Raksha Bandhan: ರಕ್ಷಾ ಬಂಧನ ಹಬ್ಬಕ್ಕೆ ಮಹಿಳೆಯರಿಗೆ ಭರ್ಜರಿ ಗಿಫ್ಟ್ ಕೊಟ್ಟ ಮಧ್ಯಪ್ರದೇಶ ಸರ್ಕಾರ
ಭೋಪಾಲ್ ಆಗಸ್ಟ್ 28: ರಕ್ಷಾ ಬಂಧನ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈ ನಡುವೆ ಮಧ್ಯಪ್ರದೇಶ ಸರ್ಕಾರ ರಾಜ್ಯದ ಮಹಿಳೆಯರಿಗೆ ಉಡುಗೊರೆಯೊಂದನ್ನು ನೀಡಿದೆ. ಲಾಡ್ಲಿ ಬೆಹ್ನಾ ಯೋಜನೆಯಲ್ಲಿ ನೀಡುತ್ತಿದ್ದ ಆರ್ಥಿಕ ನೆರವನ್ನು ಮಾಸಿಕ 1,000 ರೂ.ನಿಂದ 1,250 ರೂ.ಗೆ ಹೆಚ್ಚಿಸಿದೆ.
ಮಹಿಳೆಗೆ ಆಗಸ್ಟ್‌ನಲ್ಲಿ 450 ರೂ.ಗೆ ಎಲ್‌ಪಿಜಿ ಲಭ್ಯ
ಅಲ್ಲದೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರಿಗೆ 35 ಪ್ರತಿಶತ ಮೀಸಲಾತಿಯನ್ನು ಘೋಷಿಸಿದ್ದಾರೆ. ಶ್ರಾವಣಮಾಸವನ್ನು ನೆನೆಪಿನಲ್ಲಿಡಲು ಆಗಸ್ಟ್‌ನಲ್ಲಿ ಮಹಿಳೆಯರಿಗೆ 450 ರೂ.ಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.

'ಮಹಿಳೆಯರಿಗೆ ಪವಿತ್ರವಾದ ಶ್ರಾವಣಮಾಸ ತಿಂಗಳಲ್ಲಿ 450 ರೂ.ಗೆ ಅಡುಗೆ ಅನಿಲ ಸಿಗುತ್ತದೆ. 1.25 ಕೋಟಿ ಮಹಿಳೆಯರು ರಾಖಿಯನ್ನು (ಮಂಗಳವಾರ) ಚೆನ್ನಾಗಿ ಆಚರಿಸಲು ಅವರ ಖಾತೆಗೆ 250 ರೂ.ಗಳನ್ನು ವರ್ಗಾಯಿಸಿದ್ದೇನೆ. ಉಳಿದ ರೂ 1,000 (ಲಾಡ್ಲಿ ಬೆಹ್ನಾ ಯೋಜನೆಯಡಿ) ಸೆಪ್ಟೆಂಬರ್‌ನಲ್ಲಿ ಜಮಾ ಮಾಡಲಾಗುವುದು' ಎಂದು ಚೌಹಾಣ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 1 ರಿಂದ 1.25 ಕೋಟಿಗೂ ಹೆಚ್ಚು ಮಹಿಳೆಯರಿಗೆ 1,250 ರೂ.
ಹೆಚ್ಚಿನ ವಿವರಗಳನ್ನು ನೀಡಿದ ಮುಖ್ಯಮಂತ್ರಿ ಚೌಹಾಣ್, 1.25 ಕೋಟಿ ಮಹಿಳೆಯರಿಗೆ ಅಕ್ಟೋಬರ್ 1 ರಿಂದ ರೂ 1,250 (ಲಾಡ್ಲಿ ಬೆಹ್ನಾ ಯೋಜನೆಯಡಿ) ಸಿಗಲಿದೆ ಮತ್ತು ಈ ಮೊತ್ತವನ್ನು ಕ್ರಮೇಣವಾಗಿ ತಿಂಗಳಿಗೆ 3,000 ರೂ.ಗೆ ಹೆಚ್ಚಿಸಲಾಗುವುದು. ಇದರಿಂದಾಗಿ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಮೇಲಕ್ಕೆತ್ತುವ ಗುರಿಯನ್ನು ಈಡೇರಿಸಲಾಗುತ್ತದೆ ಎಂದಿದ್ದಾರೆ.
ಈಗಿನ ಶೇ.30ರಿಂದ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಶೇ.35ಕ್ಕೆ ಹೆಚ್ಚಿಸಲಾಗಿದ್ದು, ಶಿಕ್ಷಕರ ನೇಮಕಾತಿಯಲ್ಲಿ ಶೇ.50ರಷ್ಟಾಗಲಿದೆ ಎಂದು ಅವರು ಹೇಳಿದರು.

ಲಾಡ್ಲಿ ಬೆಹನಾ ಯೋಜನೆಯ ಭಾಗವಾಗಿ, ಸಣ್ಣ ಪ್ರಮಾಣದ ಘಟಕಗಳನ್ನು ತೆರೆಯಲು ಮಹಿಳೆಯರಿಗೆ ಕೈಗಾರಿಕಾ ವಸಾಹತುಗಳಲ್ಲಿ ಭೂಮಿಯನ್ನು ನೀಡಲಾಗುತ್ತದೆ ಮತ್ತು ರಾಜ್ಯ ಸರ್ಕಾರವು ಮಹಿಳೆಯರ ಆದಾಯವನ್ನು ತಿಂಗಳಿಗೆ ಕನಿಷ್ಠ 10,000 ರೂ.ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಅತಿಕ್ರಮಣ ತೆರವುಗೊಂಡಿರುವ ಗ್ರಾಮಗಳಲ್ಲಿ ಮಹಿಳೆಯರಿಗೆ ಉಚಿತ ಭೂಮಿ ಮತ್ತು ನಗರಗಳಲ್ಲಿ ನಿವೇಶನಗಳನ್ನು ನೀಡಲಾಗುವುದು ಎಂದು ಸಿಎಂ ಚೌಹಾಣ್ ಹೇಳಿದ್ದಾರೆ.
ಲಾಡ್ಲಿ ಬೆಹ್ನಾ ಯೋಜನೆಯ ಬಗ್ಗೆ
ಗಮನಾರ್ಹವೆಂದರೆ ಈ ವರ್ಷ ಜೂನ್ 10 ರಂದು ಪ್ರಾರಂಭವಾದ ಲಾಡ್ಲಿ ಬೆಹ್ನಾ ಯೋಜನೆಯಡಿ ಅರ್ಹ ಮಹಿಳೆಯರಿಗೆ 3,628.85 ಕೋಟಿ ರೂಪಾಯಿಗಳನ್ನು ಆರ್ಥಿಕ ಸಹಾಯವಾಗಿ ನೀಡಲಾಗಿದೆ. ಮತ್ತು 23-60 ವಯೋಮಾನದ ಮಹಿಳೆಯರು ಆದಾಯ ತೆರಿಗೆ ಪಾವತಿದಾರರಲ್ಲದಿದ್ದರೆ ಮತ್ತು ಅವರ ಕುಟುಂಬದ ವಾರ್ಷಿಕ ಆದಾಯವು ವಾರ್ಷಿಕವಾಗಿ 2.5 ಲಕ್ಷಕ್ಕಿಂತ ಕಡಿಮೆಯಿದ್ದರೆ ಯೋಜನೆಯಡಿಯಲ್ಲಿ ತಿಂಗಳಿಗೆ 1,000 ರೂ. ನೀಡಲಾಗುತ್ತಿದೆ.
ರಾಜ್ಯದಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಿಎಂ ಚೌಹಾಣ್‌ನಿಂದ ಈ ಹೊಸ ಘೋಷಣೆ ಹೊರಬಿದ್ದಿದೆ. ಆದಾಗ್ಯೂ, ಸಿಎಂ ಚೌಹಾಣ್ ಅವರ ನಡೆಯನ್ನು ಕಾಂಗ್ರೆಸ್ ಅಪಹಾಸ್ಯ ಮಾಡಿದ್ದು, ರಾಜ್ಯ ಘಟಕದ ಮುಖ್ಯಸ್ಥ ಕಮಲ್ ನಾಥ್ ಅವರು ಮುಳುಗುತ್ತಿರುವ ಹಡಗನ್ನು ರಕ್ಷಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಎಕ್ಸ್‌ನಲ್ಲಿ (ಟ್ವಿಟ್ಟರ್‌ನಲ್ಲಿ) ಬರೆದಿದ್ದಾರೆ.
ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಾದ ಬಾಲಘಾಟ್, ಮಂಡ್ಲಾ, ದಿಂಡೋರಿ, ಅಲಿರಾಜ್‌ಪುರ ಮತ್ತು ಝಬುವಾ ಸೇರಿದಂತೆ 230 ವಿಧಾನಸಭಾ ಸ್ಥಾನಗಳಲ್ಲಿ ಕನಿಷ್ಠ 18 ರಲ್ಲಿ ಮಧ್ಯಪ್ರದೇಶದ ಮಹಿಳಾ ಮತದಾರರು ತಮ್ಮ ಪುರುಷ ಮತದಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.












Click it and Unblock the Notifications