Maharashtra Assembly Election 2024: 25 ಅಭ್ಯರ್ಥಿಗಳ ಬಿಜೆಪಿ 3ನೇ ಪಟ್ಟಿ ಬಿಡುಗಡೆ
ಮುಂಬೈ, ಅಕ್ಟೋಬರ್ 28: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ಕ್ಕೆ ಬಿಜೆಪಿ 25 ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದ ಆಡಳಿತ ಪಕ್ಷವಾಗಿರುವ ಬಿಜೆಪಿ ಚುನಾವಣೆಯನ್ನು ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿಕೊಂಡಿರುವ 'ಮಹಾಯುತಿ' ಮೈತ್ರಿಕೂಟದ ಮೂಲಕ ಎದುರಿಸಲಿದೆ.
ಸೋಮವಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಿಜೆಪಿ 2ನೇ ಪಟ್ಟಿಯಲ್ಲಿ 22, ಮೊದಲ ಪಟ್ಟಿಯಲ್ಲಿ 99 ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು.

ಶುಕ್ರವಾರ ಎನ್‌ಸಿಪಿ ನಾಯಕ ಅಜಿತ್ ಪವಾರ್ 288 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳ ಸೀಟು ಹಂಚಿಕೆ ಕುರಿತು ಇನ್ನೂ 'ಮಹಾಯುತಿ' ಮೈತ್ರಿಕೂಟದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದರು. ಇದುವರೆಗೂ ಬಿಜೆಪಿ 146 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ ಎಂದು ಅಂದಾಜಿಸಲಾಗಿದೆ.
ಮೈತ್ರಿಕೂಟದ ಸೀಟು ಹಂಚಿಕೆ: ಮಹಾರಾಷ್ಟ್ರದ ಚುನಾವಣೆಯನ್ನು ಎದುರಿಸಲು ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮಾಡಿಕೊಂಡಿದೆ. ಈ ಮೈತ್ರಿಕೂಟದಲ್ಲಿ ಬಿಜೆಪಿ ಪ್ರಮುಖ ಪಕ್ಷವಾಗಿದೆ. ಹಾಲಿ ರಾಜ್ಯದಲ್ಲಿ ಇದೇ ಮೈತ್ರಿಕೂಟ ಅಧಿಕಾರದಲ್ಲಿದೆ. ಏಕನಾಥ್ ಶಿಂಧೆ ಮುಖ್ಯಮಂತ್ರಿಗಳು.
ಮಹಾರಾಷ್ಟ್ರದ ವಿರೋಧ ಪಕ್ಷಗಳು ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟ ಇದು. ತಲಾ 85 ಸೀಟುಗಳನ್ನು ಹಂಚಿಕೊಂಡು ಪಕ್ಷಗಳು ಚುನಾವಣೆ ಎದುರಿಸುತ್ತಿವೆ.
2019ರ ಚುನಾವಣೆಯಲ್ಲಿ ಬಿಜೆಪಿ 105 ಸೀಟು, ಶೀವಸೇನೆ 56, ಕಾಂಗ್ರೆಸ್ 44 ಸೀಟುಗಳಲ್ಲಿ ಜಯಗಳಿಸಿದ್ದವು. 2014ರ ಚುನಾವಣೆಯಲ್ಲಿ ಬಿಜೆಪಿ 122 ಸೀಟುಗಳಲ್ಲಿ ಜಯಗಳಿಸಿತ್ತು. ಶಿವಸೇನೆ 63, ಕಾಂಗ್ರೆಸ್ 42 ಸೀಟುಗಳಲ್ಲಿ ಜಯಗಳಿಸಿತ್ತು.
ಬಿಜೆಪಿ ನೇತೃತ್ವದ ಮಹಾಯತಿ ಮೈತ್ರಿಕೂಟದಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ)ಕ್ಕೆ ಹೆಚ್ಚಿನ ಸೀಟುಗಳು ಸಿಕ್ಕಿವೆ. ಶೇ 10ರಷ್ಟು ಸೀಟುಗಳನ್ನು ಎನ್‌ಸಿಪಿ (ಅಜಿತ್ ಪವಾರ್ ಬಣ)ಗೆ ನೀಡಲಾಗಿದೆ. ಸದ್ಯ ರಾಜ್ಯದ ಆಡಳಿತವನ್ನು ಮಹಾಯತಿ ಮೈತ್ರಿಕೂಟ ನಡೆಸುತ್ತಿದೆ. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿರುವ ಬಿಜೆಪಿಗೆ ಮಹಾರಾಷ್ಟ್ರ ಸಹ ಪ್ರಮುಖ ರಾಜ್ಯವಾಗಿದೆ. ರಾಜ್ಯದಲ್ಲಿ ಹೆಚ್ಚು ಸೀಟುಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರವನ್ನು ಹಿಡಿಯಬೇಕು ಎಂದು ಚುನಾವಣಾ ತಯಾರಿಯನ್ನು ನಡೆಸಿದೆ.












Click it and Unblock the Notifications