Maharashtra and Jharkhand Election results 2024: ಮಹಾರಾಷ್ಟ್ರ, ಜಾರ್ಖಂಡ್ ಫಲಿತಾಂಶ; ಗೆಲುವು ಯಾರಿಗೆ?
ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆ ಬುಧವಾರ ನಡೆದಿದ್ದು, ಇಂದು (ನವೆಂಬರ್ 23) ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಜಯ ಗಳಿಸಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ಆದರೆ, ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ ಎಂಬ ಖಚಿತ ಮಾಹಿತಿ ಇಂದು ಸಂಜೆಯ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಜಾರ್ಖಂಡ್ ಅಸೆಂಬ್ಲಿ ಚುನಾವಣೆ ನವೆಂಬರ್ 13 ಮತ್ತು ನವೆಂಬರ್ 20ರಂದು 2 ಹಂತಗಳಲ್ಲಿ ನಡೆದಿದ್ದು, 81 ಸದಸ್ಯ ಬಲವನ್ನ ಹೊಂದಿದ್ದು, ಜಾರ್ಖಂಡ್‌ನಲ್ಲಿ ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಮತದಾನ ನಡೆದರೆ, ಉಳಿದ 38 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆದಿದೆ. ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟವು ಎನ್ಡಿಎಗೆ ತೀವ್ರ ಪೈಪೋಟಿ ನೀಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಈ ಬಾರಿ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬುಧವಾರ ಒಂದೇ ಹಂತದಲ್ಲಿ ಮತದಾನ ಮಾಡಲಾಗಿದ್ದು, ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಮಹಾಯುತಿ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಆದರೆ ಮಹಾ ವಿಕಾಸ್ ಅಘಾಡಿ (ಎಂವಿಎ) ಮತ್ತೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ.
ಇನ್ನೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿಕೂಟವಾದ ಮಹಾವಿಕಾಸ್ ಅಘಾಡಿಗೆ ಮತ್ತೆ ಸೋಲಾಗಲಿದೆ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ. ಬಿಜೆಪಿ ಮೈತ್ರಿಕೂಟ ಮಹಾಯುತಿ ಮತ್ತೊಮ್ಮೆ ಅಧಿಕಾರಕ್ಕೇರುವ ಸಾಧ್ಯತೆಗಳು ಹೆಚ್ಚಾಗಿವೆ. ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಕ್ಷೇತ್ರಗಳಲ್ಲಿ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಸರ್ಕಾರ ರಚನೆಗೆ 145 ಸಂಖ್ಯಾಬಲದ ಅವಶ್ಯಕತೆ ಇದೆ. ಈ ಎರಡು ರಾಜ್ಯಗಳ ವಿದ್ಯಮಾನದ ಕ್ಷಣ ಕ್ಷಣದ ಮಾಹಿತಿಗಾಗಿ ಒನ್ ಇಂಡಿಯಾ ಕನ್ನಡ ಫಾಲೋ ಮಾಡಿ.
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಪಕ್ಷ 288 ಸ್ಥಾನಗಳ ಪೈಕಿ 234 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದಿದ್ದರೆ, ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ 50 ಸ್ಥಾನಗಳನ್ನಷ್ಟೇ ಗೆದ್ದಿದೆ. ಇನ್ನು ಜಾರ್ಖಂಡ್‌ನಲ್ಲಿ 81 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ 56 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟ 24 ಸ್ಥಾನಗಳನ್ನು ಗೆದ್ದಿದೆ.
ನಾವು ಬುಡಕಟ್ಟು ಕ್ಷೇತ್ರದಲ್ಲಿ ಬಹುತೇಕ ಎಲ್ಲ ಸ್ಥಾನಗಳಲ್ಲಿ ಗೆದ್ದಿದ್ದೇವೆ, ಕಾಂಗ್ರೆಸ್ 7 ಬುಡಕಟ್ಟು ಸ್ಥಾನಗಳನ್ನು ಗೆದ್ದಿದೆ. ನಾವು ಉತ್ತಮ ಗೆಲುವು ಸಾಧಿಸಿದ್ದೇವೆ. ನಾವು ಅವರ ನಿರೀಕ್ಷೆಗಳನ್ನು ಉಳಿಸಿಕೊಳ್ಳುತ್ತೇವೆ. ಇಂದು CLP ಸಭೆಯನ್ನು ಕರೆದಿದ್ದೇವೆ. ಮೈತ್ರಿಕೂಟದ ಸಭೆ ನಡೆಸಿ, ರಾಜ್ಯಪಾಲರಿಗೆ ಈ ಬೆಂಬಲ ಪತ್ರವನ್ನು ನೀಡುತ್ತೇವೆ. ಬಳಿಕ ಪ್ರಮಾಣ ವಚನ ಸ್ವೀಕರಿಸಲಾಗುವುದು ಎಂದು ಕಾಂಗ್ರೆಸ್ ಸಂಸದ ಮತ್ತು ಜಾರ್ಖಂಡ್ ಸಹ ಉಸ್ತುವಾರಿ, ಸಪ್ತಗಿರಿ ಉಲಕಾ ಹೇಳಿದ್ದಾರೆ
ಚುನಾವಣೆಯಲ್ಲಿ ಮಹಾಯತಿ ಮೈತ್ರಿಕೂಟ ಅಭೂತಪೂರ್ವ ಫಲಿತಾಂಶವನ್ನು ದಾಖಲು ಮಾಡಿದೆ. ಮೈತ್ರಿಕೂಟದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಯಾವುದೇ ಪೈಪೋಟಿ ಇಲ್ಲ. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ)ದ ವರಿಷ್ಠ ನಾಯಕರು ಈ ಕುರಿತು ತೀರ್ಮಾನವನ್ನು ಕೈಗೊಳ್ಳಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಬಣದಿಂದ 75 ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಎರಡೂ ಪಕ್ಷಗಳು ಎರಡು ಬಣವಾಗಿ ಚುನಾವಣಾ ಕಣಕ್ಕಿಳಿದಿದ್ದು, ರಾಜ್ಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನಾಸಿಕ್ ಜಿಲ್ಲೆಯಲ್ಲಿ ಎಲ್ಲ 15 ಹಾಲಿ ಶಾಸಕರು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಅವರು ಗೆಲುವು ಸಾಧಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಜೆಎಂಎಂ ಮತ್ತು ಅದರ ಮಿತ್ರಪಕ್ಷಗಳು ಒಟ್ಟು 56 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಮತ್ತೊಮ್ಮೆ ಸಿಎಂ ಆಗಲು ಸಜ್ಜಾಗಿರುವ ಜೆಎಂಎಂ ನಾಯಕ ಹೇಮಂತ್ ಸೊರೆನ್ ಈ ಚುನಾವಣೆಯನ್ನು ಯಶಸ್ವಿಗೊಳಿಸಿದ ಎಲ್ಲ ಸಮುದಾಯಗಳ ಜನರಿಗೆ ಮತ್ತು ರಾಜ್ಯದ ಎಲ್ಲ ರೈತರು, ಮಹಿಳೆಯರು ಮತ್ತು ಯುವಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ
ಅಂತಿಮವಾಗಿ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ 81 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷವು 34 ಕ್ಷೇತ್ರಗಳ ಮೂಲಕ ಅತ್ಯಧಿಕ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಬಿಜೆಪಿಗೆ ತೀವ್ರ ಮುಖಭಂಗ ಮಾಡಿದೆ.
ಮಹಾರಾಷ್ಟ್ರದ 14 ಕೋಟಿ ಜನರು ನಮ್ಮನ್ನು ನಂಬಿ ಮತ ನೀಡಿದ್ದಾರೆ. ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಮಹಾರಾಷ್ಟ್ರವನ್ನು ಭಾರತದ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ನಾವು ಖಂಡಿತವಾಗಿಯೂ ಕೆಲಸ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಂಕುಳೆ ಹೇಳಿದ್ದಾರೆ.
ಭಾರತೀಯ ಚುನಾವಣಾ ಆಯೋಗದ ಪ್ರಕಾರ ಮಹಾರಾಷ್ಟ್ರ 288 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡಿದೆ. ಅಂತಿಮವಾಗಿ ಬಿಜೆಪಿ 132 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಶಿವಸೇನೆ (ಶಿಂಧೆ ಬಣ) 57, NCP 41, ಶಿವಸೇನೆ (ಉದ್ಧವ್ ಠಾಕ್ರೆ ಬಣ) 20, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 16, NCPSP 10, ಸಮಾಜವಾದಿ ಪಕ್ಷ 2, ಜನ ಸುರಾಜ್ಯ ಶಕ್ತಿ 2 ಹಾಗೂ ಇನ್ನಿತರೆ ಪಕ್ಷಗಳು ತಲಾ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬಾಕಿ ಇದೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಸಕೋಲಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ ಪ್ರತಿಸ್ಪರ್ಧಿಯನ್ನು 208 ಮತಗಳಿಂದ ಸೋಲಿಸಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಚುನಾವಣಾ ಆಯೋಗವು 81 ಕ್ಷೇತ್ರಗಳ ಫಲಿತಾಂಶ ಪ್ರಕಟಿಸಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ (JMM) 34 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಪಕ್ಷವು 21 ಸ್ಥಾನಗಳನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 16 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ರಾಷ್ಟ್ರೀಯ ಜನತಾ ದಳ (RJD) 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) (ಲಿಬರೇಶನ್) 2, AJSU ಪಕ್ಷ, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಜಾರ್ಖಂಡ್ ಲೋಕತಾಂತ್ರಿಕ್ ಕ್ರಾಂತಿಕಾರಿ ಮೋರ್ಚಾ, ಜೆಡಿಯು ಪಕ್ಷಗಳು ತಲಾ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ-ಮಹಾಯುತಿ ಅಮೋಘ ಜಯ ಸಾಧಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಪ್ರಧಾನಿ ಮೋದಿಯವರ ಅಭಿವೃದ್ಧಿ ಭಾರತ 2047ರ ಗುರಿಯನ್ನು ಮತ್ತಷ್ಟು ಹೆಚ್ಚಿಸಲು ಈ ಗೆಲುವು ಉತ್ತಮ ಸಂದೇಶವಾಗಿದೆ. ಮಹಾರಾಷ್ಟ್ರದ ಅಭಿವೃದ್ಧಿಯನ್ನು ಮಹಾರಾಷ್ಟ್ರದ ಜನರು ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಅಘಾಡಿಯ ತುಷ್ಟೀಕರಣದ ರಾಜಕೀಯವನ್ನು ತಿರಸ್ಕರಿಸಿದ್ದಾರೆ ಎಂದು ಪಿಯೂಷ್ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಬಿಜೆಪಿ ಮುಂಬೈ ಉತ್ತರ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಪಾಲ್ಗೊಂಡರು.
ಮೊದಲನೆಯದಾಗಿ ಇಂಡಿಯಾ ಮೈತ್ರಿಕೂಟವನ್ನು ಗೆಲ್ಲಲು ಜಾರ್ಖಂಡ್ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಜೆಎಂಎಂ ನಾಯಕ ರಾಮದಾಸ್ ಸೊರೆನ್ ಹೇಳಿದ್ದಾರೆ.
ಮಹಾರಾಷ್ಟ್ರ ಎಲ್ಲಾ ದಾಖಲೆಗಳನ್ನು ಮುರಿದಿದೆ. ಕಳೆದ 50 ವರ್ಷಗಳಲ್ಲಿ ಯಾವುದೇ ಪಕ್ಷ ಅಥವಾ ಚುನಾವಣಾ ಪೂರ್ವ ಮೈತ್ರಿಕೂಟಕ್ಕೆ ಇದು ಅತಿದೊಡ್ಡ ಗೆಲುವು ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಾಮಾಜಿಕ ನ್ಯಾಯ ಗೆದ್ದಿದೆ. ಸುಳ್ಳು ಮತ್ತು ವಂಚನೆಯು ಹೀನಾಯ ಸೋಲನ್ನು ಅನುಭವಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಹೇಳಿದರು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅವರು ಜನರನ್ನುದ್ದೇಶಿಸಿ ಮಾತನಾಡಿದರು.
ನಮಗೆ ಬೆಂಬಲ ನೀಡಿದ ಜಾರ್ಖಂಡ್ ಜನರಿಗೆ ಧನ್ಯವಾದ. ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯಕ್ಕಾಗಿ ಶ್ರಮಿಸಲು ನಾವು ಸದಾ ಮುಂಚೂಣಿಯಲ್ಲಿರುತ್ತೇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಮಾಹಿತಿ ರವಾನಿಸಿದ್ದಾರೆ. ಹಾಗೂ ರಾಜ್ಯದಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟದ ಸಾಧನೆಗಾಗಿ ನಾನು ಅಭಿನಂದಿಸುತ್ತೇನೆ ಎಂದು ಹೇಳಿದ್ಧಾರೆ.
I thank the people of Jharkhand for their support towards us. We will always be at the forefront of raising people’s issues and working for the state.
— Narendra Modi (@narendramodi) November 23, 2024
I also congratulate the JMM-led alliance for their performance in the state. @HemantSorenJMM
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.
ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸದಾಗಿ ಚುನಾಯಿತ ಶಾಸಕರು ಉಪಸ್ಥಿತರಿರುತ್ತಾರೆ. ಮೈತ್ರಿ ಪಾಲುದಾರರ ಮತ್ತೊಂದು ಸಭೆ ನಡೆಯಲಿದೆ. ಸಭೆಯ ನಂತರ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 103 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು 30ರಲ್ಲಿ ಮುನ್ನಡೆಯಲ್ಲಿದೆ. ಶಿವಸೇನೆ 47 ಗೆಲುವು ಹಾಗೂ 10ರಲ್ಲಿ ಮುನ್ನಡೆ ಸಾಧಿಸಿದ್ದರೆ, ಎನ್‌ಸಿಪಿ 37ರಲ್ಲಿ ಗೆಲುವು ಸಾಧಿಸಿ, 4 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರು ತಮ್ಮ ಪತ್ನಿ ಹಾಗೂ ಪಕ್ಷದ ನಾಯಕಿ ಕಲ್ಪನಾ ಸೊರೆನ್ ಅವರೊಂದಿಗೆ ರಾಂಚಿಯಲ್ಲಿರುವ ಜೆಎಂಎಂ ರಾಷ್ಟ್ರೀಯ ಅಧ್ಯಕ್ಷ ಶಿಬು ಸೊರೆನ್ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ ಸರ್ಕಾರ ರಚನೆಗೆ ಸಜ್ಜಾಗಿದೆ
ಮಹಾರಾಷ್ಟ್ರದ ಹಾಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಗ್ಪುರ ನೈಋತ್ಯ ಕ್ಷೇತ್ರದಲ್ಲಿ 1,29,401 ಮತಗಳನ್ನು ಪಡೆದು 39,710 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎದುರಾಳಿಯಾದ ಕಾಂಗ್ರೆಸ್ ಅಭ್ಯರ್ಥಿ 89,691 ಮತಗಳನ್ನು ಪಡೆದಿದ್ದಾರೆ. ಮಹಾಯತಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ಪಕ್ಷದ ವಿಜಯೋತ್ಸವವನ್ನು ಆಚರಿಸಲು ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸಿದರು.
ಬಿಜೆಪಿ ಜಾರ್ಖಂಡ್ ಚುನಾವಣಾ ಉಸ್ತುವಾರಿ, ಹಿಮಂತ ಬಿಸ್ವಾ ಶರ್ಮಾ ಅವರು ಎನ್‌ಡಿಎ ಹಿನ್ನಡೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನಾವು ಅಸ್ಸಾಂನ ಎಲ್ಲಾ ಐದು ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರೂ ಸಹ ಜಾರ್ಖಂಡ್‌ನಲ್ಲಿನ ಸೋಲು ನನಗೆ ವೈಯಕ್ತಿಕವಾಗಿ ತುಂಬಾ ನೋವು ನೀಡಿದೆ ಶರ್ಮಾ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಮಹಾಯುತಿ ಬಹುಮತ ಪಡೆದು ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸವಿತ್ತು. ಆದರೆ ನಮಗೆ ಅಭೂತಪೂರ್ವ ಜಯ ಸಿಕ್ಕಿದೆ ಮತ್ತು ಜನರ ಎಲ್ಲಾ ನಿರೀಕ್ಷೆಗಳನ್ನು ಈಡೇರಿಸಲು ನಾವು ಕೆಲಸ ಮಾಡುತ್ತೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಇತರ ಕೇಂದ್ರ ನಾಯಕರ ಕ್ಲೀನ್ ಇಮೇಜ್‌ನಿಂದ ನಾವು ಪ್ರಯೋಜನ ಪಡೆದಿದ್ದೇವೆ. ನಾವು ಉತ್ತಮ ಆಡಳಿತವನ್ನು ನೀಡಿದ್ದೇವೆ, ಸಮಾಜದ ಎಲ್ಲ ವರ್ಗಗಳ ಬಗ್ಗೆ ಕಾಳಜಿ ವಹಿಸಿದ್ದೇವೆ. ಮತ್ತು ಪರಿಣಾಮವಾಗಿ, ಮಹಾರಾಷ್ಟ್ರದ ಜನರು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಮಹಾಯುತಿಯ ನಾಯಕರು ನಿರ್ಧರಿಸುತ್ತಾರೆ ಎಂದು ಬಿಜೆಪಿ ನಾಯಕ ರಾಹುಲ್ ನಾರ್ವೇಕರ್ ಹೇಳಿದ್ದಾರೆ.
ಮಹಾರಾಷ್ಟ್ರದ ವರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಜಯಗಳಿಸಿದ್ದಾರೆ. ಎಂವಿಎ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಅವರು 63,324 ಮತಗಳನ್ನು ಪಡೆದು 8801 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎದುರಾಳಿಯಾಗಿದ್ದು ಶಿವಸೇನೆ (ಏಕನಾಥ್ ಶಿಂಧೆ ಬಣ) ಅಭ್ಯರ್ಥಿ ಮಿಲಿಂದ್ ಮುರಳಿ ದಿಯೋರಾ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಫಲಿತಾಂಶದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್. ಅಭಿವೃದ್ಧಿಗೆ ಜಯ!, ಉತ್ತಮ ಆಡಳಿತಕ್ಕೆ ಜಯ!, ಒಟ್ಟಾಗಿದ್ದರೆ ನಾವು ಇನ್ನೂ ಎತ್ತರಕ್ಕೆ ಏರುತ್ತೇವೆ!. ಎನ್‌ಡಿಎ ಐತಿಹಾಸಿಕ ಜನಾದೇಶಕ್ಕಾಗಿ ಮಹಾರಾಷ್ಟ್ರದ ನನ್ನ ಸಹೋದರಿಯರು ಮತ್ತು ಸಹೋದರರಿಗೆ, ವಿಶೇಷವಾಗಿ ರಾಜ್ಯದ ಯುವಕರು ಮತ್ತು ಮಹಿಳೆಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ನಮ್ಮ ಮೈತ್ರಿಯು ಮಹಾರಾಷ್ಟ್ರದ ಪ್ರಗತಿಗೆ ಶ್ರಮಿಸುತ್ತದೆ ಎಂದು ನಾನು ಜನರಿಗೆ ಭರವಸೆ ನೀಡುತ್ತೇನೆ. ಜೈ ಮಹಾರಾಷ್ಟ್ರ! ಎಂದು ಪೋಸ್ಟ್ ಹಾಕಿದ್ದಾರೆ.
ಇದು ಮಹಾಯುತಿಯ ದಾಖಲೆಯ ವಿಜಯವಾಗಿದೆ. ನಾವು ಇಡೀ ಮಹಾರಾಷ್ಟ್ರಕ್ಕೆ ಕೃತಜ್ಞರಾಗಿರುತ್ತೇವೆ. ಅವರ ಆಡಳಿತದ ಅವಧಿಯಲ್ಲಿ ಎಂವಿಎ ಮಾಡಿದ್ದ ಎಲ್ಲ ಅಡೆತಡೆಗಳನ್ನು ನಾವು ತೆಗೆದುಹಾಕಿದ್ದೇವೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿದ್ದಾರೆ
ಮಹಾರಾಷ್ಟ್ರದಲ್ಲಿ ಬಿಜೆಪಿ 130, ಶಿವಸೇನೆ (ಏಕನಾಥ್ ಶಿಂಧೆ ಬಣ) 54, ಎನ್‌ಸಿಪಿ (ಅಜಿತ್ ಪವಾರ್ ಬಣ) 40 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಮೂರು ಪಕ್ಷಗಳು ಸೇರಿರುವ 'ಮಹಾಯುತಿ' ಮೈತ್ರಿಕೂಟ 228 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ 18, ಶಿವಸೇನೆ (ಉದ್ಧವ್ ಠಾಕ್ರೆ ಬಣ) 21, ಎನ್‌ಸಿಪಿ (ಶರದ್ ಪವಾರ್) 12, ಎಐಎಂಐಎಂ 2, ಇತರರು/ ಪಕ್ಷೇತರರು 11 ಸೀಟುಗಳಲ್ಲಿ ಮುನ್ನಡೆ ಪಡೆದಿದ್ದಾರೆ. ಎಂವಿಎ ಮೈತ್ರಿಕೂಟ 53 ಸೀಟುಗಳಲ್ಲಿ ಮುನ್ನಡೆಯಲ್ಲಿದೆ.












Click it and Unblock the Notifications