಜಯಗಳಿಸಿದೆ.
ಈಗಾಗಲೇ ಬಿಜೆಪಿಯ ಕೆಲವು ರಾಷ್ಟ್ರೀಯ ನಾಯಕರು ಈ ಬಾರಿ ಏಕನಾಥ್ ಶಿಂಧೆಯಲ್ಲಿ ಬಿಜೆಪಿಯವರೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಾರು? ದೇವೇಂಧ್ರ ಫಡ್ನವೀಸ್ ಅವರೋ ಅಥವ ಬೇರೆ ನಾಯಕರೋ? ಎಂಬುದು ಚರ್ಚೆಯ ವಿಚಾರವಾಗಿದೆ.
ಹಾಲಿ ರಾಜ್ಯದ ಉಪ ಮುಖ್ಯಮಂತ್ರಿ, ರಾಜ್ಯದ ಮಾಜಿ ಮುಖ್ಯಮಂತ್ರಿ ದೇವೇಂಧ್ರ ಫಡ್ನವೀಸ್. ಈ ಬಾರಿಯ ಚುನಾವಣೆಯಲ್ಲಿ ಅವರು ನಾಗ್ಪುರ ನೈಋತ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. 1,15,504 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಪ್ರಫುಲ್ಲ ಗುಡಧೆ ವಿರುದ್ಧ 34,302 ಮತಗಳ ಮುನ್ನಡೆಯನ್ನು ಪಡೆದಿದ್ದಾರೆ.
ಮಧ್ಯಾಹ್ನ 4.30ರ ಮಾಹಿತಿಯಂತೆ ಬಿಜೆಪಿ 132, ಶಿವಸೇನೆ (ಏಕನಾಥ್ ಶಿಂಧೆ ಬಣ) 55, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಮೂರು ಪಕ್ಷಗಳು 'ಮಹಾಯುತಿ' ಮೈತ್ರಿಕೂಟದ ಭಾಗ.
ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ 16, ಶಿವಸೇನೆ (ಉದ್ಧವ್ ಠಾಕ್ರೆ ಬಣ) 21, ಎನ್‌ಸಿಪಿ (ಶರದ್ ಪವಾರ್) 10, ಎಸ್‌ಪಿ 2, ಇತರರು/ ಪಕ್ಷೇತರರು 11 ಸೀಟುಗಳಲ್ಲಿ ಮುನ್ನಡೆ ಪಡೆದಿದ್ದಾರೆ.
ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ ಬಿಜೆಪಿ 33, ಶಿವಸೇನೆ (ಏಕನಾಥ್ ಶಿಂಧೆ ಬಣ) 15, ಎನ್‌ಸಿಪಿ (ಅಜಿತ್ ಪವಾರ್ ಬಣ) 18, ಶಿವಸೇನೆ (ಉದ್ಧವ್ ಠಾಕ್ರೆ ಬಣ) 5, ಕಾಂಗ್ರೆಸ್ 4, ಎನ್‌ಸಿಪಿ (ಶರದ್ ಪವಾರ್) 4, ಸಮಾಜವಾದಿ ಪಕ್ಷ 1 ಸೀಟುಗಳಲ್ಲಿ ಜಯಗಳಿಸಿವೆ.












Click it and Unblock the Notifications