Mahakumbh Mela 2025: ಮಹಾ ಕುಂಭಮೇಳ, 45 ದಿನದ ಉತ್ಸವಕ್ಕೆ ಮಾಡಲಾದ ವಿಶೇಷ ವ್ಯವಸ್ಥೆಗಳು
ಲಕ್ನೋ, ಜನವರಿ 05: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ-2025ರ ತಯಾರಿ ಅಂತಿಮ ಹಂತದಲ್ಲಿದೆ. ಮಹಾ ಕುಂಭಮೇಳವನ್ನು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಉತ್ಸವ ಎಂದು ಕರೆಯಲಾಗುತ್ತದೆ. ಕೋಟ್ಯಾಂತರ ಜನರು ಈ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕಾಗಿ ಅಗತ್ಯ ತಯಾರಿಗಳನ್ನು ಮಾಡಲಾಗುತ್ತಿದೆ. ಅಲ್ಲದೇ ಮಹಾ ಕುಂಭಮೇಳಕ್ಕಾಗಿಯೇ ಕೆಲವು ವಿಶೇಷ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ಭಾರತೀಯ ರೈಲ್ವೆ 13,000 ವಿಶೇಷ ರೈಲುಗಳನ್ನು ಓಡಿಸುತ್ತಿದೆ.
ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ-2025 ಜನವರಿ 13ರಿಂದ ಫೆಬ್ರವರಿ 26ರ ತನಕ ನಡೆಯಲಿದೆ. ಈ ಭವ್ಯವಾದ ಉತ್ಸವ ಭಕ್ತಿ, ಏಕತೆ ಮತ್ತು ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಪರಿಚಯಿಸಲಿದೆ. ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ-2025 ವೀಕ್ಷಿಸಲು ಆಗಮಿಸುವ ಲಕ್ಷಾಂತರ ಯಾತ್ರಿಕರು ಮತ್ತು ಭಕ್ತರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಪ್ರಯಾಗ್‌ರಾಜ್ ಜಿಲ್ಲಾಡಳಿತ ಮಹಾ ಕುಂಭಮೇಳ-2025ಕ್ಕೆ ಮಾಡಲಾದ ವಿಶೇಷ ವ್ಯವಸ್ಥೆಗಳ ಕುರಿತು ಮಾಹಿತಿಯನ್ನು ನೀಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಉತ್ತರ ಪ್ರದೇಶ ಪೊಲೀಸರು, ಎನ್‌ಎಸ್‌ಜಿ ಕಮಾಂಡೋಗಳು ಕಣ್ಗಾವಲು ಇಟ್ಟಿದ್ದಾರೆ. ಭಕ್ತರಿಗಾಗಿ ಅಗತ್ಯ ಮೂಲ ಸೌಲಭ್ಯವನ್ನು ಒದಗಿಸುವ ಕೆಲಗಳು ಅಂತಿಮ ಹಂತದಲ್ಲಿದೆ.
ಯಾವ-ಯಾವ ವಿಶೇಷ ವ್ಯವಸ್ಥೆಗಳು
* ಅಂಡರ್ ವಾಟರ್ ಡ್ರೋನ್. ಮಹಾ ಕುಂಭಮೇಳ-2025 ನಡೆಯುವ ಸಂಗಮ ಸ್ಥಳದಲ್ಲಿ 24/7 ಅಂಡರ್ ವಾಟರ್ ಡ್ರೋನ್‌ಗಳನ್ನು ನಿಯೋಜನೆ ಮಾಡಲಾಗಿದೆ. 100 ಮೀಟರ್ ಆಳದ ತನಕ ಇವುಗಳು ಕಣ್ಗಾವಲು ಇಡಲಿವೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಿವೆ.
* ಭೀಷ್ಮ ಕ್ಯೂಬ್ ಅತ್ಯಾಧುನಿಕ ಸಂಚಾರಿ ಆಸ್ಪತ್ರೆ. ಮಹಾ ಕುಂಭಮೇಳ-2025ರ ಪ್ರದೇಶದಲ್ಲಿ ಅತ್ಯಾಧುನಿಕ ಸಂಚಾರಿ ಆಸ್ಪತ್ರೆ 'ಭೀಷ್ಮ ಕ್ಯೂಬ್' ಇರಲಿದೆ. 200 ಜನರಿಗೆ ಏಕಕಾಲದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಇದು ಒಳಗೊಂಡಿದೆ. 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್‌ಗೆ ಭೇಟಿ ನೀಡಿದ್ದಾಗ ಯುದ್ಧಪೀಡಿತ ಉಕ್ರೇನ್‌ಗೆ 'ಭೀಷ್ಮ ಕ್ಯೂಬ್' ಅನ್ನು ಉಡುಗೊರೆಯಾಗಿ ನೀಡಿದ್ದರು.
* ನೇತ್ರಕುಂಭ ಕ್ಯಾಂಪ್. ಮಹಾ ಕುಂಭಮೇಳ-2025ರ ಅಂಗವಾಗಿ 'ನೇತ್ರಕುಂಭ' ಕ್ಯಾಂಪ್ ತೆರೆಯಲಾಗುತ್ತದೆ. ಇಲ್ಲಿ ಸುಮಾರು 5 ಲಕ್ಷ ಭಕ್ತರಿಗೆ ಕಣ್ಣಿನ ಪರೀಕ್ಷೆ ಮಾಡಿ ಮತ್ತು ಕನ್ನಡಕಗಳನ್ನು ವಿತರಣೆ ಮಾಡಲಾಗುತ್ತದೆ. ಇದು ಗಿನ್ನಿಸ್ ದಾಖಲೆಗೆ ಸಹ ಸೇರುವ ಸಾಧ್ಯತೆ ಇದೆ.
* ತುರ್ತು ಸೇವೆಗೆ ವಿಶೇಷ ವ್ಯವಸ್ಥೆ. ಮಹಾ ಕುಂಭಮೇಳದ ಸಮಯದಲ್ಲಿ ಮಕ್ಕಳನ್ನು ಗುರಿಯಾಗಿಸಿಕೊಂಡು ವಿಶೇಷ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
* ಮಹಾ ಕುಂಭನಗರ. ಮಹಾ ಕುಂಭಮೇಳ-2025ಕ್ಕೆ ಆಗಮಿಸುವ ಪ್ರವಾಸಿಗರು, ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸ್ಥಳಾಂತರ ಮಾಡಬಹುದಾದ ಮಹಾ ಕುಂಭನಗರ ನಿರ್ಮಾಣ ಮಾಡಲಾಗಿದೆ. ಸಾವಿರಾರು ಟೆಂಟ್‌ಗಳು, ವಸತಿ ವ್ಯವಸ್ಥೆ ಈ ನಗರದಲ್ಲಿ ಲಭ್ಯವಿದೆ.
* ಮಹಾ ಕುಂಭಗ್ರಾಮ. ಐಆರ್‌ಸಿಟಿಸಿ ಮಹಾ ಕುಂಭಮೇಳ-2025ರ ಅಂಗವಾಗಿ ಮಹಾ ಕುಂಭಗ್ರಾಮವನ್ನು ನಿರ್ಮಾಣ ಮಾಡಿದೆ. ಇದು ಐಷಾರಾಮಿ ಟೆಂಟ್, ವಿಲ್ಲಾಗಳನ್ನು ಒಳಗೊಂಡಿದೆ. ಆಧುನಿಕ ವಸತಿ ಸೌಕರ್ಯಗಳು ಇರುವಂತೆ ಈ ಗ್ರಾಮವನ್ನು ನಿರ್ಮಾಣ ಮಾಡಲಾಗಿದೆ.
* ರಿಯಲ್ ಟೈಂ ಅಪ್ಲಿಕೇಶನ್ ಬೆಂಬಲ. ಮಹಾ ಕುಂಭಮೇಳ-2025ದ ಜನರ ದಟ್ಟಣೆ, ತುರ್ತು ಪರಿಸ್ಥಿತಿ, ಕಮಾಂಡ್ ಮಾಹಿತಿ ಮುಂತಾದ ಮಾಹಿತಿಗಳನ್ನು ಶೇರ್ ಮಾಡಲು ರಿಯಲ್ ಟೈಂ ಮಾಹಿತಿ ನೀಡುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ.
* ವಿದೇಶಿ ಯಾತ್ರಿಕರಿಗೆ ವಿಶೇಷ ವ್ಯವಸ್ಥೆ. ಮಹಾ ಕುಂಭಮೇಳ-2025ಕ್ಕೆ ಆಗಮಿಸುವ ವಿದೇಶಿ ಯಾತ್ರಿಕರನ್ನು ಗಮನದಲ್ಲಿಟ್ಟುಕೊಂಡು ವಿವಿಧ ಭಾಷೆಯಲ್ಲಿ ಮಾಹಿತಿ ನೀಡುವ ಸೂಚನಾ ಫಲಕಗಳನ್ನು ನಿರ್ಮಾಣ ಮಾಡಲಾಗಿದೆ. ಇವು ಭಾರತದ ಭವ್ಯ ಸಂಸ್ಕೃತಿ, ವೈವಿಧ್ಯತೆಯ ಕುರಿತು ಪರಿಚಯವನ್ನು ಮಾಡಿಸುತ್ತವೆ.












Click it and Unblock the Notifications