Mahakumbh Mela 2025: ಪ್ರಯಾಗ್‌ರಾಜ್ ವಿಮಾನ, ಹೋಟೆಲ್ ದರದಲ್ಲಿ ಭಾರೀ ಏರಿಕೆ
ಲಕ್ನೋ, ಜನವರಿ 06: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ. ಮಹಾ ಕುಂಭಮೇಳ-2025 ಜನವರಿ 13ರಿಂದ ಫೆಬ್ರುವರಿ 26ರ ತನಕ ನಡೆಯಲಿದೆ. ಇದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ತಯಾರಿಯನ್ನು ಕೈಗೊಂಡಿದೆ. ಸಾಧುಗಳು ಈಗಾಗಲೇ ಈ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ದೇಶದ ವಿವಿಧ ಕಡೆಯಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ರೈಲು, ವಿಮಾನದ ವ್ಯವಸ್ಥೆ ಮಾಡಲಾಗಿದೆ.
ಮಹಾ ಕುಂಭಮೇಳ-2025ರ ಹಿನ್ನಲೆಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ಹೋಟೆಲ್ ದರಗಳು ಹೆಚ್ಚಾಗಿವೆ. ಪ್ರಯಾಗ್‌ರಾಜ್‌ಗೆ ಹೋಗುವ ಬರುವ ರೈಲು, ವಿಮಾನಗಳ ಟಿಕೆಟ್‌ಗಳು ದುಬಾರಿಯಾಗಿವೆ. 45 ಲಕ್ಷ ಜನರು ಈ ಉತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ವಸತಿ ವ್ಯವಸ್ಥೆ ಮಾಡುವುದು ಸವಾಲಿನ ಕೆಲಸವೇ ಆಗಿದೆ.

ಭಾರತ ಮಾತ್ರವಲ್ಲ ವಿಶ್ವದ ವಿವಿಧ ದೇಶಗಳ ಜನರು ಸಹ ಮಹಾ ಕುಂಭಮೇಳ-2025ಕ್ಕೆ ಆಗಮಿಸಲಿದ್ದಾರೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಹಿತಿ ಪ್ರಕಾರ ಮಹಾ ಕುಂಭಮೇಳ-2025ಕ್ಕೆ ತೆರಳುವ ಜನರಿಗಾಗಿ 20 ಹೊಸ ವಿಮಾನಗಳು ಹಾರಾಟವನ್ನು ನಡೆಸಲಿವೆ.
ಇಂಡಿಗೋ ಮಹಾ ಕುಂಭಮೇಳ-2025ಕ್ಕಾಗಿ ಬೆಂಗಳೂರು, ಅಹಮದಾಬಾದ್, ಕೋಲ್ಕತ್ತಾದಿಂದ ಹೊಸ ವಿಮಾನ ಸೇವೆಯನ್ನು ಆರಂಭಿಸಿದೆ. ಸ್ಪೈಸ್ ಜೆಟ್ ಬೆಂಗಳೂರು, ಅಹಮದಾಬಾದ್, ದೆಹಲಿ ಮತ್ತು ಮುಂಬೈನಿಂದ ವಿಮಾನ ಸೇವೆಯನ್ನು ನೀಡಲಿದೆ.
ಕೆಲವು ವಿಮಾನಗಳು ಮಾತ್ರ ಇರುವ ಕಾರಣಕ್ಕೆ ದರ ಸಮರ ಜೋರಾಗಿದೆ. ವಿಮಾನದ ಮೂಲಕ ಪ್ರಯಾಗ್‌ರಾಜ್‌ಗೆ ತೆರಳುವ ಜನರು ಹೆಚ್ಚಿನ ದರವನ್ನು ಮಹಾ ಕುಂಭಮೇಳ-2025ರ ಸಮಯದಲ್ಲಿ ಪಾವತಿ ಮಾಡುವುದು ಅನಿವಾರ್ಯವಾಗಿದೆ.
ಜನವರಿ 11ರಂದು ಬೆಂಗಳೂರು-ಪ್ರಯಾಗ್‌ರಾಜ್ ನಡುವಿನ ವಿಮಾನ ಪ್ರಯಾಣ ದರ 22,000 ರೂ. ಇದೆ. ಮುಂಬೈ-ಪ್ರಯಾಗ್‌ರಾಜ್ ನಡುವಿನ ಪ್ರಯಾಣ ದರ ಜನವರಿ 12ರಂದು 30,000 ರೂ. ಇದೆ. ಮಹಾ ಕುಂಭಮೇಳ-2025ಕ್ಕೆ ಆಗಮಿಸುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಪ್ರಯಾಗ್‌ರಾಜ್‌ನಲ್ಲಿ ಹೊಸ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ.
ಪೀಕ್ ಅವರ್‌ನಲ್ಲಿ 2,700 ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಪ್ರಯಾಗ್‌ರಾಜ್‌ನ ಹೊಸ ಟರ್ಮಿನಲ್ ಹೊಂದಿದೆ. 45 ದಿನಗಳ ಕಾಲ ಮಹಾ ಕುಂಭಮೇಳ-2025 ನಡೆಯಲಿದ್ದು, ವಿಮಾನಗಳ ಟಿಕೆಟ್‌ಗಳು ಈಗಾಗಲೇ ಬುಕ್ ಆಗುತ್ತಿವೆ. ಆದ್ದರಿಂದ ದರಗಳು ಸದ್ಯಕ್ಕೆ ಕಡಿಮೆ ಆಗುವುದಿಲ್ಲ.
ಹೋಟೆಲ್‌ಗಳ ದರ ಏರಿಕೆ: ಪ್ರಯಾಗ್‌ರಾಜ್‌ನಲ್ಲಿ ಹೋಟೆಲ್‌ಗಳ ದರದಲ್ಲಿಯೂ ಭಾರೀ ಏರಿಕೆ ಕಂಡುಬಂದಿದೆ. ಒಂದು ರಾತ್ರಿ ಪ್ರಯಾಗ್‌ರಾಜ್‌ನಲ್ಲಿ ವಾಸ್ತವ್ಯ ಹೂಡಲು 40,000 ರೂ. ತನಕ ಹೋಟೆಲ್‌ನ ದರವಿದೆ. ಮಹಾ ಕುಂಭಮೇಳ-2025ಕ್ಕೆ ಉತ್ತರ ಪ್ರದೇಶ ಸರ್ಕಾರ 5,496 ಕೋಟಿ ರೂ. ವೆಚ್ಚವನ್ನು ಮಾಡುತ್ತಿದೆ.
ಮಹಾ ಕುಂಭಮೇಳ-2025ಕ್ಕೆ ಆಗಮಿಸುವ ಪ್ರವಾಸಿಗರು, ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸ್ಥಳಾಂತರ ಮಾಡಬಹುದಾದ 'ಮಹಾ ಕುಂಭನಗರ' ನಿರ್ಮಾಣ ಮಾಡಲಾಗಿದೆ. ಸಾವಿರಾರು ಟೆಂಟ್‌ಗಳು, ವಸತಿ ವ್ಯವಸ್ಥೆ ಈ ನಗರದಲ್ಲಿ ಲಭ್ಯವಿದೆ. ಅಲ್ಲದೇ ಐಆರ್‌ಸಿಟಿಸಿ ಮಹಾ ಕುಂಭಗ್ರಾಮವನ್ನು ನಿರ್ಮಾಣ ಮಾಡಿದೆ. ಇದು ಐಷಾರಾಮಿ ಟೆಂಟ್, ವಿಲ್ಲಾಗಳನ್ನು ಒಳಗೊಂಡಿದೆ. ಆಧುನಿಕ ವಸತಿ ಸೌಕರ್ಯಗಳು ಇರುವಂತೆ ಈ ಗ್ರಾಮ ನಿರ್ಮಾಣ ಮಾಡಲಾಗಿದೆ.
ಭಾರತೀಯ ರೈಲ್ವೆ ಸಾಮಾನ್ಯ, ಐಷಾರಾಮಿ ಸೇರಿದಂತೆ ವಿವಿಧ ರೈಲುಗಳ ಸಂಪರ್ಕವನ್ನು ಪ್ರಯಾಗ್‌ರಾಜ್‌ಗೆ ಒದಗಿಸಿದೆ. ಮಹಾ ಕುಂಭಮೇಳ-2025ಕ್ಕೆ ತೆರಳುವ ಭಕ್ತರಿಗೆ ರೈಲುಗಳಲ್ಲಿ ಉಚಿತ ಪ್ರಯಾಣ ಎಂಬ ಸುದ್ದಿಗಳು ಕೆಲವು ದಿನಗಳ ಹಿಂದೆ ಹಬ್ಬಿತ್ತು. ಆದರೆ ಇದನ್ನು ರೈಲ್ವೆ ಇಲಾಖೆ ನಿರಾಕರಿಸಿತ್ತು.












Click it and Unblock the Notifications