Madhya Pradesh; ಕಾಂಗ್ರೆಸ್‌ಗೆ ಮುಖಭಂಗ, ಭಾರೀ ಹಿನ್ನಡೆ!
ಭೋಪಾಲ್, ಡಿಸೆಂಬರ್ 03; ಮಧ್ಯಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆ 2023ರಲ್ಲಿ ಬಿಜೆಪಿ ಬಹುಮತಕ್ಕೂ ಮೀರಿ ಮುನ್ನಡೆ ಕಾಯ್ದುಕೊಂಡಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಬಿಜೆಪಿ 137 ಕ್ಷೇತ್ರಗಳಲ್ಲಿ ಮುನ್ನಡೆಯಲಿದ್ದು, ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ.
ಭಾನುವಾರ ಬೆಳಗ್ಗೆ 8 ಗಂಟೆಗೆ ಮಧ್ಯಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಯಿತು. ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರ ಶುಕ್ರವಾರ ಮತದಾನ ನಡೆದಿತ್ತು. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 116.

2024ರ ಲೋಕಸಭಾ ಚುನಾವಣೆಗೆ ಮೊದಲು ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ ಸಹ ಒಂದು. ಆದ್ದರಿಂದ ಚುನಾವಣೆಯ ಫಲಿತಾಂಶ ಕುತೂಹಲ ಮೂಡಿಸಿತ್ತು. ಆದರೆ ಬಿಜೆಪಿಯ ಮುನ್ನಡೆ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ಉಂಟು ಮಾಡಿದೆ. ಯಾವುದೇ ಸ್ಪರ್ಧೆ ಇಲ್ಲದೇ ಕಾಂಗ್ರೆಸ್ ಸೋಲಿಗೆ ಶರಣಾಗಲಿದೆ.
ಚುನಾವಣಾ ಆಯೋಗದ 10.34ರ ಅಪ್‌ಡೇಟ್ ನಂತೆ ಬಿಜೆಪಿ 137, ಕಾಂಗ್ರೆಸ್ 57, ಜಿಪಿಪಿ 2, ಬಿಎಸ್ಪಿ 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಸ್ಪಷ್ಟ ಬಹುಮತಕ್ಕೆ ಬೇಕಾದ ಸಂಖ್ಯೆಗಿಂತ ಅಧಿಕ ಸ್ಥಾನದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ.
ಮತ ಎಣಿಕೆ ಆರಂಭವಾದಾಗ ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಮುಂದಿತ್ತು. ಆದರೆ ಇವಿಎಂ ಯಂತ್ರಗಳ ಮತ ಎಣಿಕೆ ಆರಂಭವಾದ ಬಳಿಕ ಬಿಜೆಪಿ ಸ್ಪಷ್ಟವಾದ ಮುನ್ನಡೆ ಪಡೆಯಿತು. ಬಳಿಕ ಬಿಜೆಪಿ ಹಿನ್ನಡೆಗೆ ಬಂದಿಲ್ಲ.
ರಾಜ್ಯದಲ್ಲಿ ಸದ್ಯ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮಾತ್ರ ಹಿನ್ನಡೆ ಅನುಭವಿಸಿಲ್ಲ. ಚಿಂದ್ವಾರಾ ಕ್ಷೇತ್ರದಲ್ಲಿ 76 ವರ್ಷದ ಕಾಂಗ್ರೆಸ್ ನಾಯಕ ಕಮಲ್ ನಾಥ್ ಎದುರಾಳಿ ಬಿಜೆಪಿಯ ವಿವೇಕ್ ಬಂಟಿ ಶಾಹೂ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ.
ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಿದ್ದವು. ಕಾಂಗ್ರೆಸ್ ಸಹ ಹಲವು ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ನೀಡಿ, ರಾಜ್ಯದಲ್ಲಿ ಅಧಿಕಾರ ಪಡೆಯುವ ಉತ್ಸಾಹದಲ್ಲಿತ್ತು.
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಆದ್ದರಿಂದ ಜನರು ಬಿಜೆಪಿಯನ್ನು ತಿರಸ್ಕಾರ ಮಾಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಅಂದಾಜಿಸಿದ್ದರು. ಆದರೆ ಬಿಜೆಪಿ ಸ್ಪಷ್ಟ ಬಹುಮತವನ್ನು ಪಡೆಯುವ ನಿರೀಕ್ಷೆ ಇದ್ದು, ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ.












Click it and Unblock the Notifications