ಮಧ್ಯಪ್ರದೇಶ ಚುನಾವಣೆ; ಕೇಂದ್ರ ಸಚಿವರು, ಸಂಸದರನ್ನು ಕಣಕ್ಕಿಳಿಸಿದ ಬಿಜೆಪಿ!

ಭೋಪಾಲ್, ನವೆಂಬರ್ 15: ಮಧ್ಯಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆ ನವೆಂಬರ್ 17ರಂದು ನಡೆಯಲಿದೆ. ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಅಚ್ಚರಿಯ ಹೆಜ್ಜೆಯನ್ನು ಇಟ್ಟಿದೆ. ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಸಂಸದರು, ಕೇಂದ್ರ ಸಚಿವರನ್ನು ಸಹ ಕಣಕ್ಕಿಳಿಸಿದೆ.

ಹಾಲಿ ಮಧ್ಯಪ್ರದೇಶ ರಾಜ್ಯದಲ್ಲಿ ಬಿಜೆಪಿಯೇ ಆಡಳಿತ ಪಕ್ಷ. 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರಂದು ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಮತ್ತೆ ಅಧಿಕಾರ ಹಿಡಿಯಬೇಕು ಎಂಬುದು ಬಿಜೆಪಿ ತಂತ್ರವಾಗಿದೆ.

madhya-pradesh-bjp-mp-ministers

ಬಿಜೆಪಿ ಅಚ್ಚರಿಯ ತಂತ್ರ; ಈ ಬಾರಿಯ ಚುನಾವಣೆಗೆ ಬಿಜೆಪಿ 7 ಸಂಸದರು, 3 ಕೇಂದ್ರ ಸಚಿವರು, ಬಿಜೆಪಿಯ ಪ್ರಧಾನ ಕಾರ್ಯದರ್ಶಿಯನ್ನು ಚುನಾವಣಾ ಕಣಕ್ಕೆ ಇಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಸಮಾವೇಶಗಳ ಸಂಖ್ಯೆ ಹೆಚ್ಚು ಮಾಡಿದೆ. ಇವೆಲ್ಲವೂ ಪಕ್ಷ ಮತ್ತೆ ಅಧಿಕಾರ ಪಡೆಯಲು ಮಾಡಿದ ತಂತ್ರಗಳು ಎಂದು ವಿಶ್ಲೇಷಿಸಲಾಗುತ್ತಿದೆ.

ವಯಸ್ಸು, ಕುಟುಂಬ ರಾಜಕೀಯ ಮುಂತಾದ ವಿಚಾರಗಳನ್ನು ಬದಿಗಿಟ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. 70 ವರ್ಷ ದಾಟಿದ 14 ಅಭ್ಯರ್ಥಿಗಳಿಗೆ ಪಕ್ಷವು ಟಿಕೆಟ್ ನೀಡಿರುವುದು ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿಯೂ ಸಹ ಅಚ್ಚರಿಯನ್ನು ಮೂಡಿಸಿದೆ. 80 ವರ್ಷ ಮೀರಿದ ಒಬ್ಬರು ಸಹ ಕಣದಲ್ಲಿದ್ದಾರೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಿದ ಪಕ್ಷ ಹೀನಾಯ ಸೋಲು ಕಂಡು ಅಧಿಕಾರ ಕಳೆದುಕೊಂಡಿತ್ತು. ಆದ್ದರಿಂದ ಮಧ್ಯಪ್ರದೇಶದಲ್ಲಿ ಆ ತಪ್ಪು ಮಾಡದೇ ವಯಸ್ಸನ್ನು ನೋಡದೇ ಹಿರಿಯರಿಗೆ ಮಣೆ ಹಾಕಿದೆ.

ಹಾಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ 2019ರ ಲೋಕಸಭಾ ಚುನಾವಣೆಯ ವೇಳೆ 75 ವರ್ಷ ಮೀರಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದರು. ಎಲ್. ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮುಂತಾದ ಹಿರಿಯರಿಗೆ ಟಿಕೆಟ್ ಕೈತಪ್ಪಿತ್ತು.

ರಾಜ್ಯದ ರಾಜಕೀಯ ವಿಶ್ಲೇಷಕ, ಪತ್ರಕರ್ತ ರಾಕೇಶ್ ದೀಕ್ಷಿತ್, "ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮತ್ತೆ ಪಡೆಯಬೇಕಿದೆ. ಆದ್ದರಿಂದ ಪರೀಕ್ಷೆಗಳನ್ನು ಮಾಡಲು ಮುಂದಾಗಿಲ್ಲ. ಗೆಲ್ಲುವ ಅಭ್ಯರ್ಥಿಗಳಿಗೆ ವಯಸ್ಸಿನ ಅಂತರವನ್ನು ಮೀರಿ ಟಿಕೆಟ್ ನೀಡಲಾಗಿದೆ" ಎಂದು ಹೇಳಿದ್ದಾರೆ.

2020ರ ಫೆಬ್ರವರಿಯಲ್ಲಿ ಪಕ್ಷ 50 ವರ್ಷದ ವಿ. ಡಿ. ಶರ್ಮಾರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ಹೊಸ ಮುಖಗಳಿಗೆ ಆದ್ಯತೆ ಎಂಬ ಸಂದೇಶ ನೀಡಿತು. ಆದರೆ ಈಗ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ತಂತ್ರವನ್ನು ಬದಲಾವಣೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಧ್ಯಪ್ರದೇಶದ ಬಿಜೆಪಿ ಚುನಾವಣಾ ವೀಕ್ಷಕರಾದ ಗಿರಿಜಾ ಶಂಕರ್ ಮಾತನಾಡಿ, "ಬಿಜೆಪಿ 70 ವರ್ಷ ದಾಟಿದವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಅಧಿಕೃತವಾಗಿ ಹೇಳಿಲ್ಲ. ಈ ಕುರಿತು ಆದೇಶವನ್ನು ಹೊರಡಿಸಿಲ್ಲ. ರಾಜಕೀಯ ಪಕ್ಷಕ್ಕೆ ಗೆಲ್ಲುವುದು ಮುಖ್ಯವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

ರಾಜ್ಯದ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಇದಕ್ಕೆ ಹೊರತಾಗಿಲ್ಲ ಪಕ್ಷ 70 ವರ್ಷ ಮೀರಿದ 9 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅತಿ ಹಿರಿಯ ಅಭ್ಯರ್ಥಿಗೆ 77 ವರ್ಷ ವಯಸ್ಸು. ಆದರೆ ಪಕ್ಷ ಹಿರಿಯರಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿರಲಿಲ್ಲ.

2018ರ ಚುನಾವಣೆಯ ಬಳಿಕ ಕಾಂಗ್ರೆಸ್ ಎಸ್‌ಪಿ, ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು. ಆದರೆ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಅವರ ಬೆಂಬಲಿಗರಾದ 20ಕ್ಕೂ ಹೆಚ್ಚು ಶಾಸಕರು ಪಕ್ಷ ತೊರೆದ ಕಾರಣ ಮುಖ್ಯಮಂತ್ರಿ ಕಮಲ್‌ ನಾಥ್ ಸರ್ಕಾರ 2020ರಲ್ಲಿ ಪತನಗೊಂಡಿತು.

ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಶಿವರಾಜ್‌ ಸಿಂಗ್ ಚೌವ್ಹಾಣ್ ಮುಖ್ಯಮಂತ್ರಿಯಾದರು. ಈಗ ಚುನಾವಣೆ ಎದುರಾಗಿದೆ. ಆದರೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎಂಬ ಮಾತು ಕೇಳಿ ಬರುತ್ತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿವೆ ಎಂದು ಹೇಳುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+