LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್‌ಡೇಟ್: ಎಲ್‌ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್
LPG Gas: ದೇಶಾದ್ಯಂತ ಅಡುಗೆ ಅನಿಲದ ತೀವ್ರ ಅಭಾವ ಎದುರಾದ ಬೆನ್ನಲ್ಲೇ, ಪರಿಸ್ಥಿತಿಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಹತ್ವದ ಬದಲಾವಣೆಗೆ ಮುಂದಾಗಿವೆ. ಸದ್ಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ 14.2 ಕೆಜಿ ತೂಕದ ಗೃಹ ಬಳಕೆ ಸಿಲಿಂಡರ್‌ಗಳ ಬದಲಿಗೆ, ಕೇವಲ 10 ಕೆಜಿ ಅನಿಲ ತುಂಬಿದ ಸಿಲಿಂಡರ್‌ಗಳನ್ನು ವಿತರಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.
ಗ್ಯಾಸ್ ಕೊರತೆಯಿಂದಾಗಿ ಸಿಲಿಂಡರ್ ಬುಕಿಂಗ್ ಮಾಡಿದರೂ ವಿತರಣೆಯಲ್ಲಿ ವಿಳಂಬ ಆಗುತ್ತಿರುವುದು ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ತೈಲ ಕಂಪನಿಗಳು ಈ 'ಶಾರ್ಟ್ ಕಟ್' ಮಾರ್ಗವನ್ನು ಅನುಸರಿಸಲು ಯೋಜಿಸಿವೆ.

ಏನಿದು ಹೊಸ ಪ್ರಸ್ತಾವನೆ?
ತೂಕ ಇಳಿಕೆ: ಹಳೆಯ ಸಿಲಿಂಡರ್‌ಗಳಲ್ಲೇ 14.2 ಕೆಜಿ ಬದಲಿಗೆ 10 ಕೆಜಿ ಗ್ಯಾಸ್ ತುಂಬುವುದು.
ಉದ್ದೇಶ: ಲಭ್ಯವಿರುವ ಅನಿಲವನ್ನು ಹೆಚ್ಚಿನ ಸಂಖ್ಯೆಯ ಕುಟುಂಬಗಳಿಗೆ ಹಂಚುವುದು.
ಪೂರೈಕೆ: ಗ್ಯಾಸ್ ಅಭಾವದ ನಡುವೆಯೂ ಎಲ್ಲರಿಗೂ ಸಿಲಿಂಡರ್ ಸಿಗುವಂತೆ ಮಾಡುವುದು ಇದರ ಮುಖ್ಯ ಗುರಿ.
ಸಿಲಿಂಡರ್‌ನಲ್ಲಿ ತುಂಬುವ ಅನಿಲದ ಪ್ರಮಾಣ ಕಡಿಮೆಯಾದಲ್ಲಿ, ಸಹಜವಾಗಿಯೇ ಅದರ ಬೆಲೆಯಲ್ಲೂ ಇಳಿಕೆಯಾಗುವ ಸಾಧ್ಯತೆಯಿದೆ. ತಜ್ಞರ ಪ್ರಕಾರ, ಅನಿಲದ ಪ್ರಮಾಣ ಇಳಿಸಿದಾಗ ನಿಯಮದಂತೆ ದರವನ್ನು ಪರಿಷ್ಕರಿಸಬೇಕಾಗುತ್ತದೆ. ಸಾಮಾನ್ಯವಾಗಿ ಒಂದು ಕುಟುಂಬಕ್ಕೆ 14.2 ಕೆಜಿ ಸಿಲಿಂಡರ್ 35 ರಿಂದ 40 ದಿನ ಬಂದರೆ, 10 ಕೆಜಿ ಸಿಲಿಂಡರ್ ಸುಮಾರು ಒಂದು ತಿಂಗಳ ಕಾಲ ಬರಬಹುದು ಎಂದು ಅಂದಾಜಿಸಲಾಗಿದೆ.
ಅಭಾವಕ್ಕೆ ಕಾರಣವೇನು?
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಅನಿಲ ಸಾರಿಗೆಯಲ್ಲಿ ಅಡಚಣೆ ಉಂಟಾಗಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಪೂರೈಕೆ ವ್ಯತ್ಯಯವಾಗಿದ್ದು, ಭಾರತದ ಮೇಲೂ ಇದರ ಪ್ರಭಾವ ಬೀರಿದೆ. ವಾಣಿಜ್ಯ ಸಿಲಿಂಡರ್‌ಗಳ ಲಭ್ಯತೆ ಇಲ್ಲದ ಕಾರಣ ಈಗಾಗಲೇ ಹಲವು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಸಂಕಷ್ಟಕ್ಕೆ ಸಿಲುಕಿವೆ.
ಸವಾಲುಗಳೇನು?
ಈ ನಿರ್ಧಾರ ಜಾರಿಗೆ ತರುವುದು ಅಷ್ಟು ಸುಲಭವಲ್ಲ. ಸಿಲಿಂಡರ್‌ಗಳ ಮೇಲಿರುವ ಲೇಬಲ್ ಬದಲಿಸುವುದು, ರೀಫಿಲ್ಲಿಂಗ್ ಕೇಂದ್ರಗಳಲ್ಲಿ ತಾಂತ್ರಿಕ ಬದಲಾವಣೆ ಮಾಡುವುದು ಮತ್ತು ರೆಗ್ಯುಲೇಟರಿ ಅನುಮತಿ ಪಡೆಯುವುದು ಅನಿವಾರ್ಯವಾಗಿದೆ. ಪ್ರಸ್ತುತ ಈ ಯೋಜನೆಯು ಪ್ರಸ್ತಾವನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ.












Click it and Unblock the Notifications