Madhya Pradesh Election 2023: ಟೈಮ್ಸ್ ನೌ- ನವಭಾರತ್ ಸಮೀಕ್ಷೆ ಹೇಳುತ್ತಿರುವುದೇನು? ಅಂಕಿಅಂಶ, ವಿವರ ತಿಳಿಯಿರಿ
ನವದೆಹಲಿ, ಸೆಪ್ಟೆಂಬರ್ 30: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ (Madhya Pradesh Assembly Election 2023) ಇನ್ನೆರಡು ತಿಂಗಳು ಬಾಕಿ ಇದೆ. ಆಡಳಿತಾರೂಢ ಬಿಜೆಪಿ ( BJP ) ಹಾಗೂ ಕಾಂಗ್ರೆಸ್ ( Congress ) ಪಕ್ಷಗಳ ನಡುವೆ ಮತ್ತೊಮ್ಮೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವುದು ನಿಶ್ಚಿತವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಹಣಾಹಣಿ ಇದೆ ಎಂದು ಟೈಮ್ಸ್ ನೌ- ನವಭಾರತ್ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿ ನಡೆಸಲಿವೆ. ಎರಡೂ ರಾಷ್ಟ್ರೀಯ ಪಕ್ಷಗಳು ಸಮಬಲವನ್ನು ಸಾಧಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.

ಬಿಜೆಪಿ ತನ್ನ ಚುನಾವಣಾ ತಂತ್ರವನ್ನು ಬದಲಿಸಿದ್ದರೂ, ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ವಿಶ್ವಾಸ ಮೂಡಿರುವುದು ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ಟೈಮ್ಸ್ ನೌ-ನವಭಾರತ್ ಅಭಿಪ್ರಾಯ ಸಂಗ್ರಹವನ್ನು ಮಾಡುವ ಮೂಲಕ ಮಹತ್ವದ ಸಮೀಕ್ಷೆಯನ್ನು ಹೊರಹಾಕಿದೆ.
ಸಮೀಕ್ಷೆಯ ಪ್ರಕಾರ, ಎರಡೂ ಪಕ್ಷಗಳು ಸಮಬಲದ ಹೋರಾಟವನ್ನು ನಡೆಸಲಿವೆ. ಸೆಪ್ಟೆಂಬರ್ 20ರ ವರೆಗೆ ಸಮೀಕ್ಷೆ ನಡೆದಿದೆ. ಎರಡು ತಿಂಗಳ ಅಂಕಿಅಂಶ ಆಧರಿಸಿ ಈ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಲಾಗಿದೆ.
ರಾಜ್ಯದಲ್ಲಿ ಆಡಳಿತ ಪಕ್ಷದ ವಿರುದ್ಧ ಜನರಲ್ಲಿ ಆಕ್ರೋಶ ಕಂಡುಬರುತ್ತಿದೆ. ಒಂದು ವೇಳೆ, ಕಾಂಗ್ರೆಸ್ ಪಕ್ಷವು ಸರ್ಕಾರ ರಚನೆ ಮಾಡುವಷ್ಟು ಸೀಟು ಗಳಿಸಿದರೂ, ಕಳೆದ ಬಾರಿಯಂತೆ ಈ ಬಾರಿಯೂ ಹೋರಾಟ ನಡೆಸಲೇಬೇಕು ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಯಾವ ಪಕ್ಷಕ್ಕೆ ಎಷ್ಟು ಸೀಟು?
ಮಧ್ಯಪ್ರದೇಶ ವಿಧಾನಸಭೆಯಲ್ಲಿ ಒಟ್ಟು 230 ಸೀಟುಗಳಿವೆ. ರಾಜ್ಯದಲ್ಲಿ ಈಗ ವಿಧಾನಸಭೆ ಚುನಾವಣೆ ನಡೆದರೆ ಬಿಜೆಪಿ 102 ರಿಂದ 110 ಸ್ಥಾನ ಗಳಿಸಬಹುದು. ಕಾಂಗ್ರೆಸ್ 118 ರಿಂದ 128 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಇತರೆ ಪಕ್ಷಗಳು ಎರಡು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
2023ರ ಚುನಾವಣೆಯಲ್ಲಿ ಬಿಜೆಪಿ ಶೇ.42.8ರಷ್ಟು ಮತಗಳನ್ನು ಪಡೆಯಬಹುದು. ಇದೇ ವೇಳೆ, ಕಾಂಗ್ರೆಸ್ ಶೇ.43.8ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಇತರ ಪಕ್ಷಗಳು 13.40 ರಷ್ಟು ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಗಳು ಕಣಕ್ಕೆ
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಬಲ ನಾಯಕರನ್ನೇ ಕಣಕ್ಕಿಳಿಸಿದೆ. ಮೂವರು ಕೇಂದ್ರ ಸಚಿವರ ಜತೆಗೆ 7 ಸಂಸದರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಈಗ ಬಂದಿರುವ ಸಮೀಕ್ಷೆಗಳು ಬಿಜೆಪಿಗೆ ಹಿನ್ನೆಡೆಯಾಗಲಿದೆ ಹೇಳುತ್ತಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೊಸ ತಂತ್ರಕ್ಕೆ ಕೈಹಾಕಿದೆ.

ಕೇಂದ್ರ ಸಚಿವರಾದ ನರೇಶ್ ತೋಮರ್, ಪ್ರಲ್ಹಾದ್ ಸಿಂಗ್ ಪಟೇಲ್, ಫಗ್ಗನ್ ಸಿಂಗ್ ಕುಲಸ್ತೆ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದರೊಂದಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರನ್ನೂ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.
ಬಿಜೆಪಿ ಇದುವರೆಗೆ ಎರಡು ಪಟ್ಟಿಗಳನ್ನು ಪ್ರಕಟಿಸಿದೆ. ಆಗಸ್ಟ್ 17 ರಂದು ಮೊದಲ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಅದರಲ್ಲಿ 39 ಮತ್ತು ಸೋಮವಾರದ ಪಟ್ಟಿಯಲ್ಲಿ 39 ಹೆಸರುಗಳನ್ನು ಪ್ರಕಟಿಸಲಾಗಿತ್ತು. ಚುನಾವಣೆ ಘೋಷಣೆಯಾಗುವ ಮುನ್ನವೇ ಬಿಜೆಪಿ ಮೊದಲ ಬಾರಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

ಸಮೀಕ್ಷೆ ಬಗ್ಗೆ ಬಿಜೆಪಿ-ಕಾಂಗ್ರೆಸ್ ಹೇಳಿದ್ದೇನು?
ಚುನಾವಣಾ ಪೂರ್ವ ಪ್ರತಿಕ್ರಿಯಿಸಿರುವ ಬಿಜೆಪಿ, 'ಸೆ.20ರ ವರೆಗಿನ ಸಮೀಕ್ಷೆ ಇದಾಗಿದೆ. ಸೆ.20ರ ನಂತರ ಚುನಾವಣಾ ರಣತಂತ್ರವನ್ನು ನಾವು ಬದಲಿಸಿಕೊಂಡಿದ್ದೇವೆ. ಇದು ಸಕಾರಾತ್ಮಕ ಪರಿಣಾಮ ಬೀರಲಿದೆ' ಎಂದು ಹೇಳಿಕೊಂಡಿದೆ.
ಇದೇ ವೇಳೆ, ಪ್ರತಿಕ್ರಿಯಿರುವ ಕಾಂಗ್ರೆಸ್, 'ಮಧ್ಯಪ್ರದೇಶದಲ್ಲಿ 140 ಸ್ಥಾನ ಗೆಲ್ಲುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದೆ.












Click it and Unblock the Notifications