MK Stalin: 16 ಮಕ್ಕಳನ್ನು ಯಾಕೆ ಹೊಂದಬಾರ್ದು.? ಎಂ.ಕೆ.ಸ್ಟಾಲಿನ್ ಅಚ್ಚರಿ ಹೇಳಿಕೆ
MK Stalin: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಹಿಂದಿ ದಿವಸ್ ಅನ್ನು ಒತ್ತಾಯಪೂರ್ವಕವಾಗಿ ಹೇಳಬೇಡಿ ಎಂದು ಹೇಳುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳೆದಿದ್ದರು. ಇದೀಗ ಎಲ್ಲಾ ಕಡೆ 16 ಮಕ್ಕಳನ್ನು ಹೊಂದಿ ಅಷ್ಟೇ ಸಂಪದ್ಭರಿತವಾದ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು. ಈಗ ಅಂತಹ ಕಾಲ ಸನ್ನಿಹಿತ ಆಗಿದೆ ಎಂದು ನವದಂಪತಿಗಳಿಗೆ ಸಲಹೆ ನೀಡಿದರು.
ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಲು ಪ್ರತಿಪಾದಿಸಿದ ನಂತರ, ಇದೀಗ ಇಂದು (ಅಕ್ಟೋಬರ್ 21) ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮಿಳುನಾಡು ಜನರನ್ನುದ್ದೇಶಿಸಿ ಅದೇ ರೀತಿ ಅಂದರೆ 16 ಮಕ್ಕಳನ್ನು ಹೊಂದುವಂತೆ ಒತ್ತಾಯಿಸಿದ್ದಾರೆ.

ಚೆನ್ನೈನ ತಿರುವನ್ಮಿಯೂರಿನ ದರ್ಶನೀಶ್ವರ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಆಯೋಜಿಸಿದ್ದ 31 ಜೋಡಿ ವಿವಾಹಗಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮಿಳಿನ ಗಾದೆ ಮಾತಿನಂತೆ "ಪದಿನಾರುಂ ಪೆಟ್ರು ಪೆರು ವಜ್ವು ವಜ್ಗ" ಎಂದು ಹೇಳುತ್ತದೆ. ಅಂದರೆ ಜನರು ಪಶು, ಪತ್ನಿ, ಮನೆತುಂಬಾ ಮಕ್ಕಳು, ವಿದ್ಯೆ ಹೀಗೆ 16 ವಿವಿಧ ರೀತಿಯ ಸಂಪತ್ತನ್ನು ಹೊಂದಿರಬೇಕು. ಇಂದಿನ ಕಾಲದಲ್ಲಿ ಮಕ್ಕಳೇ ಸಂಪತ್ತು. ಹಾಗಾಗಿ ಮನುಷ್ಯನ ಜೀವಿತಾವಧಿಯಲ್ಲಿ ಸಂಪತ್ತು ಹೆಚ್ಚಾಗಬೇಕಾದರೆ, ಮಕ್ಕಳು ಹೆಚ್ಚಾಗಿರಬೇಕೆಂದು ಪ್ರತಿಪಾದಿಸಿದರು.
ಇನ್ನು ಕೆಲವು ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ಲೋಕಸಭೆ ಕ್ಷೇತ್ರಗಳು ಹೆಚ್ಚಾಗಿವೆ. ಅವರೇ ನಮ್ಮನ್ನು ಆಳುತ್ತಿದ್ದಾರೆ. ಆದರೆ ನಾವು ಜನಸಂಖ್ಯೆ ನಿಯಂತ್ರಣ ಹೇರಿಕೊಂಡಿದ್ದರ ಪರಿಣಾಮ ತಮಿಳುನಾಡಿನಲ್ಲಿ ಕ್ಷೇತ್ರಗಳು ಕಡಿಮೆಯಾಗುತ್ತಿವೆ. ತಮಿಳು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಕಡಿಮೆ ಮಕ್ಕಳನ್ನು ಹೊಂದಲು ನಮ್ಮನ್ನು ಏಕೆ ನಿರ್ಬಂಧಿಸಬೇಕು? ಜನಸಂಖ್ಯೆ ಆಧಾರದ ಮೇಲೆ ಸಂಸತ್ ಸ್ಥಾನಗಳನ್ನು ನಿರ್ಧರಿಸುನಾವುದರಿಂದ 16 ಮಕ್ಕಳನ್ನು ಏಕೆ ಹೊಂದಬಾರದು? ಎಂದು ಪ್ರಶ್ನಿಸಿದರು.
ಆಂಧ್ರ ಸರ್ಕಾರವು ವಯಸ್ಸಾದ ಜನಸಂಖ್ಯೆಯಿಂದಾಗಿ ಹೆಚ್ಚಿನ ಮಕ್ಕಳನ್ನು ಹೊಂದಿರುವ ಕುಟುಂಬಗಳನ್ನು ಪ್ರೋತ್ಸಾಹಿಸಲು ಯೋಜಿಸುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಇತ್ತೀಚೆಗೆ ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲ, ದಕ್ಷಿಣ ಭಾರತದ ರಾಜ್ಯಗಳ ಜನರನ್ನು ಹೆಚ್ಚು ಮಕ್ಕಳನ್ನು ಹೊಂದುವಂತೆ ಒತ್ತಾಯಿಸಿದ್ದರು.
ಹೀಗೆ ಒಂದಲ್ಲ ಒಂದು ಹೇಳಿಕೆ ನೀಡುವ ಮೂಲಕ ಎಂ.ಕೆ.ಸ್ಟಾಲಿನ್ ಅವರು ಸುದ್ದಿಯಲ್ಲಿದ್ದರು. ಇತ್ತೀಚೆಗಷ್ಟೇ ಹಿಂದಿ ದಿವಸ್ ಆಚರಣೆ ಬಗ್ಗೆ ಪ್ರತಿಕ್ರಿಯಿಸಿ, ಭಾರತೀಯ ಸಂವಿಧಾನವು ಯಾವುದೇ ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಪರಿಗಣಿಸಿ, ವಿಶೇಷ ಸ್ಥಾನಮಾನ ನೀಡಿಲ್ಲ. ನಮ್ಮದು ಬಹುಭಾಷಾ, ಬಹು ವೈವಿಧ್ಯತೆಯ ರಾಷ್ಟ್ರ ಎನ್ನುವುದೇ ನಮ್ಮ ಸಂಭ್ರಮ. ಇದನ್ನು ರಾಜ್ಯಪಾಲರು ಅರಿಯಬೇಕಿದೆ ಎಂದು ಆಕ್ರೊಶ ಹೊರಹಾಕಿದ್ದರು.












Click it and Unblock the Notifications